ನವದೆಹಲಿ: ಭಾರತದ ಬಹುಪಾಲು ರೈತರು ಕೇಂದ್ರ ಸರಕಾರ ತಂದಿರುವ ವಿವಾದಿತ ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿದ್ದಾರೆ. ನೀವು ಇದನ್ನು ಮನಸ್ಸಿನಲ್ಲಿ ಇಟ್ಟುಕೊಳ್ಳಿ ಎಂದು ರೈತ ನಾಯಕ ರಾಜೇಶ್ ಟಿಕಾಯತ್ ಅವರು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರು ಪ್ರಧಾನಿ ಮೋದಿಯವರನ್ನು ಭೇಟಿ ಮಾಡುವುದಕ್ಕೆ ಮೊದಲು ಸಂದೇಶ ರವಾನಿಸಿದ್ದಾರೆ.
ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತ ಒಂದು ವರುಷಕ್ಕೂ ಕಡಿಮೆ ಅವಧಿಯಲ್ಲಿ 700 ಜನ ರೈತರು ಬಲಿಯಾಗಿದ್ದಾರೆ ಎಂಬುದನ್ನು ಟಿಕಾಯತ್ ಪ್ರಮುಖವಾಗಿ ಸೂಚಿಸಿದ್ದಾರೆ. ಈ ಕಪ್ಪು ಕೃಷಿ ಕಾಯ್ದೆಗಳನ್ನು ಹಿಂಪಡೆಯಲೇಬೇಕು ಎಂಬುದು ನೆನಪಿರಲಿ. ಇದರತ್ತ ಮಾತುಕತೆಯಲ್ಲಿ ಬೆಳಕು ಬೀರಿ ಎಂದು ಟಿಕಾಯತ್ ಬೈಡನ್ ಅವರಿಗೆ ಮನವಿ ಮಾಡಿದ್ದಾರೆ.
ಅದೇ ವೇಳೆ ಶನಿವಾರ ನ್ಯೂಯರ್ಕ್ ನಲ್ಲಿ ಮೋದಿಯವರ ವಿರುದ್ಧ, ಕಪ್ಪು ಕೃಷಿ ಕಾಯ್ದೆಗಳ ವಿರುದ್ಧ, ಮೋದಿಯ ವಿರುದ್ಧ ಪ್ರತಿಭಟನೆ ನಡೆಸುವಂತೆ ಟಿಕಾಯತ್ ಅವರು ಅಮೆರಿಕ ವಾಸಿ ಭಾರತೀಯರಿಗೆ ಮನವಿ ಮಾಡಿಕೊಂಡಿದ್ದಾರೆ. ಭಾರತೀಯರು ತಮ್ಮ ವಾಹನಗಳಲ್ಲಿ ಶನಿವಾರ ರೈತ ಬಾವುಟ ಹಾರಿಸಿರಿ ಹಾಗೂ ರೈತನಿಲ್ಲದೆ ಆಹಾರವಿಲ್ಲ ಎಂಬ ಬ್ಯಾನರ್ ಪ್ರದರ್ಶಿಸಿ ಎಂದು ಟಿಕಾಯತ್ ಅವರು ವೀಡಿಯೋ ಮನವಿ ಕಳುಹಿಸಿದ್ದಾರೆ.
ನಾವು ಮಳೆ, ಗಾಳಿ, ಬಿಸಿಲು ಲೆಕ್ಕಿಸದೆ 10 ತಿಂಗಳುಗಳಿಂದ ಬೀದಿಯಲ್ಲಿ ಪ್ರತಿಭಟಿಸುತ್ತಿದ್ದೇವೆ. ನಮ್ಮ ಜನಸಾಯುತ್ತಿದ್ದಾರೆ. ಈ ಸರಕಾರಕ್ಕೆ ಹೃದಯವಿಲ್ಲ, ಗಮನಿಸಿ ಎಂದು ವೀಡಿಯೋ ಮೆಸೇಜ್ ನಲ್ಲಿ ಹೇಳಲಾಗಿದೆ.