ಬೆಂಗಳೂರು: ಖಾಸಗಿ ಆಸ್ಪತ್ರೆಗಳ ಹೊರಭಾಗದಲ್ಲಿ ದರಪಟ್ಟಿ ಪ್ರಕಟಿಸುವುದು ಕಡ್ಡಾಯ ಮಾಡಲಾಗುವುದು. ದರ ಪಟ್ಟಿ ಪ್ರಕಟಿಸದ ಆಸ್ಪತ್ರೆಗಳ ಪರವಾನಗಿ ರದ್ದುಗೊಳಿಸುವ ಬಗ್ಗೆ ಆಲೋಚಿಸಲಾಗುವುದು ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಗುರುವಾರ ಹೇಳಿದರು.
ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಸುಲಿಗೆ ಮಾಡಲಾಗುತ್ತಿದೆ ಎಂಬ ವಿಚಾರವಾಗಿ ಅನೇಕ ದೂರುಗಳು ಸಲ್ಲಿಕೆಯಾದ ಬೆನ್ನಲ್ಲೇ ಆರೋಗ್ಯ ಸಚಿವರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ.
ಜ್ವರ, ಕೆಮ್ಮು, ನೆಗಡಿ ಎಂದು ಆಸ್ಪತ್ರೆಗಳಿಗೆ ಚಿಕಿತ್ಸೆಗೆ ತೆರಳಿದರೂ ಸಾವಿರಾರು ರೂಪಾಯಿ ಬಿಲ್ ವಸೂಲಿ ಮಾಡಲಾಗುತ್ತಿದೆ ಎಂದು ದೂರಿರುವ ಸಾರ್ವಜನಿಕರು ಆರೋಗ್ಯ ಸಚಿವರು ಹಾಗೂ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದು ದೂರು ನೀಡಿದ್ದರು. ನೂರಾರು ದೂರುಗಳು ಸಚಿವರಿಗೆ ಬಂದಿದ್ದವು. ಇದರ ಬೆನ್ನಲ್ಲೇ ಆರೋಗ್ಯ ಇಲಾಖೆ ಎಚ್ಚೆತ್ತುಕೊಂಡಿದೆ.