ಶಿರಾ: ಸರ್ಕಾರದ ವೈಫಲ್ಯದ ವಿರುದ್ಧ ಬೆಂಗಳೂರಿನಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ.ರಾಜ್ಯದ ಬರ ಅಧ್ಯಯನ ಮುಗಿದ ಬಳಿಕ ಪಕ್ಷದ ಶಾಸಕರು ಮತ್ತು ಮುಖಂಡರ ಜತೆ ಚರ್ಚೆ ನಡೆಸಿ ಧರಣಿ ಹಮ್ಮಿಕೊಳ್ಳಲಾಗುತ್ತದೆ ಎಂದೂ ಅವರು ಹೇಳಿದ್ದಾರೆ.
ತಾಲೂಕಿನ ಲಿಂಗದಹಳ್ಳಿ ರಸ್ತೆಯಲ್ಲಿ ಬರ ಅಧ್ಯಯನದ ಅಂಗವಾಗಿ ಒಣಗಿರುವ ರಾಗಿ ಹೊಲವನ್ನು ವೀಕ್ಷಿಸಿದ ಬಳಿಕ ಶಿರಾದ ಸೇವಾ ಸದನದಲ್ಲಿ ಸುದ್ದಿಗಾರರ ಜತೆ ಯಡಿಯೂರಪ್ಪ ಮಾತನಾಡಿದರು.
ಜಿಲ್ಲೆಯಲ್ಲಿ ಇಬ್ಬರು ಸಚಿವರಿದ್ದರೂ ಸಹ ರೈತರ ಬಳಿಗೆ ಹೋಗಿ ವಾಸ್ತವ ಸ್ಥಿತಿಯನ್ನು ನೋಡುವ ಕೆಲಸ ಮಾಡಿಲ್ಲ. ಸರಕಾರ ರೈತರ ನೋವಿಗೆ ಸ್ಪಂದಿಸುತ್ತಿಲ್ಲ. ಈ ಬಗ್ಗೆ ಬೆಳಗಾವಿ ಅಧಿವೇಶನದಲ್ಲಿ ಬಿಜೆಪಿ ಶಾಸಕರು ಸರ್ಕಾರದ ಕಿವಿ ಹಿಂಡುವ ಕೆಲಸ ಮಾಡುತ್ತಾರೆ ಎಂದರು.
ಸರಕಾರ. ರೈತರ ಬದುಕಿನ ಜತೆ ಚೆಲ್ಲಾಟವಾಡುತ್ತಿದೆ. ಮುಖ್ಯಮಂತ್ರಿ ಮತ್ತು ಉಪಮುಖ್ಯಮಂತ್ರಿ ರೈತರ ನೋವಿಗೆ ಸ್ಪಂದಿಸಿ ಪರಿಹಾರ ನೀಡದೆ ಕೇಂದ್ರದ ಕಡೆ ಬೆಟ್ಟುಮಾಡಿ ತೋರಿಸುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಮಾಜಿ ಸಿಎಂ ಹೇಳಿದರು.
ವಿಧಾನ ಪರಿಷತ್ ಸದಸ್ಯ ಚಿದಾನಂದ ಎಂ.ಗೌಡ,ಶಾಸಕ ಜ್ಯೋತಿಗಣೇಶ್, ಸುರೇಶ್ ಗೌಡ, ಮಾಜಿ ಶಾಸಕ ಡಾ.ಸಿ.ಎಂ.ರಾಜೇಶ್ ಗೌಡ, ಮುದ್ದಹನುಮೇಗೌಡ, ಡಾ.ಎಂ.ಆರ್.ಹುಲಿನಾಯ್ಕರ್, ಬಿಜೆಪಿ ಜಿಲ್ಲಾಧ್ಯಕ್ಷ ಬಿ.ಕೆ.ಮಂಜುನಾಥ್, ಚಂಗಾವರ ಮಾರಣ್ಣ, ನಗರ ಮೋರ್ಚಾ ಅಧ್ಯಕ್ಷ ನಟರಾಜು, ಗ್ರಾಮಾಂತರ ಮೋರ್ಚಾ ಅಧ್ಯಕ್ಷ ರಂಗಸ್ವಾಮಿ, ವಿಜಯರಾಜು, ಹುಣಸೇಹಳ್ಳಿ ಶಶಿಕುಮಾರ್, ಕೃಷ್ಣಮೂರ್ತಿ, ಮುಡಿಮಡು ಮಂಜುನಾಥ್, ಬರಗೂರು ಶಿವಕುಮಾರ್ ಇದ್ದರು.