►ಸೂಲಿಬೆಲೆ ಚಿಂತಕ ಅಲ್ಲ ದೇಶದ ಹಂತಕ: ವಿಕ್ಟರ್ ಮಾರ್ಟಿಸ್
ಪುತ್ತೂರು: ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ಸರಕಾರದ ಅರಾಜಕತೆಯ ವಿರುದ್ಧವಾಗಿ ರಾಜ್ಯಾದ್ಯಂತ ಎಸ್ ಡಿಪಿಐ ಹಮ್ಮಿಕೊಂಡಿರುವ ಪ್ರತಿಭಟನೆಯ ಭಾಗವಾಗಿ ಎಸ್ ಡಿಪಿಐ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿ ವತಿಯಿಂದ ಬೃಹತ್ ಕಾಲ್ನಡಿಗೆ ಜಾಥಾ ಹಾಗೂ ಪ್ರತಿಭಟನಾ ಸಭೆ ಶುಕ್ರವಾರ ನಡೆಯಿತು.
ದರ್ಬೆ ವೃತ್ತದಲ್ಲಿ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ ಪ್ರಾಸ್ತಾವಿಕ ಮಾತಿನೊದಿಗೆ ಎಸ್ ಡಿಪಿಐ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್ ಪುತ್ತೂರು ಪಕ್ಷದ ಧ್ವಜವನ್ನು ವಿಧಾನ ಸಭಾ ಕ್ಷೇತ್ರ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ರವರಿಗೆ ನೀಡುವ ಮೂಲಕ ಕಾಲ್ನಡಿಗೆ ಜಾಥಾಗೆ ಚಾಲನೆ ನೀಡಿದರು. ದರ್ಬೆಯಿಂದ ಪುತ್ತೂರು ಮುಖ್ಯ ರಸ್ತೆಯಾಗಿ ಸಾಗಿ ಮಿನಿ ವಿಧಾನಸೌಧ ಬಳಿಯ ಅಮರ್ ಜವಾನ್ ಚೌಕಿಯಲ್ಲಿ ಕೊನೆಗೊಂಡು ಪ್ರತಿಭಟನಾ ಸಭೆ ನಡೆಸಲಾಯಿತು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಜ್ಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಲತೀಫ್, ಮತದಾರರ ಸಮಸ್ಯೆಗಳನ್ನು ಪರಿಹರಿಸಬೇಕಾದ ಜನಪ್ರತಿನಿಧಿಗಳು ಹಿಜಾಬ್, ಕೇಸರಿ ರಾಷ್ಟ್ರೀಯ ಧ್ವಜ, ಕಾಶ್ಮೀರ್ ಫೈಲ್ಸ್, ಭಗವದ್ಗೀತೆ, ಹಲಾಲ್ ಮುಂತಾದ ಅನಗತ್ಯ ವಿಷಯಗಳ ಬಗ್ಗೆ ಚರ್ಚೆ ಮಾಡುತ್ತಾ ತಮ್ಮ ಜವಾಬ್ದಾರಿಯನ್ನು ಮರೆತಿದ್ದಾರೆ, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯವನ್ನು ಮರೆತು ಸಮಾಜದಲ್ಲಿ ಅರಾಜಕತೆ ಸೃಷ್ಟಿಸುತ್ತಿದ್ದಾರೆ ಎಂದರು.
ಎಸ್ ಡಿಪಿಐ ದ.ಕ ಜಿಲ್ಲಾ ಉಪಾಧ್ಯಕ್ಷ ವಿಕ್ಟರ್ ಮಾರ್ಟಿಸ್ ಮಾತನಾಡಿ, ಸೂಲಿಬೆಲೆಯಂತಹ ಸಂಘಪರಿವಾರದ ನಾಯಕರು ಚಿಂತಕ ಎಂಬ ಹಣೆಗೆ ಬೋರ್ಡ್ ಹಾಕಿ ಸಮಾಜವನ್ನು ಒಡೆಯುವ ಕೆಲಸ ಮಾಡುತ್ತಿದ್ದಾರೆ.ಇವರು ಚಿಂತಕ ಅಲ್ಲ ದೇಶದ ಹಂತಕ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸಮಿತಿ ಸದಸ್ಯರಾದ ರಿಯಾಝ್ ಕಡಂಬು, ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಮಾತನಾಡಿ ಸರಕಾರದ ವಿರುದ್ಧ ಕಿಡಿಕಾರಿದರು.
ಈ ಸಂದರ್ಭದಲ್ಲಿ ಪುತ್ತೂರು ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್, ಸುಳ್ಯ ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ಇಕ್ಬಾಳ್ ಬೆಳ್ಳಾರೆ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರ ಅದ್ಯಕ್ಷರಾದ ನಿಸಾರ್ ಕುದ್ರಡ್ ಕ, ಕಡಬ ಬ್ಲಾಕ್ ಅಧ್ಯಕ್ಷರಾದ ಬಶೀರ್ ಆತೂರು ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅಬ್ದುಲ್ ಹಮೀದ್ ಸಾಲ್ಮರ ಸ್ವಾಗತಿಸಿ, ರಹೀಂ ಪುತ್ತೂರು ವಂದಿಸಿದರು. ಎಂ.ಎ ರಫೀಕ್ ಕಾರ್ಯಕ್ರಮ ನಿರೂಪಿಸಿದರು.