ಬೆಳಗಾವಿ: ಸುವರ್ಣ ವಿಧಾನ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುವ ಹಿನ್ನೆಲೆ ಸುತ್ತಮುತ್ತ ಡಿ.1ರಿಂದ 30ರವರೆಗೆ 144 ಕಲಂ ಅಡಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುವರ್ಣ ಸೌಧ ಹಿರೇಬಾಗೆವಾಡಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬರುತ್ತದೆ. ಕಾನೂನು ಸುವ್ಯವಸ್ಥೆ ಮತ್ತು ಸಾರ್ವಜನಿಕ ಶಾಂತಿ ಕಾಪಾಡುವ ಹಿತದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ.
ಸುವರ್ಣ ಸೌಧದ ಪೂರ್ವ ಕಡೆಗೆ ಶೆಗನಮಟ್ಟಿ ಜಮೀನ 500 ಮೀಟರ್, ಉತ್ತರಕ್ಕೆ ಸುವರ್ಣ ಗಾರ್ಡನ್ ಕಲ್ಯಾಣ ಮಂಟಪದವರೆಗೆ 500 ಮೀಟರ್ ಹಾಗೂ ಪಶ್ಚಿಮಕ್ಕೆ ರಾಷ್ಟ್ರೀಯ ಹೆದ್ದಾರಿಯ ಆಚೆಗೆ ಇರುವ ಸಂಪೂರ್ಣ ಗಾರ್ಡನ್ ಹೊಟೇಲ್ದವರೆಗೆ 500 ಮೀಟರ್ ಮತ್ತು ದಕ್ಷಿಣ ದಿಕ್ಕಿನ ಕಡೆಗೆ ಟೊಯೊಟಾ ಶೋರೂಮ್ ವರೆಗೆ 500 ಮೀಟರ್ ಅಂತರದಲ್ಲಿ ಡಿ.1ರಿಂದ 30ರವರೆಗೆ ಈ ನಿಷೇಧಾಜ್ಞೆ ಇರಲಿದೆ.
5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದೋ, ಮೆರವಣಿಗೆ ಅಥವಾ ಸಭೆ ಸಮಾರಂಭ ಜರುಗಿಸುವುದೋ ಮಾಡೋ ಹಾಗಿಲ್ಲ. ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಕಲ್ಲುಗಳು, ಕ್ಷಾರಪದಾರ್ಥ, ಪಟಾಕಿ ಇಲ್ಲವೆ ಸ್ಫೋಟಕ ವಸ್ತುಗಳು, ಯಾವುದೇ ದಾಹಕ ವಸ್ತುಗಳು ಇತ್ಯಾದಿಗಳನ್ನು ಸದರಿ ಸ್ಥಳಕ್ಕೆ ತೆಗೆದುಕೊಂಡು ಹೋಗುವುದನ್ನು ಹಾಗೂ ಶೇಖರಿಸುವುದನ್ನು ನಿಷೇಧಿಸಲಾಗಿದೆ.
ಕಲ್ಲುಗಳನ್ನು ಮತ್ತು ಎಸೆಯುವಂತಹ ವಸ್ತುಗಳನ್ನು ಅಥವಾ ಬಿಡುವ ಸಾಧನಗಳನ್ನು ತೆಗೆದುಕೊಂಡು ಹೋಗುವುದನ್ನು ನಿಷೇಧಿಸಲಾಗಿದೆ.
ಪ್ರಚೋದನಾತ್ಮಕ ಹಾಗೂ ಉದ್ರೇಕಕಾರಿ ಹಾಡು, ಭಾಷಣ, ಕೂಗಾಟ ಮಾಡುವುದನ್ನು ಹಾಗೂ ವ್ಯಕ್ತಿಗಳ ತೇಜೋವಧೆ ಮಾಡುವಂತಹ ಚಿತ್ರಗಳು ಚಿಹ್ನೆಗಳು, ಪ್ರತಿಕೃತಿಗಳು ಮುಂತಾದವುಗಳನ್ನು ಪ್ರದರ್ಶಿಸುವುದು ನಿಷೇಧವಾಗಿದೆ. ಸಾರ್ವಜನಿಕರ ಗಾಂಭಿರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿರ್ಬಂಧಿಸಲಾಗಿದೆ.
ಶವ ಸಂಸ್ಕಾರಕ್ಕೆ ಅಥವಾ ಮದುವೆ ಮತ್ತು ಧಾರ್ಮಿಕ ಮೆರವಣಿಗೆಗಳಿಗೆ ಈ ಆಜ್ಞೆ ಅನ್ವಯಿಸುವುದಿಲ್ಲವಾದರೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರದಂತೆ ನಿಯಮಗಳನ್ನು ಪಾಲಿಸಬೇಕಾಗುತ್ತದೆ.
ರಾಷ್ಟ್ರೀಯ ಹೆದ್ದಾರಿ-4ರಲ್ಲಿ ರಸ್ತೆ ತಡೆ ಮಾಡಿ ಪ್ರತಿಭಟನೆ ಮಾಡುವುದು, ರಾಷ್ಟ್ರೀಯ ಹೆದ್ದಾರಿಯ ಸಂಚಾರಕ್ಕೆ ತಡೆ ಒಡ್ಡಿ ಹೆದ್ದಾರಿಯಲ್ಲಿ ಓಡಾಡುತ್ತಿರುವ ಆಂಬುಲೆನ್ಸ್ ಹಾಗೂ ಇತರ ಅವಶ್ಯಕ ವಸ್ತುಗಳನ್ನು ಸಾಗಿಸುವ ವಾಹನಗಳನ್ನು ತಡೆದಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಎಸ್.ಎನ್. ಸಿದ್ರಾಮಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.