ಕನ್ನಡ ಪರ ಹೋರಾಟಗಾರರನ್ನು ಗುರಿಪಡಿಸುತ್ತಿರುವ ಪೊಲೀಸರ ವಿರುದ್ಧ ಕಮಿಷನರನ್ನು ಭೇಟಿಯಾದ ಪ್ರಗತಿಪರರು

Prasthutha|

ಬೆಂಗಳೂರು: ಪ್ರತಿಭಟನೆಯಲ್ಲಿ ಮಹಿಳೆಯರೊಂದಿಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯೊಬ್ಬನನ್ನು ಕನ್ನಡಪರ ಹೋರಾಟಗಾರರು ಪೊಲೀಸರಿಗೊಪ್ಪಿಸಿ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ತಮ್ಮನ್ನು ಗುರಿಪಡಿಸಲಾಗುತ್ತಿದ್ದಾರೆ ಎಂದು ಆರೋಪಿಸಿ ಪ್ರಗತಿಪರರ ನಿಯೋಗವೊಂದು ಕಮಿಷನರ್ ಅವರನ್ನು ಭೇಟಿ ಮಾಡಿ ಸೂಕ್ತ ಕ್ರಮಕ್ಕೆ ಒತ್ತಾಯಿಸಿದ್ದಾರೆ.

- Advertisement -

ಪಠ್ಯಪರಿಷ್ಕರಣೆಯನ್ನು ವಿರೋಧಿಸಿ ಜೂನ್ 18 ರಂದು ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಕಾನೂನು ಸುವ್ಯವಸ್ಥೆ ಹದಗೆಡಿಸಲು ಯತ್ನಿಸಿದ ವ್ಯಕ್ತಿಯೊಬ್ಬನನ್ನು ಸಂಘಟನೆಯ ಪ್ರಮುಖರು ಪೊಲೀಸರಿಗೊಪ್ಪಿಸಿ ದೂರು ನೀಡಿದ್ದರು.

ಹಿಡಿದು ಪೊಲೀಸರಿಗೊಪ್ಪಿಸುವ ವೇಳೆ ವಿಶ್ವಮಾನವ ಕ್ರಾಂತ್ರಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯ ಪದಾಧಿಕಾರಿ ಬೈರಪ್ಪ ಹರೀಶ್ ಕುಮಾರ್ ಮತ್ತು ದೀಪು ಗೌಡ ಎಂಬವರ ಮೇಲೆ ಆತ ಹಲ್ಲೆ ನಡೆಸಿದ್ದನು. ಈ ಬಗ್ಗೆ ಸಮಿತಿಯು ಅಧಿಕೃತವಾಗಿ ಮೊದಲು ದೂರು ನೀಡಿತ್ತು. ಆದರೆ ಉಪ್ಪಾರಪೇಟೆ ಪೊಲೀಸರು ಹೋರಾಟ ಸಮಿತಿಯ ದೂರನ್ನು ಸ್ವೀಕರಿಸದೆ, ದುಷ್ಕರ್ಮಿ ನೀಡಿದ ದೂರನ್ನು ಸ್ವೀಕರಿಸಿ ಹೋರಾಟಗಾರರ ವಿರುದ್ಧ ಪ್ರಕರಣ ದಾಖಲಿಸಿದ್ದರು. ಪೊಲೀಸರು ಹೋರಾಟಗಾರರನ್ನು ಗುರಿಪಡಿಸುತ್ತಿದ್ದಾರೆ ಎಂಬ ಆರೋಪ ದೂರು ಸಾರ್ವಜನಿವಾಗಿ ಕೇಳಿ ಬರುತ್ತಿತ್ತು.

- Advertisement -

ಈ ನಿಟ್ಟಿನಲ್ಲಿ ಬೆಂಗಳೂರು ಪೊಲೀಸ್ ಕಮಿಷನಲ್ ಅವರನ್ನು ಭೇಟಿಯಾದ ಸಾಹಿತಿ, ಹೋರಾಟಗಾರರ ನಿಯೋಗ ವಿಶ್ವಮಾನವ ಕ್ರಾಂತಿಕಾರಿ ಮಹಾಕವಿ ಕುವೆಂಪು ಹೋರಾಟ ಸಮಿತಿಯು ನೀಡಿದ್ದ ದೂರನ್ನೂ ಎಫ್ ಐಆರ್ ಮಾಡಬೇಕು. ಸಾವಿರಾರು ಜನ, ನೂರಾರು ಸಾಹಿತಿ ಬುದ್ಧಿಜೀವಿಗಳು, ಹತ್ತಾರು ಪ್ರತಿಷ್ಟಿತ ಸ್ವಾಮೀಜಿಗಳು ಸೇರಿದ್ದ ಪ್ರತಿಭಟನೆಯಲ್ಲಿ ಗದ್ದಲವೆಬ್ಬಿಸಲು ಆ ದುಷ್ಕರ್ಮಿಯನ್ನು ಕಳುಹಿಸಿದ್ದು ಯಾರು ಎಂಬ ಬಗ್ಗೆಯೂ ತನಿಖೆ ಮಾಡಿ, ಆತ ಮತ್ತು ಪಿತೂರಿಕೋರರನ್ನು ಬಂಧಿಸಬೇಕು. ಪ್ರಭಾವಕ್ಕೊಳಗಾಗಿ ಕನ್ನಡ ಹೋರಾಟಗಾರರಾದ ಬೈರಪ್ಪ ಹರೀಶ್ ಕುಮಾರ್ ಮತ್ತು ದೀಪು ಗೌಡ ವಿರುದ್ಧ ಕಾರ್ಯಾಚರಣೆಯನ್ನು ನಿಲ್ಲಿಸಬೇಕು ಎಂದು ಮನವಿ ಮಾಡಲಾಗಿದೆ.

ಈ ಮಧ್ಯೆ ಇಂದು ಇಬ್ಬರು ಹೋರಾಟಗಾರರನ್ನು ಬಂಧಿಸಲು ಪೊಲೀಸರ ಮೇಲೆ ಒತ್ತಡ ತರಲು ಟೌನ್ ಹಾಲ್‌ ಎದುರು ಪ್ರತಿಭಟನೆಯನ್ನೂ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಆದರೆ ಪೊಲೀಸರು ಮೊದಲು ಯಾರ ಮೇಲೆ ದೂರು ದಾಖಲಿಸಲಾಗಿತ್ತೋ ಅವರ ಮೇಲೆ FIR ದಾಖಲಿಸಿ ತನಿಖೆ ನಡೆಸಬೇಕಾಗಿತ್ತಲ್ಲವೆ? ಹಾಗೆ ಮಾಡದೆ ಸಂಘಟಕರಲ್ಲಿ, ಸಾಮಾಜಿಕ ಹೋರಾಟಗಾರರಲ್ಲಿ ಭಯಭೀತ ವಾತಾವರಣ ಸೃಷ್ಟಿಸಲು ಪೊಲೀಸರು ತೊಡಗಿರುವುದು ಖಂಡನೀಯ ಎಂದು ನಿಯೋಗ ಅಭಿಪ್ರಾಯ ವ್ಯಕ್ತಪಡಿಸಿದೆ.



Join Whatsapp