ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮ ಪುನರಾರಂಭ: ಮುಖ್ಯಮಂತ್ರಿ  ಸಿದ್ದರಾಮಯ್ಯ

Prasthutha|

ಬೆಂಗಳೂರು: ಹಿಂದೆ ನಮ್ಮ ಸರ್ಕಾರದ ಅವಧಿಯಲ್ಲಿ  ಅಲ್ಪಸಂಖ್ಯಾತರಿಗೆ ರೂಪಿಸಿದ್ದ ಕಾರ್ಯಕ್ರಮಗಳನ್ನು  ಪುನರಾರಂಭ ಮಾಡಲಾಗುವುದು ಎಂದು ಮುಖ್ಯಮಂತ್ರಿ  ಸಿದ್ದರಾಮಯ್ಯ ಭರವಸೆ ನೀಡಿದರು.

- Advertisement -

ಕರ್ನಾಟಕ ರಾಜ್ಯದ ಅಲ್ಪಸಂಖ್ಯಾತರ ಮುಸ್ಲಿಂ ಚಿಂತಕರ ಚಾವಡಿಯ ಕೇಂದ್ರ ಮಂಡಳಿಯ ನಿಯೋಗವು ಇಂದು  ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿದ ಸಂದರ್ಭದಲ್ಲಿ ಮಾತನಾಡುತ್ತಿದ್ದರು.

ಸರ್ಕಾರ ಘೋಷಿಸಿದ್ದಂತೆ ಐದು ಗ್ಯಾರಂಟಿಗಳನ್ನು  ಈಗಲೇ ಅನುಷ್ಠಾನಕ್ಕೆ ತರುತ್ತಿದ್ದು, ಮುಂದಿನ ವರ್ಷದಿಂದ ಅಲ್ಪಸಂಖ್ಯಾತರಿಗೆ  ಹೆಚ್ಚಿನ ಅನುದಾನ  ನಿಗದಿಪಡಿಸಲಾಗುವುದು   ಎಂದು ಮುಖ್ಯಮಂತ್ರಿಗಳು ತಿಳಿಸಿದರು.

- Advertisement -

ಚಾವಡಿಯು ಒಂದು ದಶಕದಿಂದ ಕರ್ನಾಟಕದ ಜನಪರ ಚಳವಳಿಗಳೊಂದಿಗೆ ಗುರುತಿಸಿಕೊಂಡಿದೆ. ಸಾಹಿತ್ಯ ಕ್ಷೇತ್ರ, ಕಲ್ಯಾಣ ಕರ್ನಾಟಕದ  ಅಭಿವೃದ್ಧಿ , ವಿದ್ಯಾರ್ಥಿ, ಹಾಗೂ ದಲಿತ ಚಳವಳಿಗಳು ಹಾಗೂ ಜನಪರವಾದ ಇತರೆ ಹೋರಾಟಗಳೊಂದಿಗೆ ಗುರುತಿಸಿಕೊಂಡಿದೆ.     ಮುಸ್ಲಿಂ ಸಮುದಾಯದ ಶೈಕ್ಷಣಿಕ, ಸಾಮಾಜಿಕ ಹಾಗೂ  ಆರ್ಥಿಕ ಅಭಿವೃದ್ಧಿಗೆ ಚಾವಡಿ ಒತ್ತು ನೀಡಿದೆ.  ತನ್ನ ಧರ್ಮದ ಕೋಮುವಾದವನ್ನು ವಿರೋಧಿಸುತ್ತಲೇ ಇನ್ನೊಂದರ ಕೋಮುವಾದವನ್ನು ವಿರೋಧಿಸುವ ಕೆಲಸ ಮಾಡುತ್ತಿದೆ ಎಂದು ಸಭೆಗೆ ತಿಳಿಸಲಾಯಿತು.

ಕಳೆದ ಐದು ವರ್ಷಗಳಿಂದ ಸರ್ಕಾರದ ಯೋಜನೆಗಳಿಂದ ಸಮುದಾಯ ವಂಚಿತವಾಗಿದ್ದು,  ಈ ನಿಟ್ಟಿನಲ್ಲಿ ಅಲ್ಪಸಂಖ್ಯಾತರ ಇಲಾಖೆ ಹಾಗೂ ನಿಗಮಗಳಲ್ಲಿ ಅನುದಾನ ಹೆಚ್ಚಳ, ವಸತಿಶಾಲೆ,  ಜಿಲ್ಲೆಗೊಂದು ಅಲ್ಪಸಂಖ್ಯಾತರ ಪಾಲಿಟೆಕ್ನಿಕ್ ಕಾಲೇಜು ಸ್ಥಾಪಿಸುವ ಕುರಿತು  ಬೇಡಿಕೆಗಳನ್ನು  ಸಲ್ಲಿಸಲಾಯಿತು.

ಮುಖ್ಯಮಂತ್ರಿಗಳ  ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಚಾವಡಿಯ ಅಧ್ಯಕ್ಷ ಮುಜಾಫರ್ ಅಸಾದಿ, ಮಸ್ತಾನ್ ಬಿರಾದರ್, ಬಾನು  ಮುಷ್ತಾಖ್, ರಹಮತ್ ತರೀಕೆರೆ ಮೊದಲಾದವರು ಉಪಸ್ಥಿತರಿದ್ದರು.