ಮಂಗಳೂರು: ಇಲ್ಲಿನ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ವಿಸ್ತರಣೆಗಾಗಿ ಅಗತ್ಯ ಜಮೀನನ್ನು ಒಪ್ಪಿಸಿದ ಭೂ ಮಾಲೀಕರಿಗೆ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ (ಡಿಆರ್ಸಿ) ನೀಡುವ ಪ್ರಕ್ರಿಯೆಯನ್ನು ಚುರುಕುಗೊಳಿಸಲಾಗಿದೆ.
ಅದಕ್ಕಾಗಿ ಮಂಗಳೂರು ಮಹಾನಗರಪಾಲಿಕೆ ಕಾರ್ಯವಿಧಾನಗಳನ್ನು ಸರಳಗೊಳಿಸುತ್ತಿದೆ. ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಕಾಯಿದೆ-2021ರ ಅನ್ವಯ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರವನ್ನು ನೀಡುವ ಸರಳೀಕೃತ ಪ್ರಕ್ರಿಯೆ ನಡೆಸಲು ಡಿ.31ರ ಶುಕ್ರವಾರ ಮಹಾಪೌರರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನೆ (ತಿದ್ದುಪಡಿ) ಕಾಯಿದೆ 2021ರ ಅಕ್ಟೋಬರ್ 07ರ ಪ್ರಾರಂಭದ ದಿನಗಳಿಂದ 5 ವರ್ಷ ಅಥವಾ ಅದಕ್ಕೂ ಮುಂಚಿತವಾಗಿ ರಸ್ತೆ ಅಗಲೀಕರಣ ಪ್ರಕ್ರಿಯೆಗಳಿಗೆ ಅಗತ್ಯ ಜಮೀನನ್ನು ಭೂ ಮಾಲೀಕರು ಮಂಗಳೂರು ಮಹಾನಗರ ಪಾಲಿಕೆಯ ಸ್ವಾಧೀನ ಬಿಟ್ಟುಕೊಟ್ಟ ಪ್ರಕರಣಗಳಿಗೆ ಫಾಸ್ಟ್-ಟ್ರ್ಯಾಕ್ ಪ್ರಕ್ರಿಯೆಯ ಮೂಲಕ ಅಭಿವೃದ್ಧಿ ಹಕ್ಕುಗಳ ಪ್ರಮಾಣಪತ್ರ (ಡಿಆರ್ಸಿ) ವನ್ನು ನೀಡಲು ಕ್ರಮ ಕೈಗೊಳ್ಳಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಗೆ ಭೌತಿಕವಾಗಿ ಹಸ್ತಾಂತರಿಸಿರುವ ಮತ್ತು ಇದುವರೆಗೆ ಡಿಆರ್ಸಿ ಪಡೆಯದ ಎಲ್ಲ ಭೂಮಾಲೀಕರು ಅದನ್ನು ಪಡೆಯುವ ಸಂಬಂಧ ಸೂಕ್ತ ದಾಖಲೆಗಳೊಂದಿಗೆ ಮಂಗಳೂರು ಮಹಾನಗರ ಪಾಲಿಕೆಯ ಟಿಡಿಆರ್ ಸೆಲ್ನಲ್ಲಿ ಅರ್ಜಿ ಸಲ್ಲಿಸಬಹುದು.
ಜಮೀನನ್ನು ಬಿಟ್ಟುಕೊಟ್ಟ ಪ್ರಕರಣಗಳ ಬಗ್ಗೆ ಫಾಸ್ಟ್-ಟ್ರ್ಯಾಕ್ ನಲ್ಲಿ ಕ್ರೋಢೀಕೃತ ವಿವರಗಳು ಅದರ ಸ್ಥಿತಿಯನ್ನು ಮಂಗಳೂರು ಮಹಾನಗರ ಪಾಲಿಕೆಯ ವೆಬ್ಸೈಟ್ ನಲ್ಲಿ ಪ್ರಕಟಿಸಲಾಗುವುದು.
ಅದಕ್ಕೆ ಸಂಬಂಧಿಸಿದಂತೆ 2021ರ ಅಕ್ಟೋಬರ್ 07ರ ತಿದ್ದುಪಡಿ ಕಾಯ್ದೆ ಪ್ರಾರಂಭದ ದಿನಾಂಕದಿಂದ 5 ವರ್ಷ ಅಥವಾ ಮುಂಚಿತವಾಗಿ ಬಿಟ್ಟುಕೊಟ್ಟಿರುವ ಬಗ್ಗೆ ವಿವರಗಳನ್ನು ಮಹಾನಗರ ಪಾಲಿಕೆಯ ವೆಬ್ ಸೈಟ್ ಹಾಗೂ ಟಿ.ಡಿ.ಆರ್ ಸೆಲ್ ನ ನೋಟೀಸು ಬೋರ್ಡ್ನಲ್ಲಿ ಪ್ರಕಟಿಸಲಾಗುವುದು.
ಇದಕ್ಕೆ ಆಕ್ಷೇಪಣೆಗಳಿದ್ದಲ್ಲೀ 15ದಿನದೊಳಗೆ ಲಿಖಿತವಾಗಿ ಮಂಗಳೂರು ಮಹಾನಗರ ಪಾಲಿಕೆಯ ಆಯುಕ್ತರ ಗಮನಕ್ಕೆ ತರಬಹುದು. ನಂತರದ ದಿನಗಳಲ್ಲಿ ಸ್ವೀಕೃತವಾದ ಆಕ್ಷೇಪಣೆಗಳನ್ನು ಪರಿಗಣಿಸಲಾಗುವುದಿಲ್ಲ ಮುಂದಿನ ದಿನಗಳಲ್ಲಿ ತ್ವರಿತಗತಿಯಲ್ಲಿ ಟಿಡಿಆರ್ ನೀಡುವ ಸಲುವಾಗಿ ಪಾಲಿಕೆ ವತಿಯಿಂದ ಅದಾಲತ್ ನಡೆಸಲಾಗುವುದು. ಬಿಟ್ಟುಕೊಡಲಾದ ಜಮೀನಿನ ಸರ್ವೆ ಕಾರ್ಯ ಸಂಬಂಧ ಮಾಲೀಕರು, ಸಾರ್ವಜನಿಕರು ಸಹಕರಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗೆ ಮಂಗಳೂರು ಮಹಾನಗರ ಪಾಲಿಕೆಯ ನಗರ ಯೋಜನಾ ವಿಭಾಗದ ಟಿ.ಡಿ.ಆರ್ ಕೋಶವನ್ನು ಸಂಪರ್ಕಿಸುವಂತೆ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.