ಬೆಂಗಳೂರು: ಸಿಐಡಿ ಅಧಿಕಾರಿಗಳ ಮುಂದೆ ಹಾಜರಾಗಿ ಪ್ರಿಯಾಂಕ್ ಖರ್ಗೆ ತನಿಖೆಗೆ ಸಹಕರಿಸುವುವದರ ಬದಲು ಪಲಾಯನವಾದ ನೀತಿಯನ್ನು ಅನುಸರಿಸಿದ್ದಾರೆ ಎಂದು ಆರೋಪಿಸಿದ್ದ ರಾಜ್ಯ ಗೃಹ ಸಚಿವ ಅರಗ ಜ್ಞಾನೇಂದ್ರಗೆ ಕಾಂಗ್ರೆಸ್ ವಕ್ತಾರ, ಶಾಸಕ ಪ್ರಿಯಾಂಕ್ ಖರ್ಗೆ ತಿರುಗೇಟು ನೀಡಿದ್ದಾರೆ.
ಪ್ರಿಯಾಂಕ್ ತನ್ನ ಹೊಣೆಗಾರಿಕೆಯನ್ನು ಮರೆತು, ತಮ್ಮಲ್ಲಿ ಯಾವುದೇ ಸಾಕ್ಷ್ಯಾಧಾರ ಗಳಿಲ್ಲ, ಕೇವಲ ಸಾಮಾಜಿಕ ಜಾಲತಾಣದಲ್ಲಿರುವ ಮಾಹಿತಿಯನ್ನು ಮಾತ್ರ ಪ್ರಕಟಿಸಿದ್ದೆ ಎಂಬ ಬಾಲಿಶ ಹೇಳಿಕೆ ನೀಡಿದ್ದಾರೆಂದು ಅರಗ ಆರೋಪಿಸಿದ್ದರು. ಈ ಕುರಿತು ಪ್ರತಿಕ್ರಿಯಿಸಿರುವ ಪ್ರಿಯಾಂಕ್ ಖರ್ಗೆ, ಗೃಹಸಚಿವರು ಯಾರು ಬಾಲಿಶವಾಗಿ ಮಾತನಾಡುವುದು ಎಂದು ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು ಎಂದಿದ್ದಾರೆ.
ಟ್ವೀಟ್ ಮೂಲಕ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ, ಗೃಹ ಖಾತೆ ನನ್ನ ಸಾಮರ್ಥ್ಯಕ್ಕೆ ಮೀರಿದ ಜವಾಬ್ದಾರಿ, ನನಗೆ ನಿದ್ದೆ ಬರುತ್ತಿಲ್ಲ , ಕಾಂಗ್ರೆಸ್ ನವರು ನನ್ನನ್ನು ರೇಪ್ ಮಾಡ್ತಿದ್ದಾರೆ , ಸಂತ್ರಸ್ತೆ ಸಂಜೆ ಸಮಯದಲ್ಲಿ ಅಲ್ಲಿಗೇಕೆ ಹೋಗಿದ್ದಳು? ಪೊಲೀಸರು ಎಂಜಲು ಕಾಸು ತಿಂದು ಮಲಗುತ್ತಾರೆ, ಚಂದ್ರು ಹತ್ಯೆ ಭಾಷೆ ಕಾರಣಕ್ಕಾಗಿದ್ದು ಎಂಬ ಹೇಳಿಕೆ, ನಂತರ ವಿಷಾದ ಇವೆಲ್ಲವೂ ಗೃಹ ಸಚಿವರ ಬಾಲಿಶ ಮಾತುಗಳು ಎಂದು ಬರೆದಿದ್ದಾರೆ.
ಇನ್ನೊಂದು ಟ್ವೀಟ್’ನಲ್ಲಿ ಇವೆಲ್ಲವೂ ಮಾನ್ಯ ಗೃಹಸಚಿವರಾದ ಅರಗ ಜ್ಞಾನೇಂದ್ರ ಅವರ ಬಾಲಿಶತನದ ಮಾತುಗಳು, ಅವರು ಒಮ್ಮೆ ಯಾರು ಬಾಲಿಶವಾಗಿ ಮಾತನಾಡುವುದು ಎಂದು ಆತ್ಮಾವಲೋಕನ ಮಾಡಿಕೊಂಡರೆ ಒಳ್ಳೆಯದು. ಆತ್ಮಾವಲೋಕನ ಸಾಧ್ಯವಿಲ್ಲದಿದ್ದರೆ ಶಾಸಕರಾದ ಯತ್ನಾಳ್ ಅವರಲ್ಲಿ ಗೃಹಸಚಿವರು ವಿಚಾರಿಸಿದರೆ ಯಾರದ್ದು ಬಾಲಿಶತನ, ಅಸಾಮರ್ಥ್ಯ ಎಂಬುದು ಸ್ಪಷ್ಟವಾಗಿ ತಿಳಿಯಲಿದೆ ಎಂದು ಪ್ರಿಯಾಂಕ್ ವ್ಯಂಗ್ಯವಾಡಿದ್ದಾರೆ.