ರಾಜಸ್ಥಾನ: ಅರ್ಚಕರ ಜೀವಂತ ದಹನ

Prasthutha|

ಜೈಪುರ: ಭೂ ವಿವಾದಕ್ಕೆ ಸಂಬಂಧಿಸಿದಂತೆ ಅರ್ಚಕರೊಬ್ಬರನ್ನು ಜೀವಂತವಾಗಿ ದಹಿಸಿದ ಘಟನೆ ರಾಜಸ್ಥಾನದ ಕರೌಲಿ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಜಿಲ್ಲೆಯ ಗ್ರಾಮವೊಂದರ ರಾಧಾ ಕೃಷ್ಣ ಮಂದಿರಕ್ಕೆ ಸೇರಿದ 5.2 ಎಕರೆ ಭೂಮಿಯನ್ನು ಅರ್ಚಕರು ಹೊಂದಿದ್ದರು.

ಗ್ರಾಮದ ದೇವಸ್ಥಾನದ ಪೂಜೆ-ಪುನಸ್ಕಾರಗಳನ್ನು ನೋಡಿಕೊಳ್ಳುವ ಮುಖ್ಯ ಪೂಜಾರಿಗೆ ಅವರ ಆದಾಯದ ಮೂಲವಾಗಿ ದೇವಸ್ಥಾನದ ಈ ಭೂಮಿಯನ್ನು ನೀಡಲಾಗುತ್ತಿತ್ತು. ಹಾಗೆ ನೀಡಲಾಗುವ ಭೂಮಿಯನ್ನು ‘ಮಂದಿರ್ ಮಾಫಿ’ ಎಂದು ಕರೆಯಲಾಗುತ್ತದೆ.  

- Advertisement -

ಇಲ್ಲಿ ಮನೆಯೊಂದನ್ನು ನಿರ್ಮಿಸುವುದಕ್ಕಾಗಿ ಅರ್ಚಕರು ಗುಡ್ಡದ ತಪ್ಪಲಿನ ಈ ಭೂಮಿಯನ್ನು ಅಗೆದು ಸಮತಟ್ಟುಗೊಳಿಸಿದ್ದರು. ಇದನ್ನು ವಿರೋಧಿಸಿದ ಪ್ರಬಲ ಮೀನಾ ಸಮುದಾಯದ ಜನರು ಭೂಮಿ ತಮ್ಮದೆಂದು ವಾದಿಸಿದ್ದರು. ವಿವಾದವು ಗ್ರಾಮದ ಮುಖಂಡರ ಬಳಿ ಬಂದಿದ್ದು ಅವರು ಅರ್ಚಕರ ಪರವಾಗಿ ತೀರ್ಪು ನೀಡಿದ್ದರು.

ಅರ್ಚಕರು ಮಾಲೀಕತ್ವದ ಗುರುತು ಎಂಬಂತೆ ತಾನು ಹೊಸದಾಗಿ ಬೆಳೆದ ರಾಗಿ ಚೀಲಗಳನ್ನು ಭೂಮಿಯ ಮೇಲೆ ರಾಶಿಹಾಕಿದ್ದರು.

ಆದರೆ ಆರೋಪಿಗಳು ಅರ್ಚಕರು ಸಮತಟ್ಟುಗೊಳಿಸಿದ್ದ ಭೂಮಿಯ ಮೇಲೆ ತಮ್ಮದೇ ಗುಡಿಸಲನ್ನು ಕಟ್ಟಲು ಪ್ರಾರಂಭಿಸಿದ್ದರು.

ಇದು ಸಂಘರ್ಷಕ್ಕೆ ಕಾರಣವಾಗಿತ್ತು. ಆರೋಪಿಗಳು ರಾಗಿ ಚೀಲದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದರು. ನಂತರ ತನ್ನ ಮೇಲೂ ಬೆಂಕಿ ಹಚ್ಚಿದರು ಎಂದು ಅರ್ಚಕರು ಪೊಲೀಸರಿಗೆ ಹೇಳಿಕೆ ನೀಡಿದ್ದಾರೆ. ಅರ್ಚಕರನ್ನು ಚಿಕಿತ್ಸೆಗಾಗಿ ಎಸ್.ಎಂ.ಎಸ್ ಆಸ್ಪತ್ರೆಗೆ ಕರೆತರಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.

Join Whatsapp