ಏಷ್ಯಾಕಪ್‌ 2023 | ಪಾಕಿಸ್ತಾನಕ್ಕೆ ಟೀಂ ಇಂಡಿಯಾ ಪ್ರಯಾಣದ ಬಗ್ಗೆ ಸ್ಪಷ್ಟನೆ ನೀಡಿದ ರೋಜರ್​ ಬಿನ್ನಿ

Prasthutha|

ಬೆಂಗಳೂರು: 2023ರಲ್ಲಿ ಪಾಕಿಸ್ತಾನದಲ್ಲಿ ನಡೆಯಲಿರುವ ಏಷ್ಯಾಕಪ್‌ ಟೂರ್ನಿಯಲ್ಲಿ ಭಾರತ ತಂಡ ಭಾಗವಹಿಸುವ ಕುರಿತ ಅನಿಶ್ಚಿತತೆ ಮುಂದುವರಿದಿರುವ ಬೆನ್ನಲ್ಲೇ, ಈ ವಿವಾದದ ಕುರಿತು ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ನೂತನ ಅಧ್ಯಕ್ಷ ರೋಜರ್​ ಬಿನ್ನಿ, ತಮ್ಮ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

- Advertisement -

ಬೆಂಗಳೂರಿನಲ್ಲಿ ಗುರುವಾರ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಿನ್ನಿ, ಭಾರತ ತಂಡ ಪಾಕಿಸ್ತಾನಕ್ಕೆ ಪ್ರಯಾಣ ಬೆಳೆಸುವ ವಿಚಾರದಲ್ಲಿ ಬಿಸಿಸಿಐ ಪಾತ್ರ ಏನೂ ಇಲ್ಲ. ಕೇಂದ್ರ ಸರ್ಕಾರವು ಈ ಕುರಿತ ಅಂತಿಮ ನಿರ್ಧಾರ ಕೈಗೊಳ್ಳುತ್ತದೆ ಎಂದು ಹೇಳಿದ್ದಾರೆ.

ʻಭಾರತ ತಂಡದ ಪಾಕ್‌ ಪ್ರವಾಸದ ವಿಚಾರ ಬಿಸಿಸಿಐ  ಸುಪರ್ದಿಯಲ್ಲಿಲ್ಲ. ಕೇಂದ್ರ ಸರ್ಕಾರ ಅನುಮತಿ ನೀಡಿದರೆ ಟೀಮ್‌ ಇಂಡಿಯಾ ನೆರೆ ರಾಷ್ಟ್ರಕ್ಕೆ ಪ್ರಯಾಣಿಸುವ ವಿಚಾರದಲ್ಲಿ ನಾವು (ಬಿಸಿಸಿಐ) ಮುಂದುವರಿಯಬಹುದು. ಈ ವಿಚಾರದಲ್ಲಿ ಬಿಸಿಸಿಐ ಸ್ವಂತ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಬಿನ್ನಿ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

- Advertisement -

ʻಏಷ್ಯಾ ಕಪ್‌ ಟೂರ್ನಿಯನ್ನು ತಟಸ್ಥ ತಾಣಕ್ಕೆ ವರ್ಗಾಯಿಸುವ ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ಹೇಳಿಕೆ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಬಿನ್ನಿ, ಈ ಹಿಂದೆಯೂ ಸ್ಥಳಾಂತರಿಸಲಾಗಿದೆ ಎಂದರು. ಏಷ್ಯಾ ಕಪ್‌ ಆಯೋಜಿಸುವ ಭಾರತಕ್ಕೆ ದೊರಕಿದ್ದ ವೇಳೆ ಆ ಸಂದರ್ಭದಲ್ಲಿ ಟೂರ್ನಿಯನ್ನು ಯುಎಇಗೆ ವರ್ಗಾಯಿಸಲಾಗಿತ್ತು. ಮುಂದಿನ ವರ್ಷ ಪಾಕಿಸ್ತಾನದಲ್ಲಿ ನಿಗಧಿಯಾಗಿರುವ ಟೂರ್ನಿಯನ್ನು ತಟಸ್ಥ ಸ್ಥಳದಲ್ಲಿ ಆಡಬೇಕೆಂದು ಬಿಸಿಸಿಐ ಬಯಸುತ್ತದೆʻ ಎಂದು ಬಿನ್ನಿ ಹೇಳಿದರು.

