ಫಾಝಿಲ್, ಮಸೂದ್ ಹಂತಕರ ಮೇಲೂ ಯುಎಪಿಎ ದಾಖಲಿಸಿ
ಮಂಗಳೂರು: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದಲ್ಲಿ ಸಂಸದ ನಳಿನ್ ಕುಮಾರ್ ಅವರ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ, ಈ ಬಗ್ಗೆ ಸಮಗ್ರ ತನಿಖೆಗೆ ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎಸ್ ಡಿಪಿಐ ರಾಜ್ಯ ಸಮಿತಿ ಸದಸ್ಯ ಜಲೀಲ್ ಕೃಷ್ಣಾಪುರ, ಪ್ರವೀಣ್ ತಂದೆ ಮಾಧ್ಯಮಗಳ ಬಳಿ ಮಾತಾಡುತ್ತಾ ಸ್ಥಳೀಯರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಯಾಕೆ ತನಿಖೆ ನಡೆಯುತ್ತಿಲ್ಲ ಎಂದು ಪ್ರಶ್ನಿಸಿದರು.
ಹತ್ಯೆಯಾದ ಪ್ರವೀಣ್ ಈ ಹಿಂದೆ ಸಂಸದ ನಳಿನ್ ಕುಮಾರ್ ಅವರ ಕಾರು ಚಾಲಕರಾಗಿದ್ದರು. ಸಂಸದರ ರಹಸ್ಯ ಹಾಗೂ ಅನೈತಿಕ ಕೆಲಸಗಳ ಬಗ್ಗೆ ಮಾಹಿತಿ ಇದ್ದ ಕಾರಣಕ್ಕೆ ಈ ಕೊಲೆ ಆಗಿರುವ ಅನುಮಾನಗಳಿವೆ. ಈ ಬಗ್ಗೆ ಪಾರದರ್ಶಕ ತನಿಖೆ ನಡೆದರೆ ಸತ್ಯ ಹೊರಗೆ ಬರಬಹುದು ಎಂದು ಅವರು ಹೇಳಿದರು.
ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಮೂರು ಹತ್ಯೆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಆಗಬೇಕು. ದುರಂತ ಎಂದರೆ ಮಸೂದ್ ಹಾಗೂ ಪ್ರವೀಣ್ ಹತ್ಯೆಯ ತನಿಖೆಯಲ್ಲಿ ಅಜಗಜಾಂತರ ಮತ್ತು ತಾರತಮ್ಯ ಎದ್ದು ಕಾಣುತ್ತಿದೆ. ಮಸೂದ್ ಜೀವಕ್ಕೆ ಬೆಲೆಯೇ ಇಲ್ಲದ ರೀತಿ ತನಿಖೆ ನಡೆಯುತ್ತಿದೆ. ಮಸೂದ್ ಹತ್ಯೆ ಸಂಘಟಿತವಾಗಿ ನಡೆದಿದೆ, ಆಕಸ್ಮಿಕವಾಗಿ ನಡೆದದ್ದಲ್ಲ. ಅದರ ಎನ್ ಐಎ ತನಿಖೆ ಏಕೆ ನಡೆಯುತ್ತಿಲ್ಲ, ಕೇವಲ ಪ್ರವೀಣ್ ಹತ್ಯೆಯನ್ನು ಮಾತ್ರ ಯಾಕಾಗಿ ಎನ್ ಐಗೆ ವಹಿಸಲಾಗಿದೆ ಎಂದು ಜಲೀಲ್ ಪ್ರಶ್ನಿಸಿದರು. ಒಂದು ಸಮುದಾಯದವರನ್ನು ಬಂಧಿಸಿ ಅವರನ್ನೇ ಕೊಲೆಗಾರರ ರೀತಿ ಬಿಂಬಿಸುತ್ತಿರುವುದು ಸರಿಯಲ್ಲ ಎಂದರು.
ಪ್ರವೀಣ್ ಹತ್ಯೆ ಪ್ರಕರಣದಲ್ಲೂ ನಮಗೆ ಇನ್ನೂ ಸಂಶಯ ಇದೆ ಎಂದು ಪ್ರವೀಣ್ ತಂದೆ ಮತ್ತೊಮ್ಮೆ ಅನುಮಾನ ವ್ಯಕ್ತಪಡಿಸಿದ್ದಾರೆ. ಆ ಬಗ್ಗೆ ಯಾಕೆ ತನಿಖೆ ನಡೆಯುವುದಿಲ್ಲ, ಇಲ್ಲಿ ಏನೇ ನಡೆದರೂ ಆರ್ ಎಸ್ ಎಸ್ ನವರು ಎಸ್ ಡಿಪಿಐಯ ಹೆಸರು ತರುತ್ತಾರೆ. ಇಲ್ಲಿ ತನಿಖೆ ಮಾಡುವುದು ಪೊಲೀಸರೋ ಸಂಘಪರಿವಾರದವರೋ ಎಂದು ಪ್ರಶ್ನಿಸಿದರು.
ಇಂತಹ ಹತ್ಯೆಗಳ ಹೆಸರಿನಲ್ಲಿ ನಮ್ಮನ್ನು ಸದೆಬಡಿಯಬಹುದು ಎಂಬ ಕೆಟ್ಟ ಕನಸು ಇಟ್ಟುಕೊಂಡಿದ್ದರೆ ಆ ಕನಸನ್ನು ಸಂಘಪರಿವಾರ ಬಿಟ್ಟುಬಿಡಬೇಕು. ನಮ್ಮ ಹೋರಾಟ ಮುಂದುವರಿಯುತ್ತದೆ ಎಂದು ಹೇಳಿದರು.
