ಅಡಿಕೆ ಆಮದು ವಿರೋಧಿ ಸತ್ಯಾಗ್ರಹ ಬಲವಂತದಿಂದ ಅಂತ್ಯ: ಬ್ರಿಜೇಶ್‌ ಕಾಳಪ್ಪ ಕಿಡಿ

Prasthutha|

ಶಿವಮೊಗ್ಗ: ಭೂತಾನ್’ನಿಂದ ಅಡಿಕೆ ಆಮದು ಖಂಡಿಸಿ ಶಿವಮೊಗ್ಗದ ಎಎಪಿ ನಾಯಕಿ ಟಿ. ನೇತ್ರಾವತಿಯವರು ನಡೆಸುತ್ತಿದ್ದ ಪ್ರತಿಭಟನೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆ ಬಲವಂತದಿಂದ ತೆರವುಗೊಳಿಸಿದ್ದು ಖಂಡನೀಯ ಎಂದು ಪಕ್ಷದ ಮುಖಂಡ ಹಾಗೂ ಸುಪ್ರೀಂ ಕೋರ್ಟ್‌ ಹಿರಿಯ ವಕೀಲ ಬ್ರಿಜೇಶ್‌ ಕಾಳಪ್ಪ ಹೇಳಿದರು.

- Advertisement -

ಮಾಧ್ಯಮಗಳ ಜೊತೆ ಮಾತನಾಡಿದ ಬ್ರಿಜೇಶ್‌ ಕಾಳಪ್ಪ, “ಕೊಳೆರೋಗ, ಹಳದಿರೋಗ, ಎಲೆಚುಕ್ಕಿ ರೋಗ ಮುಂತಾದ ಸಮಸ್ಯೆಗಳಿಂದ ಅಡಿಕೆ ಬೆಳೆಗಾರರು ತತ್ತರಿಸಿ ಹೋಗಿದ್ದಾರೆ. ಗಾಯದ ಮೇಲೆ ಬರೆ ಎಂಬಂತೆ ಭೂತಾನ್‌’ನಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳಲು ಸರ್ಕಾರ ಮುಂದಾಗಿದೆ. ಇದನ್ನು ಖಂಡಿಸಿ ಎಎಪಿ ಮುಖಂಡರಾದ ಟಿ.ನೇತ್ರಾವತಿಯವರು ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಎದುರು ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದರು. ಜಿಲ್ಲಾಡಳಿತ ಹಾಗೂ ಪೊಲೀಸ್‌ ಇಲಾಖೆಯು ಬಲವಂತದಿಂದ ಎಳನೀರು ಕುಡಿಸಿ, ಕಾರ್ಯಕರ್ತರನ್ನು ಬಂಧಿಸುವ ಮೂಲಕ ಪ್ರತಿಭಟನೆಯನ್ನು ಹತ್ತಿಕ್ಕಿದೆ” ಎಂದು ಹೇಳಿದರು.

“ಗೃಹ ಸಚಿವ ಆರಗ ಜ್ಞಾನೇಂದ್ರರವರಿಗೆ ತಾಕತ್ತಿದ್ದರೆ ಭೂತಾನ್‌ ಅಡಿಕೆ ಆಮದನ್ನು ಗಟ್ಟಿ ಧ್ವನಿಯಲ್ಲಿ ವಿರೋಧಿಸುವ ಧೈರ್ಯ ತೋರಲಿ. ಅದರ ಬದಲು, ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡಿಕೊಂಡು ಸತ್ಯಾಗ್ರಹದ ಹಕ್ಕನ್ನು ಕಸಿಯುವುದು ಹೇಡಿತನ. ಆಮ್‌ ಆದ್ಮಿ ಪಾರ್ಟಿಯು ಅಡಿಕೆ ಬೆಳೆಗಾರರ ಪರವಾಗಿದ್ದು, ಅವರ ಹಿತರಕ್ಷಣೆಗೆ ಸದಾ ಬದ್ಧವಾಗಿರುತ್ತದೆ. ಒಂದು ಪ್ರತಿಭಟನೆಯನ್ನು ಹತ್ತಿಕ್ಕಿದ ಮಾತ್ರಕ್ಕೆ ನಾವು ಸುಮ್ಮನಾಗುತ್ತೇವೆ ಎಂದು ಬಿಜೆಪಿ ನಾಯಕರು ಭಾವಿಸಬಾರದು. ನಮ್ಮ ಹೋರಾಟ ಬೇರೆಬೇರೆ ಸ್ವರೂಪದಲ್ಲಿ ಮುಂದುವರಿಯಲಿದೆ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

- Advertisement -

“ಪ್ರಧಾನಿ ನರೇಂದ್ರ ಮೋದಿಯವರು ಬಹಿರಂಗ ಸಮಾವೇಶಗಳಲ್ಲಿ ಮೇಕ್‌ ಇನ್‌ ಇಂಡಿಯಾ ಮಂತ್ರ ಜಪಿಸುತ್ತಾರೆ. ಆದರೆ ಅದಕ್ಕೆ ವಿರುದ್ಧವಾಗಿ, ವಿದೇಶದಲ್ಲಿ ಉತ್ಪಾದನೆಯಾದ ಅಡಿಕೆಯನ್ನು ಸದ್ದಿಲ್ಲದೇ ತರಿಸುತ್ತಾರೆ. ಭಾರತಕ್ಕೆ ಭೂತಾನ್‌ ಅಡಿಕೆಯ ಅವಶ್ಯಕತೆ ಇಲ್ಲದಿದ್ದರೂ ಆಮದು ಮಾಡಿಕೊಳ್ಳುವ ಕಂಪನಿಗಳಿಗೆ ಲಾಭ ಮಾಡಿಕೊಟ್ಟು ಕಮಿಷನ್‌ ಪಡೆಯುವ ದುರಾಲೋಚನೆಯಿಂದ ಈ ನಿರ್ಧಾರ ತೆಗೆದುಕೊಳ್ಳುತ್ತಿದ್ದಾರೆ. ಆಮದು ಮಾಡಿಕೊಳ್ಳುವ ಅಡಿಕೆಗೆ ಭಾರೀ ಆಮದು ಸುಂಕ ವಿಧಿಸಲು ಕೂಡ ಕೇಂದ್ರ ಸರ್ಕಾರ ಮುಂದಾಗಿಲ್ಲ. ಅಡಿಕೆ ಬೆಳೆಗಾರರ ಬಗ್ಗೆ ಬಿಜೆಪಿಗೆ ಕಿಂಚಿತ್ತೂ ಕಾಳಜಿಯಿಲ್ಲ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ” ಎಂದು ಬ್ರಿಜೇಶ್‌ ಕಾಳಪ್ಪ ಹೇಳಿದರು.

Join Whatsapp