ʻಭಾರತ ತಂಡದ ಪಾಕ್‌ ಪ್ರವಾಸದ ವಿಚಾರದಲ್ಲಿ ಗುರುವಾರ ಪ್ರತಿಕ್ರಿಯಿಸಿದ್ದ ಕೇಂದ್ರ ಕ್ರೀಡಾ ಸಚಿವ ಅನುರಾಗ್ ಠಾಕೂರ್, 2023ರ ಏಷ್ಯಾಕಪ್‌ ಟೂರ್ನಿಯಲ್ಲಿ ಆಡಲು ಭಾರತ ತಂಡ ಪಾಕಿಸ್ತಾನಕ್ಕೆ ತೆರಳಬೇಕೇ ಎಂಬುದನ್ನು ಗೃಹ ಸಚಿವಾಲಯ ನಿರ್ಧರಿಸಲಿದೆ ಎಂದು ಹೇಳಿದ್ದರು. “ಆಟಗಾರರ ಸುರಕ್ಷತೆ ಮತ್ತು ಭದ್ರತೆಯು ಪ್ರಮುಖ ವಿಷಯವಾಗಿರುವುದರಿಂದ ಭಾರತ ಕ್ರಿಕೆಟ್ ತಂಡ ಪಾಕಿಸ್ತಾನಕ್ಕೆ ಪ್ರಯಾಣಿಸುವ ಕುರಿತು ಗೃಹ ಸಚಿವಾಲಯವು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದೆ ಎಂದು ಅನುರಾಗ್ ಠಾಕೂರ್ ತಿಳಿಸಿದ್ದಾರೆ.

ಮುಂಬೈನಲ್ಲಿ ಮಂಗಳವಾರ ನಡೆದ ಬಿಸಿಸಿಐ ವಾರ್ಷಿಕ ಸಭೆಯ ಬಳಿಕ ಮಾತನಾಡಿದ ಶಾ, “ಈ ಹಿಂದೆ ಪಾಕಿಸ್ತಾನವು ಭಾರತದಲ್ಲಿ ಕ್ರಿಕೆಟ್‌ ಆಡಲು ನಿರಾಕರಿಸಿತ್ತು. ಹೀಗಾಗಿ ಭಾರತ ತಂಡವು ಪಾಕಿಸ್ತಾನಕ್ಕೆ ಪ್ರಯಾಣಿಸುತ್ತಿಲ್ಲ. 2023 ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಯನ್ನು ತಟಸ್ಥ ತಾಣದಲ್ಲಿ ಆಯೋಜಿಸಲಾಗುವುದು. ಇದು ನನ್ನ ನಿರ್ಧಾರ” ಎಂದು ಹೇಳಿದ್ದರು.

ಶಾ ಹೇಳಿಕೆಗೆ ಖಾರವಾಗಿ ಪ್ರತಿಕ್ರಿಯಿಸಿದ್ದ ಪಾಕಿಸ್ತಾನ ಕ್ರಿಕೆಟ್‌ ಬೋರ್ಡ್‌, ʻಇಂತಹ ಹೇಳಿಕೆಗಳ ಒಟ್ಟಾರೆ ಪರಿಣಾಮವು ಏಷ್ಯನ್ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ ಸಮುದಾಯಗಳನ್ನು ವಿಭಜಿಸಲಿದೆ. 2023ರ ಐಸಿಸಿ ವಿಶ್ವಕಪ್ ಮತ್ತು 2024- 2031ರ ನಡುವಿನಲ್ಲಿ ಭಾರತದಲ್ಲಿ ಐಸಿಸಿ ಆಯೋಜಿಸುವ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಭಾಗವಹಿಸದೇ ಇರುವುದಕ್ಕೆ ಜಯ್‌ ಶಾ ಹೇಳಿಕೆ ಕಾರಣವಾಗಬಹುದು” ಎಂದು ಹೇಳಿತ್ತು.



Join Whatsapp