ಜಾನಪದ ವಿದ್ವಾಂಸ, ಚಿಂತಕ ಪ್ರೊ. ಜ್ಯೋತಿ ಹೊಸೂರ ನಿಧನ

Prasthutha|

ಬೆಂಗಳೂರು: ನಾಡಿನ ಖ್ಯಾತ ಜಾನಪದ ವಿದ್ವಾಂಸ, ಸಾಹಿತಿ ಪ್ರೊ. ಜ್ಯೋತಿ ಹೊಸೂರ ಅವರು ಇಂದು ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಅವರಿಗೆ 84 ವರ್ಷ ವಯಸ್ಸಾಗಿತ್ತು. ಹೃದಯಾಘಾತ ಕಾಣಿಸಿಕೊಂಡ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು.

- Advertisement -


ಜ್ಯೋತಿ ಹೊಸೂರ ಅವರು ಜಾನಪದ ಕ್ಷೇತ್ರದಲ್ಲಿ ಬಹು ದೊಡ್ಡ ಹೆಸರು ಮಾಡಿದವರು. ‘ಗಾದೆ, ಒಡಪು, ಗ್ರಾಮದೇವತೆ ‘ಅವರು ಮಾಡಿದ ಸಂಶೋಧನೆಗಳು ವಿದ್ವತ್ ಪ್ರಪಂಚದಲ್ಲಿ ಗೌರವ ಆದರಕ್ಕೆ ಪಾತ್ರವಾಗಿದ್ದವು. ರಾಯಭಾಗಿನಂತಹ ಸಣ್ಣ ಹಳ್ಳಿಯಲ್ಲಿದ್ದರು. ಅವರು ನಡೆಸಿದ ಸಂಶೋಧನೆಗಳು ವಿಶ್ವವಿದ್ಯಾಲಯ ಮಟ್ಟದಲ್ಲಿ ಚರ್ಚೆ ಆಗುತ್ತಿದ್ದವು.


ಶಂಬಾ ಜೋಶಿಯವರ ಸಂಶೋಧನೆಯ ಬಗ್ಗೆ ವಿಶೇಷ ಅಧ್ಯಯನ ಮಾಡಿದ ಜ್ಯೋತಿ ಹೊಸೂರ ಅವರು ಕಾಲಗತಿ ಪ್ರಕಾಶನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಆ ಮೂಲಕ ಶಂಬಾ ಜೋಶಿಯವರ ಸಮಗ್ರ ಸಾಹಿತ್ಯ ವನ್ನು ಪ್ರಕಟಿಸಿದ್ದರು. ಸಂಗೊಳ್ಳಿ ರಾಯಣ್ಣ ಕಿತ್ತೂರು ಚನ್ನಮ ‘ಕನಕದಾಸ, ವಚನ ಸಾಹಿತ್ಯ ಕುರಿತು ಮಹತ್ವದ ಕೃತಿಗಳನ್ನು ಪ್ರಕಟಿಸಿದ್ದಾರೆ.

- Advertisement -


ಜ್ಯೋತಿ ಹೊಸೂರ ಅವರ ಸಂಪಾದಿತ ಪ್ರಸಿದ್ಧ ಜನಪದ ಒಡಪುಗಳನ್ನು ಒಳಗೊಂಡ ‘ಹೆಸರ ಹೇಳ್ತೇನಿ ಒಡಪಕಟ್ಟಿ’ ಜನಪದ ತಿಪದಿಗಳ ಸಂಪಾದನೆಯ ‘ ಬೆರಸಿಯಿಟ್ಟೇನ ಬೆಲ್ಲ ನೆನಗಡಲಿ’ ಕೃತಿಗಳು ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿವೆ.
ಜಾನಪದ ಉಪಾಸನೆ, ಜಾತಕರ ಜಾತಕ, ಜಾನಪದ ಕುರಿತು, ಕನಕದಾಸರ ಜೀವನ ವಿಚಾರ ಕುರಿತು, ಸಂಗೊಳ್ಳಿ ರಾಯಣ್ಣ ಚರಿತ್ರೆ ಸಂಶೋಧನೆ, ಸತ್ಯಾನ್ವೇಷಕ ಶಂ.ಬಾ. ಜ್ಯೋಶಿ, ಪ್ರಜ್ಞಾ ಪ್ರವಾಹದ ಬೆಳಕಿನಲ್ಲಿ , ಶರಣರ ಕ್ರಾಂತಿಕಾರಕ ವಚನಗಳು ಸೇರಿದಂತೆ 30ಕ್ಕೂ ಅಧಿಕ ಸಂಖ್ಯೆಯ ಪುಸ್ತಕಗಳನ್ನು ಪ್ರಕಟಿಸಿದ್ದು, ನಾಡಿನ ಅನೇಕ ಪತ್ರಿಕೆ , ನಿಯತಕಾಲಿಕೆಗಳಲ್ಲಿ ವಿದ್ವತ್ಪೂರ್ಣ ಲೇಖನಗಳು ಪ್ರಕಟಗೊಂಡಿವೆ.


ಅವರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕನಕಶ್ರೀ ಪ್ರಶಸ್ತಿ’ ಬೆಟ್ಟಗೇರಿ ಕೃಷ್ಣ ಶರ್ಮಾ ಸಂಶೋಧಕ ಪ್ರಶಸ್ತಿ, ಜಾನಪದ ತಜ್ಞ ಪ್ರಶಸ್ತಿ ಸೇರಿ ಹಲವಾರು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅವರು ಪತ್ನಿ, ಮಗ, ಹಾಗೂ ಮಗಳನ್ನು ಅಗಲಿದ್ದಾರೆ.



Join Whatsapp