ಮಂಗಳೂರು: ರಾಜ್ಯ ಚುನಾವಣಾ ಆಯೋಗವು ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ವಿಟ್ಲ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ಗಳಿಗೆ ಚುನಾವಣೆ ಘೋಷಿಸಿದ್ದು, ಇದೇ ಡಿ.27ರ ಸೋಮವಾರ ಮತದಾನ ನಡೆಯಲಿದೆ.
ಮತದಾನದ ದಿನದಂದು ಸಾರ್ವಜನಿಕ ಶಾಂತಿ ಸುವ್ಯವಸ್ಥೆಯನ್ನು ಕಾಪಾಡುವ ಮೂಲಕ ಮುಕ್ತ ಮತ್ತು ನ್ಯಾಯಯುತ ಹಾಗೂ ನಿಷ್ಪಕ್ಷಪಾತವಾಗಿ ಚುನಾವಣೆಯನ್ನು ನಡೆಸುವ ನಿಟ್ಟಿನಲ್ಲಿ ಭಾರತೀಯ ದಂಡ ಪ್ರಕ್ರಿಯಾ ಸಂಹಿತೆ 1973ರ ಕಲಂ 144 ರನ್ವಯ ಇದೇ ಡಿ.26ರ ರಾತ್ರಿ 9 ಗಂಟೆಯಿಂದ ಮತದಾನ ಪ್ರಕ್ರಿಯೆ ಮುಕ್ತಾಯವಾಗುವವರೆಗೆ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಗಳಾದ ವಿಟ್ಲಾ ಹಾಗೂ ಕೋಟೆಕಾರು ಪಟ್ಟಣ ಪಂಚಾಯತ್ ವ್ಯಾಪ್ತಿಯ ಒಟ್ಟು 40 ಮತದಾನ ಕೇಂದ್ರಗಳ ಸುತ್ತಮುತ್ತ 100 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ ಅವರು ಆದೇಶಿಸಿದ್ದಾರೆ.
ಮತಗಟ್ಟೆ ವ್ಯಾಪ್ತಿಯಲ್ಲಿ 5ಕ್ಕಿಂತ ಹೆಚ್ಚು ಜನರು ಗುಂಪು ಸೇರುವುದು, ಮೆರವಣಿಗೆ ಅಥವಾ ಸಭೆ, ಸಮಾರಂಭಗಳನ್ನು ನಿಷೇಧಿಸಲಾಗಿದೆ. ನಿರ್ಬಂಧಿತ 100 ಮೀಟರ್ ವ್ಯಾಪ್ತಿಯಲ್ಲಿ ಮತದಾರರು ಮತ್ತು ಸಾರ್ವಜನಿಕರು ಚುನಾವಣಾ ಪ್ರಚಾರ ಮಾಡುವುದನ್ನು ಹಾಗೂ ಮತದಾನಕ್ಕೆ ಭಾದಕವಾಗುವ ಯಾವುದೇ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಮತಗಟ್ಟೆ ಕೇಂದ್ರಗಳ 10 ಮೀಟರ್ ವ್ಯಾಪ್ತಿಯಲ್ಲಿ ಸಂಚಾರಿ ದೂರವಾಣಿ ಮೊಬೈಲ್ ಬಳಕೆಯನ್ನು ಹಾಗೂ ಮತಗಟ್ಟೆ ಕೇಂದ್ರಗಳ 100 ಮೀಟರ್ ವ್ಯಾಪ್ತಿಯಲ್ಲಿ ಧ್ವನಿವರ್ಧಕ ಬಳಕೆಯನ್ನು ನಿಷೇಧಿಸಲಾಗಿದೆ. ಈ ನಿಷೇಧಾಜ್ಞೆಯು ಸರ್ಕಾರದ ಅಧಿಕಾರಿಗಳಿಗೆ ಹಾಗೂ ಮತಗಟ್ಟೆ ಅಧಿಕಾರಿಗಳಿಗೆ ಅನ್ವಯಿಸುವುದಿಲ್ಲ.
ಯಾವುದೇ ಆಯುಧ, ಕುಡುಗೋಲು, ಖಡ್ಗ ಭರ್ಚಿ, ಚೂರಿ, ದೊಡ್ಡ ಲಾರಿ ಅಥವಾ ದೈಹಿಕ ದಂಡನೆಗೆ ಕಾರಣವಾಗುವ ಅಥವಾ ಪೂರಕವಾಗುವ ಇನ್ಯಾವುದೇ ವಸ್ತುಗಳನ್ನು ಹೊಂದುವುದನ್ನು ಮತ್ತು ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ. ಯಾವುದೇ ಕ್ಷಾರಕ ಅಥವಾ ಸ್ಫೋಟಕ ವಸ್ತುಗಳನ್ನು ಹೊಂದುವುದನ್ನು ಹಾಗೂ ಸಾಗಾಟ ಮಾಡುವುದನ್ನು ನಿಷೇಧಿಸಲಾಗಿದೆ.
