ನವದೆಹಲಿ: ರಾಜ್ಯಸಭೆಯಲ್ಲಿ ಅಮಾನತು ಪರ್ವ ಮುಂದುವರಿದಿದ್ದು, ಇಂದು ಮತ್ತೆ ಮೂವರು ವಿಪಕ್ಷ ಸಂಸದರನ್ನು ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡವರನ್ನು ಆಮ್ ಆದ್ಮಿ ಪಕ್ಷದ ಸುಶೀಲ್ ಕುಮಾರ್ ಗುಫ್ತಾ, ಸಂಜೀವ್ ಕುಮಾರ್ ಪಾಠಕ್ ಮತ್ತು ಸ್ವತಂತ್ರ ಸದಸ್ಯ ಅಜಿತ್ ಕುಮಾರ್ ಭುಯಾನ್ ಎಂದು ಗುರುತಿಸಲಾಗಿದ್ದು, ಅವರನ್ನು ಭಿತ್ತಿಪತ್ರ ಪ್ರದರ್ಶಿಸಿದ ಕಾರಣ ರಾಜ್ಯಸಭೆಯಿಂದ ಅಮಾನತುಗೊಳಿಸಲಾಗಿದೆ. ಈ ಮೂವರು ಸಂಸದರು ಗುಜರಾತಿನಲ್ಲಿ ನಡೆದ ನಕಲಿ ಮದ್ಯ ದುರಂತದ ಬಗ್ಗೆ ಚರ್ಚೆ ನಡೆಸುವಂತೆ ಒತ್ತಾಯಿಸಿದ್ದರು,
ಇದರೊಂದಿಗೆ ಮುಂಗಾರು ಅಧಿವೇಶನದಲ್ಲಿ ಅಮಾನತುಗೊಂಡ ಒಟ್ಟು ಸಂಸದರ ಸಂಖ್ಯೆ 23ಕ್ಕೆ ತಲುಪಿದೆ. ಈ ಹಿಂದೆ ಲೋಕಸಭೆಯಿಂದ ನಾಲ್ವರು ಕಾಂಗ್ರೆಸ್ ಸಂಸದರನ್ನು ಅಮಾನತುಗೊಳಿಸಲಾಗಿತ್ತು.
ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳು ಬೆಲೆಯೇರಿಕೆ ಬಗ್ಗೆ ಚರ್ಚೆ ನಡೆಸಲು ಒತ್ತಾಯಿಸಿದರೆ, ಬಿಜೆಪಿಯವರು ಇಂದು ರಾಷ್ಟ್ರಪತ್ನಿ ಪದಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮಧ್ಯೆ ಮೊದಲು ಅಮಾನತುಗೊಂಡಿದ್ದ 20 ಮಂದಿ ಸಂಸದರು ಪಾರ್ಲಿಮೆಂಟ್ ಆವರಣದ ಗಾಂಧಿ ಪ್ರತಿಮೆಯ ಎದುರು ನಿರಂತರ ಪ್ರತಿಭಟನೆ ನಡೆಸುತ್ತಿದ್ದಾರೆ.