ಅಧ್ಯಕ್ಷ ಸೀಸೀ ವಿರುದ್ಧ ಈಜಿಪ್ಟ್ ನಾದ್ಯಂತ ಪ್ರತಿಭಟನೆ

ಕೈರೊ: ಪೊಲೀಸ್ ಕಾರ್ಯಾಚರಣೆಗಳ ಹೊರತಾಗಿಯೂ ಅಧ್ಯಕ್ಷ‌ ಅಬ್ದುಲ್ ಫತೇಹ್ ಅಲಿ ಅಲ್ ಸಿಸಿಯನ್ನು ಉಚ್ಛಾಟಿಸಬೇಕೆಂದು ಆಗ್ರಹಿಸಿ ಈಜಿಪ್ಟ್ ನಲ್ಲಿ ಪ್ರತಿಭಟನೆಗಳು ಮುಂದುವರಿದಿದ್ದು, ಶುಕ್ರವಾರದಂದು 20 ಗ್ರಾಮಗಳಲ್ಲಿ ಪ್ರತಿಭಟನೆಗಳು‌ ಭುಗಿಲೆದ್ದಿವೆ.

ವ್ಯಾಪಕ ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿರುವ ರಾಜ್ಯದ ಮುಖ್ಯಸ್ಥನನ್ನು ಉಚ್ಛಾಟಿಸುವುದಕ್ಕಾಗಿ  ಶುಕ್ರವಾರವನ್ನು ‘ಕ್ರೋಧದ ದಿನ’ ಎಂಬುದಾಗಿ ಆಚರಿಸಬೇಕೆಂದು ಈಜಿಪ್ಟ್ ನಿಂದ ಸ್ವಯಂ ಗಡೀಪಾರುಗೊಂಡಿರುವ‌ ಮುಹಮ್ಮದ್ ಅಲಿ ನೀಡಿರುವ ಕರೆಗೆ ಪ್ರತಿಕ್ರಿಯೆಯಾಗಿ ಪ್ರತಿಭಟನೆಗಳು ಭುಗಿಲೆದ್ದಿವೆ.

- Advertisement -

ಪ್ರಸ್ತುತ ಸ್ಪೇನ್ ನಲ್ಲಿ ಸ್ವಯಂ ಗಡೀಪಾರಿನಲ್ಲಿರುವ ಅಲಿ, ಈಜಿಪ್ಟ್ ಅಧ್ಯಕ್ಷ ಸಿಸಿ ಮತ್ತು ಆತನ ಅನುಯಾಯಿಗಳು  ನಡೆಸುತ್ತಿರುವ ಭ್ರಷ್ಟಾಚಾರದ ಕುರಿತು ಬಿಡುಗಡೆಗೊಳಿಸಿದ  ವೀಡಿಯೊ ಸಾಕ್ಷ್ಯ ವೈರಲ್ ಆಗುವುದರೊಂದಿಗೆ ಕಳೆದ ವರ್ಷ ಸೆಪ್ಟಂಬರ್ 20 ರಂದು ಈಜಿಪ್ಟ್ ನಲ್ಲಿ ಅಪರೂಪದ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಅಧ್ಯಕ್ಷರ ಕುಟುಂಬ ಮತ್ತು ಸ್ನೇಹಿತರಿಗೆ  ಐಷಾರಾಮಿ ಮನೆಗಳನ್ನು ನಿರ್ಮಿಸುವುದೊಳಗೊಂಡಂತೆ ಹಲವು ಸರಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸುವುದರಲ್ಲಿ ಸಿಸಿಯೊಂದಿಗೆ ಹಲವು ವರ್ಷಗಳ‌ ಕಾಲ ಕೆಲಸ ಮಾಡಿದ್ದು ಈ ಸಂದರ್ಭದಲ್ಲಿ ಸಿಸಿ ನಡೆಸಿದ ವ್ಯಾಪಕ ಭ್ರಷ್ಟಾಚಾರವನ್ನು ತಾನು‌ ಕಂಡಿರುವುದಾಗಿ  ಈಜಿಪ್ಟ್ ನ ನಿರ್ಮಾಣ ಕಂಪೆನಿಯೊಂದರ ಒಡೆಯನಾಗಿದ್ದ ಅಲಿ ಬಹಿರಂಗಪಡಿಸಿದ್ದ. ಇದೀಗ ಈಜಿಪ್ಟ್ ಸರಕಾರದ  ಅಗತ್ಯ ವಸ್ತುಗಳ ಬೆಲೆಯೇರಿಕೆ ಮತ್ತು ಪರವಾನಿಗೆಯಿಲ್ಲದೆ ಕಟ್ಟಲಾದ ಮನೆಗಳ‌ ಧ್ವಂಸವನ್ನು ವಿರೋಧಿಸಿ ಆರಂಭವಾಗಲಿರುವ ಪ್ರತಿಭಟನೆಗಳಲ್ಲಿ ಭಾಗವಹಿಸುವಂತೆ ಅಲಿ ಕರೆ ನೀಡಿದ್ದ.

ಸರಕಾರವು ನಡೆಸುತ್ತಿರುವ ಮನೆಗಳ ಧ್ವಂಸ ಅಭಿಯಾನದಿಂದ ಕಡಿಮೆ ಆದಾಯದಲ್ಲಿ ಜೀವಿಸುವ ಸಾವಿರಾರು‌‌ ಮಂದಿ ಈಜಿಪ್ಟಿಯನ್ನರು ಸಂತ್ರಸ್ತರಾಗಿದ್ದಾರೆ. ಪರವಾನಿಗೆ ರಹಿತವಾಗಿ ಮನೆ ಕಟ್ಟಿರುವವರನ್ನು ತೆರವುಗೊಳಿಸಲಾಗುತ್ತಿದೆ ಅಥವಾ ಭಾರೀ ದಂಡವನ್ನು ವಿಧಿಸಲಾಗುತ್ತಿದೆ.

ಪ್ರತಿಭಟನೆಗಳ ಮೇಲೆ ಈಜಿಪ್ಟ್ ಸರಕಾರ ನಿಷೇಧ ಹೇರಿರುವ ಹೊರತಾಗಿಯೂ ಶುಕ್ರವಾರದಂದು ನಡೆದಿರುವ ಪ್ರತಿಭಟನೆಯು ಅಚ್ಚರಿದಾಯಕ ಎಂಬುದಾಗಿ ವಿಶ್ಲೇಷಕರು ವಿಶ್ಲೇಷಿಸಿದ್ದಾರೆ.

- Advertisement -