ಬೆಂಗಳೂರು: ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳ ದುಷ್ಟ, ನೀಚ, ಕೆಟ್ಟ ಷಡ್ಯಂತ್ರವು ರಾಜ್ಯವನ್ನು ನುಚ್ಚು ನೂರಾಗಿಸಿದೆ. ಬಿಜೆಪಿ ಸರ್ಕಾರಗಳು ಕರ್ನಾಟಕ ಭೂ ಪ್ರದೇಶವನ್ನು ಹಲವು ತುಂಡುಗಳನ್ನಾಗಿ ವಿಭಜಿಸಿ ರಾಜ್ಯವನ್ನು ಕಬಳಿಸಲು ಪ್ರಯತ್ನಿಸುತ್ತಿವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟೀಕಿಸಿದ್ದಾರೆ.
ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಜಂಟಿ ಮಾಧ್ಯಮಗೋಷ್ಠಿ ನಡೆಸಿದ ಅವರು, ಮಹಾರಾಷ್ಟ್ರದ ಬಿಜೆಪಿ ಸರ್ಕಾರ ಕರ್ನಾಟಕ ಗಡಿಭಾಗದ 864 ಗ್ರಾಮಗಳಲ್ಲಿ ತನ್ನ ಯೋಜನೆ ಜಾರಿಗೆ ಮುಂದಾಗಿದೆ. ಇದಕ್ಕಾಗಿ 54 ಕೋಟಿ ಹಣ ಬಿಡುಗಡೆ ಮಾಡಿರುವುದು ಬಿಜೆಪಿಯ ಷಡ್ಯಂತ್ರವನ್ನು ಸ್ಪಷ್ಟಪಡಿಸಿದೆ. ಮಹಾರಾಷ್ಟ್ರ ಸರ್ಕಾರದ ಈ ನಡೆ ರಾಜ್ಯದ 6.5 ಕೋಟಿ ಕನ್ನಡಿಗರ ಸ್ವಾಭಿಮಾನ ಹಾಗೂ ಪ್ರಾದೇಶಿಕ ಸಮಗ್ರತೆಗೆ ಪೆಟ್ಟು ನೀಡಿದೆ. ಬಿಜೆಪಿಯ ಈ ಕುತಂತ್ರದ ವಿರುದ್ಧ ಪ್ರತಿಯೊಬ್ಬ ಕನ್ನಡಿಗನು ತನ್ನ ಕೊನೆಯುಸಿರಿರುವರೆಗೂ ಹೋರಾಟ ಮಾಡಲಿದ್ದಾನೆ. ಬಿಜೆಪಿಯು ಕರ್ನಾಟಕ ರಾಜ್ಯವನ್ನು ವಿಭಜಿಸಲು ಹಾಗೂ ನಮ್ಮ ಭೂ ಪ್ರದೇಶವನ್ನು ಕಬಳಿಕೆ ಮಾಡಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಕರ್ನಾಟಕ ರಾಜ್ಯದ ಸ್ವಾಭಿಮಾನ, ಗೌರವ ಹಾಗೂ ಭೂಪ್ರದೇಶ ರಕ್ಷಿಸಲು ಕಾಂಗ್ರೆಸ್ ಪಕ್ಷ ಹಾಗೂ ಅದರ ಕಾರ್ಯಕರ್ತರು ತಮ್ಮ ಪ್ರಾಣತ್ಯಾಗಕ್ಕೆ ಸಿದ್ಧರಾಗಿದ್ದಾರೆ. ಬಿಜೆಪಿಯ ಕುತಂತ್ರ ಯಶಸ್ಸಿಗೆ ನಾವು ಅವಕಾಶ ನೀಡುವುದಿಲ್ಲ. ಕರ್ನಾಟಕ ವಿಭಜಿಸಿ ರಾಜ್ಯದ ಭೂಪ್ರದೇಶ ಕಿತ್ತುಕೊಳ್ಳುವ ಬಿಜೆಪಿಯ ಷಡ್ಯಂತ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೇ ನೇರ ಹೊಣೆಗಾರರಾಗಿದ್ದಾರೆ. ಕರ್ನಾಟಕದ ಅಸ್ಮಿತೆ ಮೇಲೆ ಬಿಜೆಪಿ ಪೈಶಾಚಿಕ ದಾಳಿ ಮಾಡಿರುವ ಹಿನ್ನೆಲೆಯಲ್ಲಿ ರಾಜ್ಯದ ಜನ ಮೋದಿ ಹಾಗೂ ಅಮಿತ್ ಶಾ ಅವರನ್ನು ಎಂದಿಗೂ ಕ್ಷಮಿಸುವುದಿಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಸಮ್ಮತಿಯೊಂದಿಗೆ ಮಹಾರಾಷ್ಟ್ರ ಸರ್ಕಾರವು ಹಾಡಹಗಲಲ್ಲೇ ಸಂವಿಧಾನದ ಕಗ್ಗೊಲೆ ಮಾಡಿದೆ. ರಾಜ್ಯಗಳ ಪ್ರಾದೇಶಿಕ ಗೌರವ ಎತ್ತಿಹಿಡಿಯುವ ಸಂವಿಧನಾತ್ಮಕ ತತ್ವಗಳನ್ನು ಬಿಜೆಪಿ ಸರ್ಕಾರ ನಾಶಪಡಿಸುತ್ತಿದೆ. ಮಹಾರಾಷ್ಟ್ರ ಸರ್ಕಾರ ತನ್ನ ಯೋಜನೆಯನ್ನು ಕರ್ನಾಟಕದ ಗ್ರಾಮಗಳಲ್ಲಿ ಜಾರಿ ಮಾಡಲು ಮುಂದಾಗಿರುವುದು ಕಾನೂನು ಉಲ್ಲಂಘನೆ, ಅರಾಜಕತೆ ಸೃಷ್ಟಿ ಹಾಗೂ ಭಾರತದ ಸಂವಿಧಾನದ ಆಶಯಗಳನ್ನು ಸರ್ವನಾಶ ಮಾಡುವ ಪ್ರಯತ್ನವಾಗಿದೆ. ಭಾರತ ಸಂವಿಧಾನದ ಪರಿಚ್ಛೇದ 356 ರ ಅಡಿಯಲ್ಲಿ ಮಹಾರಾಷ್ಟ್ರದ ಬಿಜೆಪಿ ಹಾಗೂ ಶಿಂಧೆ ಅವರ ಸರ್ಕಾರವನ್ನು ಕಿತ್ತೊಗೆಯಲು ಇದು ಸೂಕ್ತ ಪ್ರಕರಣವಾಗಿದೆ. ಹೀಗಾಗಿ ರಾಷ್ಟ್ರಪತಿಗಳು ಒಂದು ನಿಮಿಷ ವ್ಯರ್ಥ ಮಾಡದೆ ಮಹಾರಾಷ್ಟ್ರ ಸರ್ಕಾರವನ್ನು ವಜಾಗೊಳಿಸಬೇಕು ಎಂದು ಆಗ್ರಹಿಸಿದರು.
ಮಹಾರಾಷ್ಟ್ರ ಸರ್ಕಾರವನ್ನು ಪ್ರಧಾನ ಮಂತ್ರಿಗಳು, ಕೇಂದ್ರ ಗೃಹ ಸಚಿವರು ಹಾಗೂ ರಾಷ್ಟ್ರಪತಿಗಳು ವಜಾಗೊಳಿಸದಿದ್ದರೆ, ಕರ್ನಾಟಕ ರಾಜ್ಯವನ್ನು ವಿಭಜಿಸಲು ಬಿಜೆಪಿ ಷಡ್ಯಂತ್ರ ರೂಪಿಸಿದೆ ಎಂಬುದು ಸಾಬೀತಾಗುತ್ತದೆ.
ಇಷ್ಟೆಲ್ಲಾ ಆದರೂ ಅಂಜುಬುರುಕ, ನಿಶ್ಯಕ್ತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಅವರ ಸಂಪುಟ ಸಚಿವರು ತಮ್ಮ ಕುರ್ಚಿಗೆ ಅಂಟಿಕೊಂಡು ಕೂತಿರುವುದು ನಾಚಿಕೆಗೇಡಿನ ವಿಚಾರ. ಬೊಮ್ಮಾಯಿ ಸರ್ಕಾರವು ಮಹಾರಾಷ್ಟ್ರ ಬಿಜೆಪಿ ಸರ್ಕಾರದ ಉದ್ದೇಶಪೂರ್ವಕ ಷಡ್ಯಂತ್ರದಿಂದ ರಾಜ್ಯದ ಸಾರ್ವಭೌಮತ್ವಕ್ಕೆ ಧಕ್ಕೆಯಾಗುತ್ತಿರುವುದನ್ನು ನೋಡಿಕೊಂಡು ಕೂತಿದೆ. ಅಲ್ಲದೆ ಅವರಿಗೆ ಹೆದರಿಕೊಂಡು ಒಂದೇ ಒಂದು ಮಾತನಾಡದೆ ಮೌನಕ್ಕೆ ಶರಣಾಗಿದೆ. ಸಿಎಂ ಬೊಮ್ಮಾಯಿ ಹಾಗೂ ಅವರ ಸಂಪುಟದ ಸಚಿವರಿಗೆ ಕಿಂಚಿತ್ತಾದರೂ ಮಾನ ಮರ್ಯಾದೆ ಉಳಿದಿದ್ದರೆ, ಅವರು ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯದ ಸಾರ್ವಭೌಮತ್ವ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಹಾಗೂ ರಾಜ್ಯದ ಜನರ ಹೋರಾಟಕ್ಕೆ ಕೈ ಜೋಡಿಸಬೇಕು ಎಂದು ಹೇಳಿದರು.
