ಉತ್ತರ ಪ್ರದೇಶದಲ್ಲಿ ಪ್ರಖರ ಹಿಂದುತ್ವದ ಮೊರೆ ಹೋದ ಕಾಂಗ್ರೆಸ್

Prasthutha|

ಲಕ್ನೋ: ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಪ್ರಖರ ಹಿಂದುತ್ವದ ಮೊರೆ ಹೋಗಿದೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಕಟ್ಟರ್ ಹಿಂದುತ್ವವನ್ನು ಪ್ರಖರ ಹಿಂದುತ್ವದ ಮೂಲಕ ಎದುರಿಸಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಕಾರ್ಯತಂತ್ರ ರೂಪಿಸಿದ್ದಾರೆ.

- Advertisement -

ಉತ್ತರ ಪ್ರದೇಶದ ಗಡಿ ನಗರವಾದ ಚಿತ್ರಕೂಟ ಎಂಬಲ್ಲಿ ಕಾಂಗ್ರೆಸ್ ಹಮ್ಮಿಕೊಂಡಿದ್ದ ವಿಶ್ವ ಪ್ರಖ್ಯಾತ ಕಾಮದಗಿರಿ ದೇವಾಲಯದಲ್ಲಿ ಸುಮಾರು ಐದು ಕಿಲೋಮೀಟರ್ ಮೌನ್ ಪರಿಕ್ರಮ ಯಾತ್ರೆ ಸಂಪೂರ್ಣವಾಗಿ ಬಿಜೆಪಿಯ ಯಾತ್ರೆಯಂತೆ ಗೋಚರಿಸಿದೆ. ಇಲ್ಲಿ ಪ್ರಿಯಾಂಕಾ ಸೇರಿದಂತೆ ಕಾಂಗ್ರೆಸ್ ಕಾರ್ಯಕರ್ತರು ಕೇಸರಿ ಬಣ್ಣದ ಮೊರೆ ಹೋಗಿದ್ದರು.

ಈ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಜೈ ಶ್ರೀರಾಮ್ ಘೋಷಣೆ ಕೂಗಿ ಪ್ರಿಯಾಂಕಾ ಅವರನ್ನು ಸ್ವಾಗತಿಸಿದ್ದರು. ಇಡೀ ಸಭೆಯಲ್ಲಿ ಕಾಂಗ್ರೆಸ್ ಧ್ವಜಗಳೊಂದಿಗೆ ಭಗವಾಧ್ವಜಗಳು ಹಾರಾಡುತ್ತಿದ್ದುದು ವಿಶೇಷವಾಗಿತ್ತು.

- Advertisement -

ಕಾಮದಗಿರಿ ದೇವಾಲಯದ ಪರಿಕ್ರಮ ಯಾತ್ರೆ ನಡೆಸುವ ನಿರ್ಧಾರ ಅತ್ಯುತ್ತಮ ಪೂರ್ವಯೋಜಿತ ತಂತ್ರ ಎಂದು ರಾಜಕೀಯ ವಿಶ್ಲೇಷಕರು ಬಣ್ಣಿಸಿದ್ದಾರೆ. ಪ್ರಸಕ್ತ ಈ ದೇವಾಲಯದಲ್ಲಿ 14 ವರ್ಷಗಳ ವನವಾಸದಲ್ಲಿ 11 ವರ್ಷಗಳಿಗಿಂತಲೂ ಹೆಚ್ಚು ಸಮಯವನ್ನು ಸೀತೆ ಮತ್ತು ಲಕ್ಷ್ಮಣ ಕಳೆದಿದ್ದರು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಅಲ್ಲಿ ರಾಮನನ್ನು ಪೂಜಿಸಲಾಗುತ್ತದೆ.

ಪ್ರಿಯಾಂಕಾ ಗಾಂಧಿ ಬುಧವಾರ ಚಿತ್ರಕೂಟಕ್ಕೆ ಭೇಟಿ ನೀಡಿ ಅಲ್ಲಿನ ಮಹಿಳೆಯರನ್ನು ಉದ್ದೇಶಿಸಿ ಸಭೆಯಲ್ಲಿ ಮಾತನಾಡಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ, ಶ್ಲೋಕಗಳೊಂದಿಗೆ ತನ್ನ ಭಾಷಣವನ್ನು ಆರಂಭಿಸಿ ಗಮನ ಸೆಳೆದಿದ್ದರು. ಅದರಲ್ಲೂ ವಿಶೇಷವಾಗಿ ನವರಾತ್ರಿ ಉತ್ಸವದಲ್ಲಿ ದುರ್ಗಾದೇವಿಯನ್ನು ಮೆಚ್ಚಿಸಲು ಅವರು ಉಪವಾಸ ವ್ರತವನ್ನು ಅಚರಿಸಿದ್ದರು ಮತ್ತು ಜೈ ಮಾತಾ ದಿ ಎಂದು ಜಪಿಸಿದ್ದರು.

ಮಾತ್ರವಲ್ಲ ವಾರಣಾಸಿಗೆ ಭೇಟಿ ನೀಡಿದ ಪ್ರಿಯಾಂಕಾ ಅವರು, ವಿಶ್ವ ವಿಖ್ಯಾತ ಕಾಶಿ ವಿಶ್ವನಾಥ್ ದೇವಸ್ಥಾನಕ್ಕೂ ಭೇಟಿ ನೀಡಿ ಮತ್ತು ಅಲ್ಲಿ ಕೂಷ್ಮಾಂಡ ದೇವಾಲಯದಲ್ಲಿ ಪೂಜೆ ಸಲ್ಲಿಸುವ ಮೂಲಕ ಕಾಂಗ್ರೆಸ್ ಪ್ರಖರ ಹಿಂದುತ್ವದ ಪರ ಎಂದು ಸಾಬೀತುಪಡಿಸಿದ್ದಾರೆ.
ಮುಂಬರುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಪ್ರಿಯಾಂಕಾ ಗಾಂಧಿ, ತೀವ್ರ ಹಿಂದುತ್ವವನ್ನು ಪ್ರತಿಪಾದಿಸಲು ನಿರ್ಧರಿಸಿದ್ದಾರೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ ತನ್ನ ಕಾರ್ಯಕರ್ತರಿಗೆ ಜೈ ಶ್ರೀ ರಾಮ್ ಘೋಷಣೆ ಕೂಗಲು ಅದೇಶಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಒಟ್ಟಿನಲ್ಲಿ ಬಿಜೆಪಿಯ ಕಟ್ಟರ್ ಹಿಂದುತ್ವಕ್ಕೆ ಪರ್ಯಾಯವಾಗಿ ಕಾಂಗ್ರೆಸ್ ಕೂಡ ಹಿಂದುತ್ವ ಅಜೆಂಡಾವನ್ನು ಜನತೆಯ ಮುಂದಿರಿಸಿ ಉತ್ತರ ಪ್ರದೇಶ ಚುನಾವಣೆಯನ್ನು ಗೆಲ್ಲುವ ಯೋಜನೆಯೊಂದಿಗೆ ತನ್ನ ರಾಜಕೀಯ ತಂತ್ರಗಾರಿಕೆಯನ್ನು ಹೆಣೆದಿರುವುದು ವ್ಯಾಪಕ ರಾಜಕೀಯ ಸಂಚಲನಕ್ಕೆ ನಾಂದಿಹಾಡಿದೆ.



Join Whatsapp