ಮೈಸೂರು: ಐಪಿಎಸ್ ಅಧಿಕಾರಿ ರವಿ ಚನ್ನಣ್ಣನವರ್ ವಿರುದ್ಧ ಭ್ರಷ್ಟಾಚಾರ ಆರೋಪ ಪ್ರಕರಣಕ್ಕೆ ಸಂಬಂಧದ ದೂರು ಆಧರಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಯಾರು ಬೇಕಾದರೂ ಯಾರ ಮೇಲೂ ಆರೋಪ ಮಾಡಬಹುದು. ಅದರ ಸತ್ಯಾಸತ್ಯತೆಯನ್ನು ತಿಳಿಯಲು ತನಿಖೆ ನಡೆಸಲಾಗುವುದು ಎಂದರು.
ನಗರದ ಪೊಲೀಸ್ ಅಕಾಡೆಮಿ ಕವಾಯತು ಮೈದಾನದಲ್ಲಿ 45ನೇ ತಂಡದ ಪಿಎಸ್ ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸುದ್ದಿಗಾರರ ಜೊತೆ ಮಾತನಾಡಿದ ಅವರು, ಐಪಿಎಸ್ ಅಧಿಕಾರಿ ರವಿ ಚೆನ್ನಣ್ಣನವರ್ ಅವರಿಗೆ ವರ್ಗಾವಣೆ ಶಿಕ್ಷೆ ನೀಡಿಲ್ಲ ಅದು ಆಡಳಿತಾತ್ಮಕ ನಿರ್ಧಾರ ಎಂದು ಸ್ಪಷ್ಟನೆ ನೀಡಿದರು.
ಬಹಳಷ್ಟು ಮಂದಿ ಪೊಲೀಸ್ ಠಾಣೆಗಳು ಮರ್ಯಾದಸ್ಥರು ಹೋಗುವ ಸ್ಥಳವಲ್ಲ ಎನ್ನುತ್ತಾರೆ. ಆದರೆ ಇಲ್ಲಿ ಹಲವರು ಉನ್ನತ ಶಿಕ್ಷಣ ಪಡೆದವರಿದ್ದಾರೆ. ಈ ತರಬೇತಿ ನೀಡಿರುವುದು ಯಾರಿಗೂ ಹಿಂಸೆ ಕೊಡಲು ಅಲ್ಲ. ಇದು ಜನರ ರಕ್ಷಣೆಗೆ ನೀಡಿರುವ ತರಬೇತಿಯಾಗಿದೆ ಎಂದರು.
ರಾಜ್ಯದಲ್ಲಿ ಸೈಬರ್ ವಿಂಗ್ ಎಫ್ ಎಸ್ ಎಲ್ ವಿಭಾಗವನ್ನು ಬಲಪಡಿಸುತ್ತಿದ್ದೇವೆ. ಪ್ರತಿ ಜಿಲ್ಲೆಯಲ್ಲೂ ಎಫ್ ಎಸ್ ಎಲ್ ಲ್ಯಾಬ್ ಆರಂಭಿಸಲಿದ್ದೇವೆ. ಶಸ್ತ್ರಾಸ್ತ್ರ ಒದಗಿಸಲಿದ್ದೇವೆ, ಹೆಣ್ಣು ಕೇವಲ ಅಡುಗೆ ಮನೆಗೆ ಸೀಮಿತವಲ್ಲ. ಸಾರ್ವಜನಿಕರ ರಕ್ಷಣೆಗೂ ಸಹ ಆಕೆ ಬದ್ಧ ಎಂದು ಹೇಳಿದರು.
ರಕ್ಷಣೆ ಅಂದರೆ ಗಡಿಯ ಸೈನಿಕರು. ಆಂತರಿಕ ಭದ್ರತೆ ನಾಗರೀಕರ ಮಾನ ಪ್ರಾಣ ಕಾಪಾಡುವ ಹೊಣೆಗಾರಿಕೆ ಪೊಲೀಸರದ್ದು. ಸೈನಿಕರಷ್ಟೇ ಪೊಲೀಸರು ದಿನದ 24 ಗಂಟೆ ಕೆಲಸ ಮಾಡುತ್ತಿದ್ದಾರೆ. ಸೈನಿಕರಿಗಿಂತ ಪೊಲೀಸರು ವಿಭಿನ್ನ. ಸೈನಿಕರಿಗೆ ಶತ್ರುಗಳು ಕಾಣಿಸುತ್ತಾರೆ. ಕೊಲ್ಲಬೇಕು ಅಥವಾ ಮಡಿಯಬೇಕು. ಆದರೆ ಪೊಲೀಸರು ಕೊಲ್ಲಲು ಕಾನೂನು ಇದಕ್ಕೆ ಅಡ್ಡಿಬರುತ್ತದೆ. ಸೈನಿಕರಷ್ಟು ಕಠಿಣವಾಗಿ ವರ್ತಿಸುವ ಹಾಗೆ ಇಲ್ಲ ಎಂದರು.
