ಪ್ರವೀಣ್ ತಾಯಿಯ ದುಃಖ ಮತ್ತು ಫಾಝಿಲ್, ಮಸೂದ್ ತಾಯಿಯ ದುಃಖವೂ ಒಂದೇ: ಯು.ಟಿ.ಖಾದರ್

Prasthutha|

ಮುಖ್ಯಮಂತ್ರಿ ಬೊಮ್ಮಾಯಿಯಿಂದ ಪಕ್ಷಪಾತ ಧೋರಣೆ

- Advertisement -

ಮಂಗಳೂರು: ಹತ್ತು ದಿನಗಳಿಂದ ಮೂವರು ಯುವಕರ ಕೊಲೆ ನಮ್ಮ ಸುತ್ತಮುತ್ತ ನಡೆದಿದೆ. ಬೆಳ್ಳಾರೆ ಮಸೂದ್, ನೆಟ್ಟಾರ್ ಪ್ರವೀಣ್, ಸುರತ್ಕಲ್ ಫಾಝಿಲ್ ಮೂವರ ಕೊಲೆಯನ್ನು ನಾವು ಖಂಡಿಸುವುದಾಗಿ ಮಾಜಿ ಸಚಿವ ಯು. ಟಿ. ಖಾದರ್ ಹೇಳಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಕೀಯ ದುರುದ್ದೇಶಕ್ಕೆ ಅಮಾಯಕರ ಕೊಲೆ ಆಗಬಾರದು. ನಿಜವಾದ ಕೊಲೆಗಾರರನ್ನು ಬಂಧಿಸಿ ಕಠಿಣ ಕ್ರಮ ಕೈಗೊಳ್ಳಬೇಕು. ದಯವಿಟ್ಟು ಶಾಂತಿ ಕಾಪಾಡಲು, ಸೌಹಾರ್ದ ಕಾಯಲು ಹೇಳಿಕೆ ನೀಡಿ. ಕೋಣೆಯಲ್ಲಿ ಕುಳಿತು ನೀವು ಪ್ರಚೋದಕ ಹೇಳಿದರೆ ಮುಗ್ಧರು ಬಲಿಯಾಗುತ್ತಾರೆ ಎಂದು ಖಾದರ್ ಜಿಲ್ಲೆಯ ಮತ್ತು ರಾಜ್ಯದ ನಾಯಕರಲ್ಲಿ ಮನವಿ ಮಾಡಿದರು.

- Advertisement -

ಮುಖ್ಯಮಂತ್ರಿ ಆದವರು ರಾಜ್ಯದ ಸರ್ವರ ಹಿತ ಕಾಪಾಡಬೇಕು. ಅದು ಸಂವಿಧಾನದ ಆಶಯ. ಆದರೆ ಈ ಮುಖ್ಯಮಂತ್ರಿ ಕೆಲವರ ಮನೆಗೆ ಭೇಟಿ ನೀಡುವುದು, ಕೆಲವರಿಗೆ ಪರಿಹಾರ ನೀಡುವುದು ನಾಚಿಕೆಗೇಡು. ಪ್ರಜಾಪ್ರಭುತ್ವ ನೀತಿಯೇ ಇದು. ಪ್ರವೀಣ್ ತಾಯಿ ಮನೆಯವರಂತೆ ಫಾಝಿಲ್, ಮಸೂದ್ ಮನೆ ತಾಯಿಯ ದುಃಖವೂ ಒಂದೇ. ಮುಖ್ಯಮಂತ್ರಿಯೇ ಪಕ್ಷಪಾತ ಮಾಡಿದರೆ ಅಧಿಕಾರಿಗಳು ಪಕ್ಷಪಾತ ಮಾಡುವುದಿಲ್ಲವೆ? ಪರಿಹಾರ ನೀಡುವುದು ಜನ ನೀಡುವ ತೆರಿಗೆ ಹಣ. ಮುಖ್ಯಮಂತ್ರಿ ಒಬ್ಬರಿಗೆ ಮಾತ್ರ ಪರಿಹಾರ ಎಂದರೆ ಅವರ ಕಿಸೆಯ ಹಣವೇ ಎಂದು ಖಾದರ್ ಪ್ರಶ್ನಿಸಿದರು.

ಪರಿಹಾರ ನೀಡುವಲ್ಲಿ ಮುಖ್ಯಮಂತ್ರಿ ಘನತೆ ಮೀರಿ ಕಪ್ಪು ಚುಕ್ಕೆ ಹಚ್ಚಿದ್ದಾರೆ. ಮುಖ್ಯಮಂತ್ರಿ ಬಂದರೆ ಸಮಸ್ಯೆ ಪರಿಹಾರ ಆಗಬೇಕು. ಆದರೆ ಅವರು ವಿಮಾನ ಹತ್ತಿ ಹೋಗುವುದರೊಳಗೆ ಇನ್ನೊಂದು ಕೊಲೆ ಆಗಿದೆ. ಮೊದಲ ಕೊಲೆ ಆದಾಗ ಎಚ್ಚರಿಕೆ ವಹಿಸಿದ್ದರೆ ಸರಣಿ ಕೊಲೆ ಆಗುತ್ತಿತ್ತೆ? ಇದು ಸರಕಾರದ ಸಂಘ ಪಕ್ಷಪಾತಿ ಧೋರಣೆಯೆ ಎಂದು ಖಾದರ್ ಪ್ರಶ್ನಿಸಿದರು.

ಶಾಂತಿ ಇದ್ದರೆ ಮಾತ್ರ ಅಭಿವೃದ್ಧಿ, ನಮಗೆ ನೆಮ್ಮದಿ. ಇಲ್ಲದಿದ್ದರೆ ಕಾನೂನು ಸುವ್ಯವಸ್ಥೆ ಹಾಳಾಗುತ್ತದೆ ಎಂದು ಅವರು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಸದಾಶಿವ ಉಲ್ಲಾಳ, ಸಾಹುಲ್ ಹಮೀದ್, ಝಕರಿಯಾ, ನಾಸಿರ್, ಮೋನಾಕ, ಪ್ರಶಾಂತ್ ಕಾಜಾರ್, ಚಂದ್ರಹಾಸ ಕರ್ಕೇರ ಮೊದಲಾದವರು ಉಪಸ್ಥಿತರಿದ್ದರು.



Join Whatsapp