ಪ್ರೊ. ಲಕ್ಷ್ಮೀಸಾಗರ್‌ ಪುತ್ಥಳಿ ಭಗ್ನಗೊಳಿಸಿದ ದುಷ್ಕರ್ಮಿಗಳು | ಬಂಧನಕ್ಕೆ ಆಗ್ರಹ

Prasthutha|

ವರ್ಲಕೊಂಡ: ರಾಜ್ಯದ ಕಾನೂನು ಸಚಿವರಾಗಿದ್ದ ದಿವಂಗತ ಪ್ರೊ.ಎ.ಲಕ್ಷ್ಮೀಸಾಗರ್ ಸಮಾಧಿಯ ಮೇಲಿನ ಪುತ್ಥಳಿಯನ್ನು ಕಿಡಿಗೇಡಿಗಳು ಮತ್ತೊಮ್ಮೆ ಭಗ್ನಗೊಳಿಸಿದ್ದಾರೆ. ಕೆಲ ದಿನಗಳ ಹಿಂದೆ ಕಿಡಿಗೇಡಿಗಳಿಂದ ವಿರೂಪಗೊಂಡಿದ್ದ ಅವರ ಪುತ್ಥಳಿಯನ್ನು ತೆಗೆದು ಹೊಸ ಪುತ್ಥಳಿ ಇಡಲಾಗಿತ್ತು. ಆದರೆ, ಈಗ ದುಷ್ಕರ್ಮಿಗಳು ಹೊಸ ಪುತ್ಥಳಿಯನ್ನೂ ಭಗ್ನಗೊಳಿಸಿದ್ದಾರೆ.

- Advertisement -

ಗುಡಿಬಂಡೆ ತಾಲೂಕಿನ ವರ್ಲಕೊಂಡ ಗ್ರಾಮದ ಸರಕಾರಿ ಪ್ರೌಢಶಾಲೆ ಆವರಣದಲ್ಲಿರುವ ಲಕ್ಷ್ಮೀಸಾಗರ್‌ ಅವರ ಸಮಾಧಿ ಪದೇ ಪದೆ ದಾಳಿಗೆ ತುತ್ತಾಗುತ್ತಿದ್ದು, ಕತ್ತಲಲ್ಲಿ ಕುಡುಕರ ಅಡ್ಡೆಯಾಗುವ ಆ ಜಾಗದಲ್ಲಿರುವ ಮಾಜಿ ಸಚಿವರ ಪುತ್ಥಳಿಯನ್ನು ಬೇಕೆಂದೇ ವಿರೂಪಗೊಳಿಸುತ್ತಿದ್ದಾರೆ ಎಂದು ಕುಂಬಾರ ಸಂಘ ಅಧ್ಯಕ್ಷರಾದ ಕೆ ಮುನಿಸ್ವಾಮಿ ಆರೋಪಿಸಿದ್ದಾರೆ.