ಸಾರ್ವಜನಿಕರನ್ನು ಬಂಧುಗಳಂತೆ ನೋಡಬೇಕು. ಕಾನೂನು ವಿರೋಧಿಸುವ ಕ್ರಿಮಿನಲ್ ಗಳಿಗೆ ಭಯ ಹುಟ್ಟಿಸಬೇಕು. ನಾಗರಿಕರಿಗೆ ಸಜ್ಜನರಿಗೆ ಅಭಯವನ್ನು ನೀಡಬೇಕು. ಕೆಲವು ಪೊಲೀಸರು ಅನಿಷ್ಟತನ ನೋಡಿದಾಗ ಉತ್ತಮ ನಡವಳಿಕೆಯವರು ತಲೆ ತಗ್ಗಿಸಬೇಕಾಗಿದೆ. ಒಮ್ಮೆಯೂ ತಲೆ ತಗ್ಗಿಸುವ ಕೆಲಸ ಮಾಡಬಾರದು. ಯಾವುದೇ ಅಪಚಾರಗಳು ನಮ್ಮಿಂದ ಆಗಬಾರದು. ನಾವು ಅವರ ರಕ್ಷಕರಾಗಬೇಕು ನಾವು ಯಾರ ಗುಲಾಮರಾಗಬಾರದು ಎಂದು ತಿಳಿಸಿದರು.
ಎಲ್ಲಿಯವರೆಗೂ ಸಾರ್ವಜನಿಕರು ಹೊಣೆಗಾರಿಕೆ ಅರಿಯುವುದಿಲ್ಲವೋ ಅಲ್ಲಿಯವರೆಗೂ ಪೊಲೀಸರಿಂದ ಕಾನೂನಾತ್ಮಕ ಕ್ರಮ ಅನಿವಾರ್ಯ. ಜನರು ಅಡ್ಡಾದಿಡ್ಡಿ ವಾಹನ ನಿಲ್ಲಿಸುವುದರಿಂದ ಸಮಸ್ಯೆಯಾಗುತ್ತಿದೆ. ಖಾಸಗಿಯವರಿಂದ ಟೋಯಿಂಗ್ ವೇಳೆ ಜನರಿಗೆ ಸಮಸ್ಯೆಯಾಗುತ್ತಿದೆ. ಹೆಚ್ಚು ಕಮಿಷನ್ ಗಾಗಿ ತೊಂದರೆ ನೀಡಿರುವುದು ಸತ್ಯ. ಹೀಗಾಗಿ ಸದ್ಯಕ್ಕೆ ಟೋಯಿಂಗ್ ನಿಲ್ಲಿಸಲಾಗಿದೆ. ಇಂದು ಈ ಬಗ್ಗೆ ಸಂಜೆ ಸಭೆ ನಡೆಸಲಾಗುತ್ತಿದೆ. ಸಭೆಯಲ್ಲಿ ವಿಸ್ತೃತವಾದ ಚರ್ಚೆ ನಡೆಸಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ ಎಂದರು.
ಬಜೆಟ್ನಲ್ಲಿ ಗೃಹ ಇಲಾಖೆಗೆ ಹೆಚ್ಚು ಪ್ರಾತಿನಿಧ್ಯ ಸಿಗಲಿದೆ. ನಮ್ಮ ಸರ್ಕಾರ ಬಂದ ದಿನದಿಂದ ಗೃಹ ಇಲಾಖೆಗೆ ಒತ್ತು ನೀಡಲಾಗಿದೆ. ಗೃಹ ಇಲಾಖೆಯ ಎಲ್ಲಾ ಹುದ್ದೆ ಭರ್ತಿ ಮಾಡಲಾಗುತ್ತಿದೆ. ನಿವೃತ್ತಿಯಾದಷ್ಟೇ ಹುದ್ದೆಗೆ ನೇಮಕ ಮಾಡಲಾಗುವುದು ಎಂದು ತಿಳಿಸಿದ್ದಾರೆ.