ಪ್ರವೀಣ್ ಹತ್ಯೆ ಬಳಿಕ ಫಾಝಿಲ್ ಹತ್ಯೆ ನಡೆದಿದ್ದರೂ ಈ ಹತ್ಯೆಯಲ್ಲಿ ಯುಎಪಿಎ ದಾಖಲಾಗುವುದಿಲ್ಲ ಯಾಕೆ ಎಂದು ಪ್ರಶ್ನಿಸಿದ ಅವರು, ಪ್ರವೀಣ್ ಕೇಸಲ್ಲಿ ಬಂಧನಕ್ಕೊಳಪಟ್ಟವರು ಸ್ಥಳೀಯರೇ ಆಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಫಾಝಿಲ್ ಕೇಸಲ್ಲಿ ಬಂಧಿತರು ಬೇರೆ ಬೇರೆ ಊರಿನವರು, ಇದರಲ್ಲೇ ಸಂಘಟಿತ ಅಪರಾಧ ಎಂದು ಗೊತ್ತಾಗುತ್ತದೆ. ಆದರೆ ಇದನ್ನು ಎಲ್ಲೂ ಪ್ರಸ್ತಾಪಿಸುತ್ತಿಲ್ಲ. ಫಾಝಿಲ್ ಮುಸ್ಲಿಂ ಎಂಬ ಕಾರಣಕ್ಕೆ ತಾರತಮ್ಯ ಮಾಡಲಾಗುತ್ತಿದೆ. ಆರೋಪಿಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಬೇಕು. ಅದು ಬಿಟ್ಟು ಸಮುದಾಯವನ್ನು ಗುರಿ ಮಾಡಬಾರದು ಎಂದು ಹೇಳಿದರು.
ಫಾಝಿಲ್ ತಂದೆ, ಮಸೂದ್ ತಾಯಿ, ಪ್ರವೀಣ್ ಕುಟುಂಬ ನ್ಯಾಯ ಕೊಡಿ ಎಂದು ಕಣ್ಣೀರು ಹಾಕುತ್ತಿರುವಾಗ ಇವರು ರಾಜಕೀಯ ಮಾಡುತ್ತಿದ್ದಾರೆ, ಇದನ್ನು ನಾವು ಸಹಿಸುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದರು.
ಸುಳ್ಯದಲ್ಲಿ ಒಂದೂವರೆ ವರ್ಷಗಳ ಹಿಂದೆ ಪಕ್ಷದ ಕಚೇರಿ ಬಂದ್ ಆಗಿದೆ. ಆದರೂ ಎಸ್ ಡಿಪಿಐ ಕಚೇರಿಗೆ ಪೊಲೀಸರ ದಾಳಿ, ಕಚೇರಿಯಲ್ಲಿ ಸ್ಥಳ ಮಹಜರು ಎಂದು ಸುಳ್ಳು ಸುದ್ದಿ ಹಬ್ಬಿಸುವ ಮೂಲಕ ತನಿಖೆಯ ದಾರಿ ತಪ್ಪಿಸಲಾಗುತ್ತಿದೆ. ನಮಗೆ ಎನ್ ಐಎ ಮೇಲೆ ವಿಶ್ವಾಸ ಇಲ್ಲ. ರಾಜ್ಯದ ಪೊಲೀಸರ ಬಗ್ಗೆ ನಂಬಿಕೆ ಇದೆ. ಅವರ ತನಿಖೆಯಲ್ಲಿ ಮೂಗು ತೂರಿಸಬೇಡಿ ಎಂದು ಹೇಳಿದರು.
ಪ್ರವೀಣ್ ಹಂತಕರ ಮೇಲೆ ನಡೆದ ಎನ್ ಐಎ, ಯುಎಪಿಎ ಪ್ರಯೋಗ ಫಾಝಿಲ್, ಮಸೂದ್ ಹಂತಕರ ಮೇಲೂ ಹಾಕಬೇಕು ಎಂದು ಒತ್ತಾಯಿಸಿದ ಅವರು, ಕಳೆದ 10 ವರ್ಷಗಳಲ್ಲಿ ಜಿಲ್ಲೆಯಲ್ಲಿ ನಡೆದ ಸಂಘಟಿತ ಹತ್ಯೆಗಳ ಬಗ್ಗೆ ತನಿಖೆ ನಡೆಯಲಿ. ಎಲ್ಲ ಪ್ರಕರಣಗಳಲ್ಲೂ ಯುಎಪಿಎ ಅಡಿ ಕೇಸ್ ದಾಖಲಿಸಬೇಕು ಎಂದು ಆಗ್ರಹಿಸಿದರು.
ಹತ್ಯೆಯಾದ ಮೂವರು ಯುವಕರಿಗೆ ನ್ಯಾಯ ಸಿಗಬೇಕು. ಸತ್ಯ ಹೊರಗೆ ಬರಬೇಕು. ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದ ಅವರು, ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಬೇರೆ ಬೇರೆ ಆಯಾಮಗಳಿವೆ, ಎಲ್ಲಾ ದಿಕ್ಕಿನಲ್ಲೂ ತನಿಖೆ ನಡೆಯಬೇಕು ಎಂದು ಒತ್ತಾಯಿಸಿದರು.
ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಮಾತನಾಡಿ, ನಳೀನ್ ಕುಮಾರ್ ಕಟೀಲ್ ಅವರನ್ನು ತನಿಖೆಗೆ ಒಳಪಡಿಸಬೇಕು. ಮಂಪರು ಪರೀಕ್ಷೆಗೆ ಒಳಪಡಿಸಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯನವರು ಕೂಡ ಆಗ್ರಹಿಸಿದ್ದಾರೆ. ಆ ಬಗ್ಗೆಯೂ ತನಿಖೆ ನಡೆಯಲಿ ಎಂದು ಹೇಳಿದರು.