ಸಹಾಯಕ ಚುನಾವಣಾ ಅಧಿಕಾರಿಗಳಿಂದ ಪೂರ್ವಾನುಮತಿ ಪಡೆಯದೆ, ಯಾವುದೇ ರೀತಿಯ ಸಾರ್ವಜನಿಕ ಮೆರವಣಿಗೆ, ಸಾರ್ವಜನಿಕ ಸಭೆ ಸಮಾರಂಭಗಳನ್ನು ನಡೆಸಬಾರದು.
ಸಾರ್ವಜನಿಕವಾಗಿ ಯಾವುದೇ ಕೂಗನ್ನು ಉಚ್ಚರಿಸುವುದು ಅಥವಾ ಪದ ಹಾಡುವುದು, ಚೇಷ್ಠೆ ಮಾಡುವುದನ್ನು, ಸನ್ನೆಗಳನ್ನು ಉಪಯೋಗಿಸುವುದು ಮತ್ತು ಚಿತ್ರಗಳ ಮೂಲಕ ಪ್ರದರ್ಶನ ಅಥವಾ ಪ್ರಸಾರ ಮಾಡುವುದು, ಪ್ರಕಟಣಾ ಪತ್ರಿಕೆಗಳ ಅಥವಾ ಇತರ ಯಾವುದೇ ವಸ್ತುಗಳ ಪ್ರದರ್ಶನ, ಭಿತ್ತಿಪತ್ರಗಳನ್ನು ಅಂಟಿಸುವುದರಿಂದ, ಸಭ್ಯತನ, ಸದಾಚಾರ, ಸಾರ್ವಜನಿಕ ಭದ್ರತ ಶಿಥಿಲಗೊಳ್ಳುವಂತಹ ಯಾವುದೇ ರೀತಿಯ ಅಪರಾಧ ಎಸಗುವರೇ ಪ್ರೇರೇಪಿಸುವ ಕ್ರಮವನ್ನು ನಿಷೇಧಿಸಲಾಗಿದೆ.
ಶವ ಸಂಸ್ಕಾರ, ಮದುವೆ ಮತ್ತು ಧಾರ್ಮಿಕ ಮೆರಣಿಗಳಿಗೆ ಹಾಗೂ ಕೋವಿಡ್-19 ಕಾರ್ಯಕ್ರಮಗಳನ್ನು ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯಾಗದಂತೆ ಹಾಗೂ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಬಾರದಂತೆ, ಕೋವಿಡ್ ಸಮುಚಿತ ವರ್ತನೆಯನ್ನು ಕಡ್ಡಾಯವಾಗಿ ಪಾಲಿಸಬೇಕು.
ಮತದಾನ ದಿನದಂದು ಮತಗಟ್ಟೆಗಳ ಸುತ್ತಮುತ್ತ 100 ಮೀಟರ್ ಪರಿಮಿತಿಯಲ್ಲಿ ಬಹಿರಂಗ ಪ್ರಚಾರಕ್ಕೆ ಸಂಬಂಧಿಸಿ ಪೋಸ್ಟರ್, ಬ್ಯಾನರ್ ಅಥವಾ ಇನ್ಯಾವುದೇ ವಸ್ತುಗಳನ್ನು ಬಳಸಬಾರದು.
ಮತದಾನ ಮುಕ್ತಾಯಗೊಳ್ಳುವ 72 ಗಂಟೆಗಳ ಪೂರ್ವದ ಅವಧಿಯಲ್ಲಿ ಮತಕ್ಷೇತ್ರದ ಮತದಾರರಲ್ಲದ ರಾಜಕೀಯ ಕಾರ್ಯಕರ್ತರು ಮತಕ್ಷೇತ್ರದಲ್ಲಿ ಇರುವುದನ್ನು ನಿರ್ಬಂಧಿಸಲಾಗಿದೆ.
ಈ ಆದೇಶವು ಸರ್ಕಾರದಿಂದ ನಡೆಸಲ್ಪಡುವ ಯಾವುದೇ ಕಾರ್ಯಕ್ರಮ, ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ ಮತ್ತು ಆರಕ್ಷಕ ಸಿಬ್ಬಂದಿಗಳು ಕಾರ್ಯನಿರ್ವಹಣೆ ವೇಳೆ ಲಾಟಿಗಳನ್ನು ಉಪಯೋಗಿಸುವುದಕ್ಕೆ ಅನ್ವಯಿಸುವುದಿಲ್ಲ ಹಾಗೂ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿರುವ ಸಿಬ್ಬಂದಿಗಳು ಅವರ ಚುನಾವಣಾ ಕರ್ತವ್ಯ ನಿರ್ವಹಿಸುವ ಸ್ಥಳಕ್ಕೆ ಅನ್ವಯಿಸುವುದಿಲ್ಲ ಎಂದು ಜಿಲ್ಲಾ ದಂಡಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.