ಪೊಲೀಸ್ ಇಲಾಖೆ ಬೇರೆ ಇಲಾಖೆಗಿಂತ ಭಿನ್ನವಾಗಿದೆ ಇಲಾಖೆಗೆ ಹೊಸ ರಕ್ತ ಬರಬೇಕು. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬೇಕು. ಈ ಬಗ್ಗೆ ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ನೂತನ 228 ಪಿಎಸ್ಐಗಳು ಸೇವೆಗೆ
ಮೈಸೂರಿನಲ್ಲಿ ಇಂದು ನಡೆದ 45ನೇ ತಂಡದ ಪಿಎಸ್ಐ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥಸಂಚಲನದಲ್ಲಿ ತರಬೇತಿ ಪೂರ್ಣಗೊಳಿಸಿದ 228 ಮಂದಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ( ಪಿಎಸ್ಐ) ಗಳು ಸೇವೆಗೆ ಲಭ್ಯವಾಗಿದ್ದಾರೆ.
228 ಮಂದಿ ಪಿಎಸ್ ಐಗಳಲ್ಲಿ ಬಿಇ ಮೆಕ್ಯಾನಿಕಲ್ 37 , ಬಿಇ ಸಿವಿಲ್ 17, ಬಿಕಾಂ 16, ಬಿಎಸ್ಸಿ ಅಗ್ರಿಕಲ್ಚರ್ 10, ಬಿಇ ಕಂಪ್ಯೂಟರ್ ಸೈನ್ಸ್ 9, ಎಂಎಸ್ಸಿ ಅಗ್ರಿಕಲ್ಚರ್ 4, ಎಂಎ ಎಕನಾಮಿಕ್ಸ್ 2,ಎಂಎಸ್ಸಿ ಬಾಟ್ನಿ, ಕೆಮಿಸ್ಟ್ರಿ, ಮ್ಯಾಥಮೆಟಿಕ್ ನ ತಲಾ ಒಬ್ಬರು, ಬಿಎಸ್ಸಿ ಬಿಎಡ್ 1ಬಿಇ ಏರೋನಾಟಿಕ್ಸ್, ಆಟೋಮೊಬೈಲ್ ತಲಾ ಒಬ್ಬರು, ಎಂಬಿಎ ಮುಗಿಸಿದ ಇಬ್ಬರಿದ್ದಾರೆ.
228 ಮಂದಿ ಪಿಎಸ್ ಐಗಳಲ್ಲಿ ಬೆಳಗಾವಿ 65, ಬಾಗಲಕೋಟೆ 52, ವಿಜಯಪುರ 38, ರಾಯಚೂರು 18, ಕಲಬುರಗಿ 14, ಬೆಳಗಾವಿ ನಗರ 11, ಕೊಪ್ಪಳ 7, ಯಾದಗಿರಿ 6, ಗದಗ 6, ಬೀದರ್ 5, ಧಾರವಾಡ 4, ಮೈಸೂರು 1, ಬೆಂಗಳೂರಿನ ಒಬ್ಬ ಪಿಎಸ್ಐ ಪ್ರಶಿಕ್ಷಣಾರ್ಥಿ ಅಭ್ಯರ್ಥಿಗಳಿದ್ದು ಉತ್ತರ ಕರ್ನಾಟಕ ಭಾಗದವರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.
ಗ್ರಾಮೀಣ ಭಾಗದವರ ಪಾರುಪತ್ಯ 175 ಅಭ್ಯರ್ಥಿಗಳು ಗ್ರಾಮೀಣ ಭಾಗದಿಂದ, 53 ಅಭ್ಯರ್ಥಿಗಳು ನಗರ ಪ್ರದೇಶದಿಂದ ಬಂದವರಿದ್ದಾರೆ. 228 ಮಂದಿ ಪಿಎಸ್ ಐಗಳಲ್ಲಿ 183 ಪುರುಷರು, 45 ಮಹಿಳಾ ಪ್ರಶಿಕ್ಷಣಾರ್ಥಿಗಳಿದ್ದಾರೆ. ಇನ್ನೂ ಅವಿವಾಹಿತರು 187, ವಿವಾಹಿತರು 41 ಜನ ಅಭ್ಯರ್ಥಿಗಳು ಇದ್ದಾರೆ.