ಬಿಜೆಪಿ ಪರ ಪ್ರಚಾರಕ್ಕಾಗಿ ರೋಗಿಗಳ ಭಾವನೆ ಜೊತೆ ಚೆಲ್ಲಾಟ: ಪೃಥ್ವಿ ರೆಡ್ಡಿ ಆಕ್ರೋಶ

Prasthutha|

ಬೆಂಗಳೂರು: ರಾಜ್ಯ ಸರ್ಕಾರ ಆರಂಭಿಸಿರುವ ನಮ್ಮ ಕ್ಲಿನಿಕ್’ಗಳು ಕೇವಲ ಬಿಜೆಪಿಯ ಪ್ರಚಾರ ಕೇಂದ್ರಗಳಾಗಿದ್ದು, ಸೂಕ್ತ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸದೇ ರೋಗಿಗಳ ಭಾವನೆ ಜೊತೆ ಚೆಲ್ಲಾಟವಾಡಲಾಗುತ್ತಿದೆ ಎಂದು ಆಮ್ ಆದ್ಮಿ ಪಾರ್ಟಿ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಟೀಕಿಸಿದ್ದಾರೆ.

- Advertisement -


ಆಮ್ ಆದ್ಮಿ ಪಾರ್ಟಿಯ ರಾಜ್ಯ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಪೃಥ್ವಿ ರೆಡ್ಡಿ, “ರಾಜ್ಯ ಬಿಜೆಪಿ ಸರ್ಕಾರವು ಆರಂಭಿಸಿರುವ ನಮ್ಮ ಕ್ಲಿನಿಕ್ ಹೇಗಿದೆಯೆಂದು ಪರಿಶೀಲಿಸಲು ಆಮ್ ಆದ್ಮಿ ಪಾರ್ಟಿ ತಂಡ ಭೇಟಿ ನೀಡಿತ್ತು. ಆಗ ಅವು ನಮ್ಮ ಕ್ಲಿನಿಕ್ ಅಲ್ಲ, ಬದಲಾಗಿ ಬಿಜೆಪಿ ಪ್ರಚಾರ ಕೇಂದ್ರಗಳು ಎಂದು ಅಲ್ಲಿ ಹಾಕಿರುವ ಬಿಜೆಪಿ ನಾಯಕರ ಫೋಟೋಗಳಿರುವ ಬ್ಯಾನರ್ ಹಾಗೂ ಅವ್ಯವಸ್ಥೆಗಳನ್ನು ನೋಡಿ ತಿಳಿದುಬಂದಿತು. ದೆಹಲಿ ಎಂಬ ಸಣ್ಣ ನಗರದಲ್ಲಿ ಆಮ್ ಆದ್ಮಿ ಪಾರ್ಟಿಯು ಈಗಾಗಲೇ 500 ಮೊಹಲ್ಲಾ ಕ್ಲಿನಿಕ್’ಗಳನ್ನು ತೆರೆದು, ಇನ್ನೂ 500 ಕ್ಲಿನಿಕ್’ಗಳನ್ನು ತೆರೆಯುವ ಪ್ರಯತ್ನದಲ್ಲಿದೆ. ಆದರೆ ಕರ್ನಾಟಕವೆಂಬ ದೊಡ್ಡ ರಾಜ್ಯದಲ್ಲಿ ಬಿಜೆಪಿ ಸರ್ಕಾರವು ಒಟ್ಟು 438 ನಮ್ಮ ಕ್ಲಿನಿಕ್’ಗಳಿಗೆ ಮಾತ್ರ ಯೋಜನೆ ರೂಪಿಸಿದೆ. ಇದರಲ್ಲಿ ಬೆಂಗಳೂರಿನಲ್ಲಿ 243 ಹಾಗೂ ಬೆಂಗಳೂರಿನ ಹೊರಗಿನ ಬೃಹತ್ ಪ್ರದೇಶದಲ್ಲಿ ಕೇವಲ 195 ಕ್ಲಿನಿಕ್’ಗೆ ಯೋಜನೆ ರೂಪಿಸಲಾಗಿದೆ. ಜನರಿಗೆ ಸಮೀಪದಲ್ಲೇ ಕ್ಲಿನಿಕ್ ಸಿಗಬೇಕು ಎಂಬ ಉದ್ದೇಶ ಈಡೇರಲು ಇದರಿಂದ ಸಾಧ್ಯವೇ?” ಎಂದು ಪ್ರಶ್ನಿಸಿದರು.


