ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ನಿರ್ದೇಶಿಸಲು ಕೋರಿದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಸಮ್ಮತಿಸಿದೆ.
ಪಶ್ಚಿಮ ಬಂಗಾಳದಲ್ಲಿ ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣಾ ಫಲಿತಾಂಶದ ಬಳಿಕ, ಪಶ್ಚಿಮ ಬಂಗಾಳದಲ್ಲಿ ವ್ಯಾಪಕ ಹಿಂಸಾಚಾರ ನಡೆದಿದೆ ಎಂದು ಆಪಾದಿಸಲಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಡುತ್ತಿರುವ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಪಿಐಎಲ್ ಸಲ್ಲಿಕೆಯಾಗಿತ್ತು.
ರಾಜ್ಯದಲ್ಲಿ ಪರಿಸ್ಥಿತಿ ಸುಧಾರಿಸಲು ಆಡಳಿತಾಧಿಕಾರಿಗಳ ನೆರವಿನಲ್ಲಿ ಸಶಸ್ತ್ರ ಅರೆಸೈನಿಕ ಪಡೆಗಳನ್ನು ನಿಯೋಜಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಲಾಗಿದೆ. ಚುನಾವಣೆ ನಂತರದ ಹಿಂಸಾಚಾರದ ಬಗ್ಗೆ ತನಿಖೆಗೆ ವಿಶೇಷ ತನಿಖಾ ತಂಡ ರಚಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ವಿಷಯಕ್ಕೆ ಸಂಬಂಧಿಸಿ ಕೇಂದ್ರ, ಪಶ್ಚಿಮ ಬಂಗಾಳ ಮತ್ತು ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿದೆ.