ಬೆಂಗಳೂರು: ಹಿಜಾಬ್ ಪ್ರಕರಣದಲ್ಲಿ ವಿವಾದ ಸೃಷ್ಟಿಸಿದ ಕುಂದಾಪುರ ಪಿಯು ಕಾಲೇಜಿನ ಪ್ರಾಚಾರ್ಯಗೆ ರಾಜ್ಯ ಸರ್ಕಾರ ನೀಡಿದ ಪ್ರಶಸ್ತಿಯನ್ನು ಸರ್ಕಾರ ತೆಡೆಹಿಡಿದಿದೆ ಎಂದು ತಿಳಿದು ಬಂದಿದೆ.
ಪ್ರಾಂಶುಪಾಲರಿಗೆ ಸರ್ಕಾರದಿಂದ ಪ್ರಾಚಾರ್ಯ ಪ್ರಶಸ್ತಿ ನೀಡಿದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ಈ ಬೆನ್ನಲ್ಲೆ ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದನ್ನು ತಡೆಹಿಡಿಯಲಾಗಿದೆ ಎಂದು ತಿಳಿದು ಬಂದಿದೆ.
“ಸಂಘಪರಿವಾರದ ಷಡ್ಯಂತ್ರಕ್ಕೆ ಪೂರಕವಾಗಿ ಹಿಜಾಬ್ ವಿದ್ಯಾರ್ಥಿನಿಯರ ಶಿಕ್ಷಣವನ್ನು ಅರ್ಧಕ್ಕೆ ಮೊಟಕುಗೊಳಿಸಿರುವ ಪ್ರಾಂಶುಪಾಲರಿಗೆ ಕಾಂಗ್ರೆಸ್ ಸರಕಾರ ರಾಜ್ಯಮಟ್ಟದ ಪ್ರಾಚಾರ್ಯ ಪ್ರಶಸ್ತಿ ನೀಡಿ ಗೌರವಿಸುವುದು ಎಷ್ಟು ಸರಿ? “ಜಾತ್ಯತೀತ ಸರಕಾರವೊಂದು ಕೋಮುವಾದಿ ಕಾರ್ಯಸೂಚಿಗಳಿಗೆ ಪೂರಕವಾಗಿ ಕೆಲಸ ಮಾಡಿರುವ ಪ್ರಾಂಶುಪಾಲರಿಗೆ ಪ್ರಶಸ್ತಿ ನೀಡುವುದು ಸೈದ್ಧಾಂತಿಕ ದಿವಾಳಿತನದ ಸೂಚಕ” ಎಂಬ ಟೀಕೆಗಳು ವ್ಯಕ್ತವಾಗಿತ್ತು.
ಇಂತಹ ಸಂವಿಧಾನ ವಿರೋಧಿ ಮನಸ್ಥಿತಿಯ ಪ್ರಾಂಶುಪಾಲರಿಗೆ ಪ್ರಶಸ್ತಿ ಘೋಷಣೆಯಾಗಿರುವುದು ಚರ್ಚೆಗೆ ಗ್ರಾಸವಾದ ಬೆನ್ನಲ್ಲೇ ಸರ್ಕಾರ ಪ್ರಾಂಶುಪಾಲ ಬಿ.ಜಿ ರಾಮಕೃಷ್ಣ ಅವರಿಗೆ ಪ್ರಶಸ್ತಿ ನೀಡುವುದನ್ನು ತೆಡೆಹಿಡಿದಿದೆ ಎಂದು ತಿಳಿದು ಬಂದಿದೆ.