ನವದೆಹಲಿ: ರಾಷ್ಟ್ರಪತಿ ಚುನಾವಣೆಗೆ ನಾಳೆ (ಸೋಮವಾರ) ಮತದಾನ ನಡೆಯಲಿದ್ದು, ಎಲ್ಲಾ ರಾಜ್ಯಗಳಲ್ಲೂ ಸಕಲ ಸಿದ್ಧತೆ ಕೈಗೊಳ್ಳಲಾಗಿದೆ.
ದೇಶದ ಸುಮಾರು 4,800 ಚುನಾಯಿತ ಜನ ಪ್ರತಿನಿಧಿಗಳು 15ನೇ ರಾಷ್ಟ್ರಪತಿ ಆಯ್ಕೆ ಮಾಡಲು ನಾಳೆ ಆಯಾ ರಾಜ್ಯಗಳ ವಿಧಾನಸಭೆಗಳಲ್ಲಿ ಮತದಾನ ಮಾಡಲಿದ್ದಾರೆ.
ಎನ್ ಡಿಎ ಅಭ್ಯರ್ಥಿ ದ್ರೌಪದಿ ಮುರ್ಮು ಹಾಗೂ ವಿರೋಧ ಪಕ್ಷಗಳ ಒಮ್ಮತದ ಅಭ್ಯರ್ಥಿ ಯಶವಂತ ಸಿನ್ಹಾ ಅವರ ನಡುವೆ ಸ್ಪರ್ಧೆ ನಡೆಯಲಿದೆ.
ಜುಲೈ 21 ರಂದು ಸಂಸತ್ ಭವನದಲ್ಲಿ ಮತ ಎಣಿಕೆ ನಡೆಯಲಿದ್ದು, ಜುಲೈ 25 ರಂದು ಮುಂದಿನ ರಾಷ್ಟ್ರಪತಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಪ್ರಾದೇಶಿಕ ಪಕ್ಷಗಳಾದ ಬಿಜು ಜನತಾ ದಳ, ವೈಎಸ್‌ಆರ್ ಕಾಂಗ್ರೆಸ್ , ಬಹುಜನ ಸಮಾಜ ಪಕ್ಷ, ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ, ತೆಲುಗು ದೇಶಂ ಪಕ್ಷ, ಜನತಾ ದಳ-ಜಾತ್ಯತೀತ, ಶಿರೋಮಣಿ ಅಕಾಲಿದಳ, ಶಿವಸೇನೆ ಈಗಾಗಲೇ ಮುರ್ಮು ಅವರಿಗೆ ಬೆಂಬಲ ಸೂಚಿಸಿವೆ. ಆದ್ದರಿಂದ ದ್ರೌಪದಿ ಮುರ್ಮು ಅವರ ಜಯ ಬಹುತೇಕ ನಿಶ್ಚಿತವಾಗಿದೆ.