ರಾಜ್ಯದ ಭೂಪ್ರದೇಶ ಹಾಗೂ ಗೌರವದ ಮೇಲೆ ನಡೆದಿರುವ ಈ ದಾಳಿಗೆ ಕೇಂದ್ರ ಸರ್ಕಾರದ 4 ಸಚಿವರು ಹಾಗೂ ಎಲ್ಲಾ 26 ಸಂಸದರು (ಪಕ್ಷೇತರ ಸಂಸದೆ ಸೇರಿ) ಕಾರಣರಾಗಿದ್ದಾರೆ. ರಾಜ್ಯದ ಘನತೆ ರಕ್ಷಣೆ ಜವಾಬ್ದಾರಿ ನಿಭಾಯಿಸುವಲ್ಲಿ ಇವರು ವಿಫಲರಾಗಿದ್ದು, ಕೂಡಲೇ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು. ಇಲ್ಲದಿದ್ದರೆ ರಾಜ್ಯದ ಜನರೇ ಅವರನ್ನು ಕಿತ್ತೊಗೆಯಲಿದ್ದಾರೆ. ಈ ಎಲ್ಲ ಘಟನೆಗಳ ಮೂಲಕ ಬಿಜೆಪಿಗೆ ಹಾಕುವ ಮತ ರಾಜ್ಯವನ್ನು ವಿಭಜಿಸಲು, ಆಮೂಲಕ ನಮ್ಮ ಭೂಪ್ರದೇಶ ಕಿತ್ತುಕೊಳ್ಳುವ, ನಮ್ಮ ಸಂಸ್ಕೃತಿ ಹಾಗೂ ಸ್ವಾಭಿಮಾನಕ್ಕೆ ಧಕ್ಕೆ ತರಲು ಮತ ಹಾಕಿದಂತಾಗುತ್ತದೆ. ಹೀಗಾಗಿ ಬಿಜೆಪಿಯನ್ನು ಮುಲಾಜಿಲ್ಲದೆ ಕಿತ್ತೊಗೆದು, ನಮ್ಮ ಸಾರ್ವಭೌಮತೆ ಹಾಗೂ ಗೌರವಕ್ಕೆ ಧಕ್ಕೆ ತರುವ ಪ್ರಯತ್ನಕ್ಕೆ ತಕ್ಕ ಪಾಠ ಕಲಿಸುವ ಸಮಯಾವಕಾಶ ಬಂದಿದೆ. ಕರ್ನಾಟಕ ಕಾಂಗ್ರೆಸ್ ಪಕ್ಷವು ನಮ್ಮ ಪ್ರತಿಯೊಂದು ಇಂಚು ಭೂಮಿ, ನಮ್ಮ ಸಂಸ್ಕೃತಿ, ನಮ್ಮ ಆತ್ಮಗೌರವ ರಕ್ಷಣೆಗೆ ಬದ್ಧವಾಗಿದೆ. ಹೀಗಾಗಿ ನಾವು ಬಿಜೆಪಿಯನ್ನು ಕೆಟ್ಟದಾಗಿ ಸೋಲಿಸಲಿದ್ದೇವೆ. ಬದಲಾವಣೆಗಾಗಿ, ಅವಿಭಾಜ್ಯ ಕರ್ನಾಟಕಕ್ಕಾಗಿ, ಕನ್ನಡಿಗರ ಗೌರವ ಕಾಪಾಡಲು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಿ ಎಂದು ಮನವಿ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.