ತಮ್ಮ ಜನ್ಮಸ್ಥಳವಾದ ಲಕ್ಷ್ಮೀಸಾಗರ ಗ್ರಾಮದ ಸರ್ವತೋಮುಖ ಆಭಿವೃದ್ಧಿಗೆ ಸೇವೆ ಮಾಡಿದ್ದ ಲಕ್ಷ್ಮೀಸಾಗರ್‌, ತಮ್ಮ ಸಂಸದರ ನಿಧಿಯಲ್ಲೇ ನಿರ್ಮಾಣವಾದ ಸರಕಾರಿ ಪ್ರೌಢಶಾಲೆ ಆವರಣದಲ್ಲಿನ ಅವರ ಸಮಾಧಿ ಸ್ಥಳದಲ್ಲಿ ಅವರ ಪುತ್ಥಳಿಯನ್ನಿಡಲಾಗಿತ್ತು. ಆದರೆ, ಕಿಡಿಗೇಡಿಗಳು ಪುತ್ಥಳಿಯನ್ನು ವಿರೂಪಗೊಳಿಸಿರುವುದು ತಾಲೂಕು ಕಂಡ ಶ್ರೇಷ್ಠ ನಾಯಕನಿಗೆ ಅಪಮಾನ ಎಂದು ಅವರು ಹೇಳಿದ್ದಾರೆ.ಅಲ್ಲದೇ ಪದೇ ಪದೆ ದುಷ್ಕರ್ಮಿಗಳು ಪುತ್ಥಳಿಯನ್ನು ಹಾಳು ಮಾಡುವ ಹೀನ ಕೆಲಸ ಮಾಡುತ್ತಿದ್ದಾರೆ. ಕೂಡಲೇ ಈ ಬಗ್ಗೆ ಪೊಲೀಸರು ಮೊಕದ್ದಮೆ ದಾಖಲಿಸಿ ಕಿಡಿಗೇಡಿಗಳನ್ನು ಬಂಧಿಸಬೇಕು ಎಂದು ಅವರು ಒತ್ತಾಯ ಮಾಡಿದ್ದಾರೆ.

- Advertisement -

ಪ್ರೊ.ಎ.ಲಕ್ಷ್ಮೀಸಾಗರ್ ಅವರು 2007ರಲ್ಲಿ ರಾಜ್ಯಸಭೆ ಸದಸ್ಯರಾಗಿದ್ದ ವೇಳೆ ತಮ್ಮ ವಿಶೇಷ ಅನುದಾನದಲ್ಲಿ ತಾಲೂಕಿನ ವರ್ಲಕೊಂಡ ಹಾಗೂ ಸೋಮೇನಹಳ್ಳಿ ಸರಕಾರಿ ಪ್ರೌಢಶಾಲೆಗಳನ್ನು ಅಭಿವೃದ್ಧಿಪಡಿಸಿದ್ದರು. 2008ರಲ್ಲಿ ಅವರು ನಿಧನರಾದ ನಂತರ ವರ್ಲಕೊಂಡ ಶಾಲೆಯ ಆವರಣದಲ್ಲೇ ಅವರನ್ನು ಸಮಾಧಿ ಮಾಡಿ ಸ್ಮಾರಕ ನಿರ್ಮಿಸಲಾಗಿತ್ತು.ಅಭಿಮಾನಿಗಳು ಹಾಗೂ ಗ್ರಾಮಸ್ಥರು ಲಕ್ಷ್ಮೀಸಾಗರ್‌ ಅವರ ಪುತ್ಥಳಿ ಇಟ್ಟು ಗೌರವ ಸಲ್ಲಿಸಿದ್ದರು.

ಮತ್ತೊಮ್ಮೆ ಮರುಕಳಿಸಿದ ಘಟನೆ:

ಈ ಹಿಂದೆ ಸಹ ಈ ಪುತ್ಥಳಿಯನ್ನು ಕಿಡಿಗೇಡಿಗಳು ವಿರೂಪಗೊಳಿಸಿದ್ದರು. ಅದನ್ನು ತೆರವು ಮಾಡಿ ಮತ್ತೆ ಹೊಸ ಪುತ್ಥಳಿಯನ್ನು ಕಳೆದ ಸೆಪ್ಟೆಂಬರ್ 12ರಂದು ಇಡಲಾಗಿತ್ತು. ಆದರೆ ಅಕ್ಟೋಬರ್‌ 6ರ ರಾತ್ರಿ ಕಿಡಿಗೇಡಿಗಳು ಮತ್ತೆ ಹೊಸ ಪುತ್ಥಳಿಯ ಮೂಗನ್ನು ಭಗ್ನಗೊಳಿಸಿ ವಿರೂಪಗೊಳಿಸಿದ್ದಾರೆ. ಪೊಲೀಸರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪುತ್ಥಳಿಯನ್ನು ವಿರೂಪಗೊಳಿಸಿದ ಕಿಡಿಗೇಡಿಗಳನ್ನು ಬಂಧಿಸಬೇಕು. ಹೊಸ ಪುತ್ಥಳಿ ವೆಚ್ಚವನ್ನು ದುಷ್ಕರ್ಮಿಗಳಿಂದಲೇ ವಸೂಲಿ ಮಾಡಬೇಕು. ಈ ಕೃತ್ಯ ಖಂಡನೀಯ. ಕಿಡಿಗೇಡಿಗಳು ಎಷ್ಟೇ ಪ್ರಭಾವಿಗಳಾಗಿದ್ದರೂ ಅವರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಬಾಬು ಒತ್ತಾಯಿಸಿದ್ದಾರೆ.

