ಹುಬ್ಬಳ್ಳಿ: ರಾಜ್ಯದ ವಿಚಾರದಲ್ಲಿ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದ್ದು, ರಾಜ್ಯದ ದುಸ್ಥಿತಿಗೆ ಪ್ರಧಾನಿ ಮೋದಿಯೇ ಕಾರಣ ಎಂದು ಮಾಜಿ ಸಿಎಂ, ವಿಪ ಸದಸ್ಯ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಕೇಂದ್ರದಲ್ಲಿ ಸರಕಾರ ನಡೆಸುತ್ತಿದ್ದು, ರಾಜ್ಯಕ್ಕೆ ಪದೇ-ಪದೇ ಅನ್ಯಾಯವಾಗುತ್ತಿದೆ ಕೇಂದ್ರ ಸರ್ಕಾರದ ನಿರ್ಲಕ್ಷ್ಯ ಧೋರಣೆಯ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಸದನದಲ್ಲಿ ಟೀಕೆ ಮಾಡಿದ್ದಾರೆ. ಆಗಲಾದರೂ ಕೇಂದ್ರ ಸಚಿವರು ಮುಖ್ಯಮಂತ್ರಿಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭೇಟಿ ಮಾಡಿಸಿ, ರಾಜ್ಯಕ್ಕೆ ಆಗುತ್ತಿರುವ ತಾರತಮ್ಯವನ್ನು ತಡೆಯಬಹುದಿತ್ತು. ರಾಜ್ಯದ ಸಚಿವರು ಪ್ರಧಾನಿ ಹಾಗೂ ಕೇಂದ್ರ ಸಚಿವರನ್ನು ಭೇಟಿಯಾಗಲು ಅವಕಾಶ ದೊರೆಯದೆ, ಕೇವಲ ಅಧಿಕಾರಿಗಳನ್ನು ಭೇಟಿಯಾಗಿ ವಾಪಸ್ ಬರುವಂತಾಗಿದೆ ಎಂದು ದೂರಿದರು.
ರಾಜ್ಯದ ದುಸ್ಥಿತಿಗೆ ಪ್ರಧಾನಿ ಮೋದಿಯೇ ಕಾರಣರಾಗಿದ್ದು, ಕೇಂದ್ರ ಸಚಿವರು, ಅಧಿಕಾರಿಗಳನ್ನು ಪ್ರಧಾನಿ ಕಿವಿ ಹಿಂಡುವ ಕೆಲಸ ಮಾಡಬೇಕು. ಕಾಂಗ್ರೆಸ್ ನಾಯಕರು ಮಾಡುವ ಟೀಕೆಯನ್ನು ಅರಗಿಸಿಕೊಳ್ಳಲು ಆಗಲ್ಲಾ ಅಂದರೆ ಅದು ನಿಮ್ಮ ಅಹಂಕಾರವನ್ನು ತೋರಿಸುತ್ತಿದೆ ಎಂದು ಪರೋಕ್ಷವಾಗಿ ಸಚಿವ ಜೋಶಿ ವಿರುದ್ಧ ಕಿಡಿಗಾರಿದರು.
ಇತ್ತೀಚಿಗೆ ಮೋದಿಯವರಿಗೆ ಅಧಿಕಾರದ ಮದ ಜಾಸ್ತಿಯಾದಂತೆ ಕಾಣಿಸುತ್ತದೆ ಎಂದು ಟೀಕಿಸಿದ ಶೆಟ್ಟರ್, ಜನರ ಒಳಿತಿಗಾಗಿ ರಾಜಕಾರಣಿಗಳು ಕಾರ್ಯಾಚರಿಸಬೇಕು ಎಂದು ಕಿವಿಮಾತು ಹೇಳಿದರು.