“ಆಮ್ ಆದ್ಮಿ ಪಾರ್ಟಿಯು ಬೆಂಗಳೂರಿನ ಶಾಂತಿನಗರದಲ್ಲಿ ಎರಡು ವರ್ಷಗಳಿಂದ ಆಮ್ ಆದ್ಮಿ ಕ್ಲಿನಿಕ್ ನಡೆಸುತ್ತಿದೆ. ಇದು ಬೆಳಗ್ಗೆ ಮಾತ್ರ ತೆರೆದಿರುತ್ತಿದ್ದು, ತಿಂಗಳಿಗೆ 8ರಿಂದ 10 ಲಕ್ಷ ರೂಪಾಯಿ ಖರ್ಚಾಗುತ್ತಿದೆ. ಸರ್ಕಾರದ ನಮ್ಮ ಕ್ಲಿನಿಕ್’ಗಳು ಸಂಜೆಯವರೆಗೂ ತೆರೆದಿರುವುದರಿಂದ ಎರಡು ಪಟ್ಟು ಹೆಚ್ಚು ಖರ್ಚು ಆಗಲಿದೆ. ಆದರೆ ಸರ್ಕಾರವು ಪ್ರತಿ ಕ್ಲಿನಿಕ್’ಗೆ ಇಡೀ ವರ್ಷಕ್ಕೆ ಕೇವಲ 36 ಲಕ್ಷ ಹಣವನ್ನು ಮಾತ್ರ ಮೀಸಲಿಟ್ಟಿದೆ. ಇದು ಅಲ್ಲಿರುವ ಐದು ಮಂದಿಯ ಸಂಬಳ ಹಾಗೂ ಬಾಡಿಗೆಗೇ ಸಾಕಾಗುವುದಿಲ್ಲ. ಹೀಗಿರುವಾಗ, ಹೇಗೆ ಉಚಿತ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ?” ಎಂದು ಪೃಥ್ವಿ ರೆಡ್ಡಿ ಪ್ರಶ್ನಿಸಿದರು.
“ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮೂರು ಹಂತದ ವೈದ್ಯಕೀಯ ವ್ಯವಸ್ಥೆ ಜಾರಿಯಲ್ಲಿರಬೇಕು. ಉದಾಹರಣೆಗೆ, ದೆಹಲಿಯಲ್ಲಿ ಮೊಹಲ್ಲಾ ಕ್ಲಿನಿಕ್, ಪಾಲಿಕ್ಲಿನಿಕ್ ಹಾಗೂ ಸುಸಜ್ಜಿತವಾದ ಆಸ್ಪತ್ರೆಗಳಿವೆ. ಮೊಹಲ್ಲಾ ಕ್ಲಿನಿಕ್’ನಲ್ಲಿ ತಪಾಸಣೆ ನಡೆಸಿದಾಗ ಹೆಚ್ಚಿನ ಚಿಕಿತ್ಸೆಯ ಅಗತ್ಯವಿದೆ ಎನಿಸಿದರೆ ಮುಂದಿನ ಹಂತಗಳಿಗೆ ಶಿಫಾರಸು ಮಾಡಿ, ಅಲ್ಲಿ ಉತ್ತಮ ಚಿಕಿತ್ಸೆ ನೀಡಲಾಗುತ್ತಿದೆ.

- Advertisement -

ಆದರೆ ಕರ್ನಾಟಕದಲ್ಲಿ ʻನಮ್ಮ ಕ್ಲಿನಿಕ್ʼ ಕೇಂದ್ರಗಳಲ್ಲಿ ತಪಾಸಣೆ ನಡೆಸಿದಾಗ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎನಿಸಿದರೆ, ಅದನ್ನು ನೀಡಲು ಮುಂದಿನ ಹಂತದ ವ್ಯವಸ್ಥೆಯು ದುಸ್ಥಿತಿಯಲ್ಲಿವೆ” ಎಂದು ಪೃಥ್ವಿ ರೆಡ್ಡಿ ಹೇಳಿದರು.



Join Whatsapp