ಶಾಲೆ ಕುಡುಕರ ತಾಣವಾಗಿದೆ:

ವಿದ್ಯೆ ಕಲಿಸುವ ಪವಿತ್ರ ತಾಣವಾದ ವರ್ಲಕೊಂಡ ಸರಕಾರಿ ಪ್ರೌಢಶಾಲೆಯ ಆವರಣವು ಇತ್ತೀಚಿನ ದಿನಗಳಲ್ಲಿ ಕುಡುಕರ ತಾಣವಾಗಿದೆ. ರಾತ್ರಿಯಾಗುತ್ತಲೇ ಕುಡುಕರ ಗುಂಪು ಶಾಲೆಯ ಆವರಣದಲ್ಲಿ ಕುಳಿತು ಸುತ್ತಲಿನ ಪರಿಸರ ಹಾಳು ಮಾಡಿ ಹೋಗುತ್ತಿದೆ. ವಿದ್ಯಾರ್ಥಿಗಳು ನಿತ್ಯ ಬೆಳಗ್ಗೆ ಬಂದು ಕುಡಿದು ಬಿಸಾಡಿರುವ ಬಾಟಲಿ ಹಾಗೂ ಪ್ಲಾಸ್ಟಿಕ್‌ ತ್ಯಾಜ್ಯವನ್ನು ಸ್ವಚ್ಛಗೊಳಿಸಬೇಕಾದ ಪರಿಸ್ಥಿತಿ ಎದುರಾಗಿದೆ ಎಂದರು.

ಪೊಲೀಸ್ ಭದ್ರತೆಗೆ ಆಗ್ರಹ:

ಪ್ರೌಢಶಾಲೆ ಆವರಣದಲ್ಲಿರುವ ಪ್ರೊ.ಎ.ಲಕ್ಷ್ಮೀಸಾಗರ್ ಅವರ ಪುತ್ಥಳಿ ಎರಡನೇ ಸಲ ಭಗ್ನವಾಗಿದೆ. ಇದಕ್ಕೆ ಮುಖ್ಯ ಕಾರಣ ಶಾಲೆ ಆವರಣ ಕುಡುಕರ ತಾಣವಾಗಿರುವುದು. ರಾತ್ರಿ ಸಮಯದಲ್ಲಿ ಪೊಲೀಸ್ ಬೀಟ್ ವ್ಯವಸ್ಥೆ ಇಲ್ಲದ ಕಾರಣ ಇಲ್ಲಿನ ಕುಡುಕರಿಗೆ ಯಾವುದೇ ಭಯ ಇಲ್ಲವಾಗಿದೆ. ಇನ್ನು ಮುಂದೆಯಾದರೂ ಈ ರೀತಿಯ ಘಟನೆಗಳು ನಡೆಯದಂತೆ ಶಾಲೆಗೆ ಸೂಕ್ತ ಬಂದೋಬಸ್ತ್ ಕಲ್ಪಿಸಬೇಕೆಂದು ಶಾಲೆಯ ಕುಂಬಾರ ಸಂಘದ ಅಧ್ಯಕ್ಷರಾದ ಕೆ ಮುನಿಸ್ವಾಮಿ ಆಗ್ರಹಿಸಿದ್ದಾರೆ.

Join Whatsapp