ಬೆಂಗಳೂರು: ರಾಜ್ಯ ಸರ್ಕಾರ ಅವೈಜ್ಞಾನಿಕ ನಿಯಮಗಳನ್ನು ಅನುಷ್ಠಾನಕ್ಕೆ ತಂದು ಕ್ರಷರ್, ಕಲ್ಲುಗಣಿ ಮಾಲೀಕರಿಗೆ 5 ಪಟ್ಟು ದಂಡ ವಿಧಿಸಿ ಕಿರುಕುಳ ನೀಡುತ್ತಿದೆ ಎಂದು ಜಿಲ್ಲಾ ಸ್ಟೋನ್ ಕ್ರಷರ್ಸ್ ಆ್ಯಂಡ್ ಕ್ಯಾರಿ ಓನರ್ಸ್ ಅಸೋಸಿಯೇಷನ್ ಆರೋಪಿಸಿದೆ.
ಇಂದು ಪ್ರಸ್ ಕ್ಲಬ್ ಸಭಾಂಗಣದಲ್ಲಿ ಬೆಂಗಳೂರು ನಗರ ಜಿಲ್ಲಾ ಸ್ಟೋನ್ ಕ್ರಷರ್ಸ್ ಆ್ಯಂಡ್ ಕ್ಯಾರಿ ಓನರ್ಸ್ ಅಸೋಸಿಯೇಷನ್ ಅಧ್ಯಕ್ಷ ಡಿ.ಸಿದ್ದರಾಜು, ಗೌರವಾಧ್ಯಕ್ಷ ಆನಂದ್ ಕುಮಾರ್, ಪದಾಧಿಕಾರಿಗಳಾದ ಕೆಂಚಪ್ಪ, ಉಮಾಶಂಕರ್, ಗೋವಿಂದರಾಜು, ಮಧುಸೂದನ್, ಹೊಂಬೇಗೌಡ ಮುಂತಾದವರು ಪತ್ರಿಕಾಗೋಷ್ಠಿ ನಡೆಸಿ ತಮಗಾಗುತ್ತಿರುವ ಅನ್ಯಾಯದ ಬಗ್ಗೆ ವಿವರ ನೀಡಿದರು.
ಅಧ್ಯಕ್ಷ ಡಿ.ಸಿದ್ದರಾಜು ಮಾತನಾಡಿ, ಫೆಡರೇಷನ್ ವತಿಯಿಂದ ತೆಗೆದುಕೊಂಡ ತೀರ್ಮಾನದಂತೆ ಇಂದಿನಿಂದಲೇ ಕ್ರಷರ್ ಮತ್ತು ಕ್ವಾರಿ ಘಟಕಗಳನ್ನು ಬಂದ್ ಮಾಡಲಾಗಿದೆ. ನಮ್ಮ 5 ಬೇಡಿಕೆಗಳು ಈಡೇರುವವರೆಗೆ ಪ್ರತಿಭಟನೆ ಮುಂದುವರಿಯಲಿದೆ. ಡಿಸೆಂಬರ್ 28ರಂದು ಬೆಳಗಾವಿಯಲ್ಲಿ “ಬೃಹತ್ ಪ್ರತಿಭಟನೆ” ನಡೆಸಲಾಗುವುದು ಎಂದು ತಿಳಿಸಿದರು.
ರಾಜ್ಯ ಸರ್ಕಾರ ಅವೈಜ್ಞಾನಿಕ ನಿಯಮಗಳನ್ನು ಜಾರಿಗೆ ತಂದು 5 ಪಟ್ಟು ದಂಡ ವಿಧಿಸಿ ಕೋಟ್ಯಂತರ ರೂಪಾಯಿ ದಂಡ ವಸೂಲಿ ಮಾಡುತ್ತಿದೆ. ಮಾತ್ರವಲ್ಲ ಶೇ. 15% ರಂತೆ ಬಡ್ಡಿಯನ್ನು ವಿಧಿಸಿ ಮಾಲೀಕರಿಗೆ ಅನ್ಯಾಯ ಎಸಗುತ್ತಿದೆ. ಪರಿಸರ ಶುಲ್ಕ ಕ್ರಷರ್ ಘಟಕಗಳಿಗೆ ಈ ಹೊರೆಯನ್ನು 15 ಲಕ್ಷ ರೂ ಗಳಿಗೆ ಹೆಚ್ಚಿಸಿದ್ದು ಮಾಲೀಕರುಗಳಿಗೆ ತುಂಬಲಾರದ ನಷ್ಟವಾಗುತ್ತಿದೆ ಎಂದು ಹೇಳಿದರು.
ನೆರೆಯ ಪಕ್ಕದ ತಮಿಳುನಾಡು ಸುಮಾರು 10 ಕಿ.ಮೀ. ಬೆಂಗಳೂರು ನಗರದಿಂದ ದೂರದಲ್ಲಿದ್ದು ಆ ರಾಜ್ಯದಲ್ಲಿ ರಾಜಧನ 30 ರೂ. ಇದ್ದು ನಮ್ಮ ರಾಜಧನ 105 ರೂಪಾಯಿಗೆ ಹೆಚ್ಚಿಸಲಾಗಿದೆ. ಈ ತಾರತಮ್ಯದಿಂದ ಬೆಂಗಳೂರು ನಗರ ಜಿಲ್ಲೆಯ ಕ್ರಷರ್ ಮತ್ತು ಕಲ್ಲು ಗಣಿ ಗುತ್ತಿಗೆದಾರರು ತುಂಬಾ ನಷ್ಟವನ್ನು ಅನುಭವಿಸಿ ವ್ಯಾಪಾರದ ಪೈಪೋಟ ನಡೆಸಲಾರದೆ ಕರ್ನಾಟಕ ರಾಜ್ಯದ ಬೆಂಗಳೂರು ನಗರ ಜಿಲ್ಲೆಯ ಭಾಗದ ಕ್ರಷರ್ ಮಾಲೀಕರು ವ್ಯಾಪಾರವನ್ನು ಮುಚ್ಚುವಂತಾಗಿದೆ. ಸಾಲ ಕಟ್ಟದೆ ಬೀದಿಗೆ ಬೀಳುವಂತಾಗಿದೆ. ಇದಕ್ಕೆ ಸರ್ಕಾರದಿಂದ ಮತ್ತು ಇಲಾಖೆಯಿಂದ ಯಾವುದೇ ಸಕಾರಾತ್ಮಕವಾದ ಸ್ಪಂದನೆ ಸಿಕ್ಕಿಲ್ಲ ಎಂದು ದೂರಿದರು.