ವಿದ್ಯಾರ್ಥಿಗಳ ಶಾಲಾ ಶುಲ್ಕ ಪಾವತಿಸಲು 40 ಲಕ್ಷ ಸಂಗ್ರಹಿಸಿದ ಪ್ರಾಂಶುಪಾಲೆ!

Prasthutha|

ಕೋವಿಡ್‌ ಲಾಕ್‌ ಡೌನ್‌ ನಿಂದಾಗಿ ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಯಾವುದೇ ಪರಿಣಾಮ ಬೀರಬಾರದು ಎಂಬ ಉದ್ದೇಶದಿಂದ ಸಾಕಷ್ಟು ಶಿಕ್ಷಕರು ತಮ್ಮಿಂದ ಸಾಧ್ಯವಿರುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಯಾವುದೇ ಮಗು ಶಿಕ್ಷಣದಿಂದ ವಂಚಿತವಾಗದಂತೆ ನೋಡಿಕೊಳ್ಳಲು ಹಲವು ಶಿಕ್ಷಣ ಸಂಸ್ಥೆಗಳು, ಶಿಕ್ಷಣಧಾತರು ಯತ್ನಿಸುತ್ತಿದ್ದಾರೆ. ಈ ನಡುವೆ, ಮುಂಬೈಯ ಶಾಲೆಯೊಂದರ ಪ್ರಾಂಶುಪಾಲರೊಬ್ಬರು ಈ ವಿಷಯದಲ್ಲಿ ಇನ್ನೊಂದು ಹೆಜ್ಜೆ ಮುಂದೆ ಹೋಗಿ, ತಮ್ಮ ವಿದ್ಯಾರ್ಥಿಗಳಿಗೆ ಅವರ ಶಾಲಾ ಶುಲ್ಕವನ್ನೂ ಭರಿಸುವುದಕ್ಕೆ ದಾನಿಗಳ ಮೊರೆ ಹೋಗಿ ದೊಡ್ಡ ಮೊತ್ತವೊಂದನ್ನು ಸಂಗ್ರಹಿಸಿದ್ದಾರೆ.

ಪೊವೈ ಇಂಗ್ಲೀಷ್‌ ಹೈಸ್ಕೂಲ್‌ ನ ಪ್ರಾಂಶುಪಾಲೆ ಶಿರ್ಲೆ ಪಿಳ್ಳೈ ಈ ರೀತಿ ದಾನಿಗಳ ಮೂಲಕ ತಮ್ಮ ವಿದ್ಯಾರ್ಥಿಗಳ ಸಹಾಯಕ್ಕೆ ಬಂದಿರುವವರು. ವಿದ್ಯಾರ್ಥಿಗಳ ಶುಲ್ಕ ಪಾವತಿಸಲು ಕಾರ್ಪೊರೇಟ್‌ ಸಂಸ್ಥೆಗಳು, ಹೂಡಿಕೆದಾರರ ಮೂಲಕ ಸುಮಾರು 40 ಲಕ್ಷ ರೂ. ಅವರು ಸಂಗ್ರಹಿಸಿದ್ದಾರೆ.

- Advertisement -

ಶಿರ್ಲೆಯವರು ತಮ್ಮ ೩೫ ವರ್ಷಗಳ ಅನುಭವದಲ್ಲಿ ಇದೇ ಮೊದಲ ಬಾರಿ ಮಕ್ಕಳ ಹೆತ್ತವರು ತಮ್ಮ ಮಕ್ಕಳ ರಿಪೋರ್ಟ್‌ ಕಾರ್ಡ್‌ ಕೊಂಡೊಯ್ಯಲು ದೊಡ್ಡ ಸಂಖ್ಯೆಯಲ್ಲಿ ಬರದಿರುವುದನ್ನು ಗಮನಿಸಿದರು. ಈ ಬಗ್ಗೆ ಪರಿಶೀಲಿಸಿದಾಗ, ಹಲವಾರು ಮಂದಿ ಉದ್ಯೋಗ ಕಳೆದುಕೋಂಡು, ವೇತನವಿಲ್ಲದೆ ಮಕ್ಕಳ ಶುಲ್ಕ ಪಾವತಿಸಲಾಗದೆ ಒದ್ದಾಡುತ್ತಿರುವುದನ್ನು ಗಮನಿಸಿದರು.

ಆಂಭದಲ್ಲಿ ಅವರು ಶುಲ್ಕದಲ್ಲಿ ಶೇ.25 ವಿನಾಯತಿ ಘೋಷಿಸಿದರು. ಆದರೂ, ಹಲವಾರು ದುರ್ಬಲ ವರ್ಗದ ಮಕ್ಕಳ ಹೆತ್ತವರಿಗೆ ಶುಲ್ಕ ಪಾವತಿಸಲು ಸಾಧ್ಯವಾಗಲಿಲ್ಲ. ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಶಿರ್ಲೆ ಅವರು ದಾನಿಗಳ ಮೊರೆ ಹೋಗಿ, ದೊಡ್ಡ ಮೊತ್ತದ ದೇಣಿಗೆಯನ್ನು ಸಂಗ್ರಹಿಸಿದರು.

ಇದೀಗ ಮಕ್ಕಳು ಹಾಗೂ ಅವರ ಹೆತ್ತವರಿಗೆ ಶಿಕ್ಷಣದ ಶುಲ್ಕದ ವಿಷಯದಲ್ಲಿ ನಿಶ್ಚಿಂತರಾಗಿರುವಂತೆ ಅವರು ಸೂಚನೆ ನೀಡಿದ್ದಾರೆ. ಸುಮಾರು 200ಕ್ಕೂ ಹೆಚ್ಚು ವಿದ್ಯಾರ್ಥಿಗಳ ಶುಲ್ಕವನ್ನು ಈ ದೇಣಿಗೆಯಿಂದ ಪಾವತಿಸಲಾಗಿದೆ. ಮುಂದಿನ ಶೈಕ್ಷಣಿಕ ವರ್ಷಕ್ಕೂ ಇದೇ ಮಾದರಿಯಲ್ಲಿ ವಿದ್ಯಾರ್ಥಿಗಳ ಶುಲ್ಕ ಸಂಗ್ರಹಿಸಲು ಅವರು ಚಿಂತಿಸುತ್ತಿದ್ದಾರೆ.  

- Advertisement -