ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ ಎಂಬ ತೇಜಸ್ವಿ ಸೂರ್ಯ ಹೇಳಿಕೆಗೆ ತಿರುಗೇಟು ನೀಡಿದ ಯು.ಟಿ. ಖಾದರ್

Prasthutha|

ಬೆಂಗಳೂರು: ಸುಳ್ಯ ತಾಲೂಕಿನಲ್ಲಿ ಬಿಜೆಪಿ ಯುವ ಮೋರ್ಚಾ ಮುಖಂಡ ಪ್ರವೀನ್ ನೆಟ್ಟಾರು ತಂಡವೊಂದರಿಂದ ಹತ್ಯೆಯಾದ ಕುರಿತು ಸಂಸದ ತೇಜಸ್ವಿ ಸೂರ್ಯ ಅವರು ಖಾಸಗಿ ಚಾನೆಲ್’ವೊಂದಕ್ಕೆ ನೀಡಿದ್ದ ವಿವಾದಾತ್ಮಕ ಹೇಳಿಕೆಗೆ ಅಸೆಂಬ್ಲಿ ವಿಪಕ್ಷ ಉಪನಾಯಕ, ಶಾಸಕ ಯು.ಟಿ. ಖಾದರ್ ತಿರುಗೇಟು ನೀಡಿದ್ದಾರೆ. ಬೇಜವಾಬ್ದಾರಿ ಹೇಳಿಕೆ ನೀಡಿದ ಸಂಸದರನ್ನು ಯು.ಟಿ. ಖಾದರ್ ಅವರು ಸೂರ್ಯ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.

- Advertisement -

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಅವರು, ಎಲ್ಲರಿಗೂ ರಕ್ಷಣೆ ನೀಡಲು ಸಾಧ್ಯವೇ? ಎಂದು ತೇಜಸ್ವಿ ಸೂರ್ಯ ನೀಡಿರುವ ಹೇಳಿಕೆ ಅವರ ಅಪ್ರಬುದ್ದತೆ ತೋರಿಸುತ್ತಿದೆ. ಸಮಾಜದಲ್ಲಿ ಶೇಕಡಾ ಒಂದರಷ್ಟಿರುವ ಘಾತುಕ ಶಕ್ತಿಗಳನ್ನು ಮಟ್ಟಹಾಕಿದರೆ, ಬಾಕಿ ಇರುವ ಶೇಕಡಾ 99 ರಷ್ಟು ಜನರಲ್ಲಿ ಧೈರ್ಯ ಹಾಗೂ ವಿಶ್ವಾಸ ಮೂಡಲಿದೆ. ಅದು ಆಡಳಿತ ನಡೆಸೋರಿಂದ ಅಸಾಧ್ಯ ಎಂದು ಹೇಳಿದರೆ ಹೇಗೆ ಎಂದು ಕೇಳಿದ್ದಾರೆ.

‘ಭದ್ರತೆ ಬಗ್ಗೆ ವಿಚಾರ ಮಾಡುವುದು ಬಿಟ್ಟು ಭದ್ರತೆ ನೀಡಲು ಸಾಧ್ಯವೇ? ಎಂದು ಆಡಳಿತ ಪಕ್ಷದವರಾಗಿಯೇ ಪ್ರಶ್ನಿಸುವುದು ನಿಮ್ಮ ಅಸಮರ್ಥತೆ ಹಾಗೂ ಅಸಹಾಯಕತೆಯನ್ನು ತೋರಿಸುತ್ತಿದೆ. ಜನ ಇದೆಲ್ಲವನ್ನೂ ಗಮನಿಸುತ್ತಿದ್ದಾರೆ. ನೆನಪಿರಲಿ’ ಎಂದು ತೇಜಸ್ವಿ ಸೂರ್ಯ ಅವರಿಗೆ ಚಾಟಿ ಬೀಸಿದ್ದಾರೆ.

- Advertisement -

ಈ ಮಧ್ಯೆ ಬಿಜೆಪಿ ಯುವ ಮೋರ್ಚಾದಲ್ಲಿ ಸಕ್ರಿಯವಾಗಿದ್ದ ಪ್ರವೀಣ್ ನೆಟ್ಟಾರು ಎಂಬಾತನ ಹತ್ಯೆಯನ್ನು ರಾಜ್ಯದೆಲ್ಲೆಡೆ ಬಿಜೆಪಿ ಪಕ್ಷ ಖಂಡಿಸಿದ್ದು, ಹಲವು ನಾಯಕರು ರಾಜೀನಾಮೆ ನೀಡುತ್ತಿದ್ದಾರೆ. 2020 ರಿಂದ ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾಗಿರುವ ತೇಜಸ್ವಿ ಸೂರ್ಯ ಅವರು ಪ್ರವೀಣ್ ಹತ್ಯೆಗೆ ಖಂಡನೆ ವ್ಯಕ್ತಪಡಿಸಿದ್ದಾರೆ.

ಪ್ರವೀಣ್ ನೆಟ್ಟಾರು ಹತ್ಯೆಗೆ ಸಂಬಂಧಿಸಿದಂತೆ ಪೊಲೀಸರು ಶಫೀಕ್ ಬೆಳ್ಳಾರೆ ಮತ್ತು ಝಾಕೀರ್ ಸವಣೂರು ಎಂಬವರನ್ನು ಬಂಧಿಸಲಾಗಿದ್ದು, ತನಿಖೆ ಮುಂದುವರಿಸಲಾಗಿದೆ ಎಂದು ಕಾನೂನು ಸುವ್ಯವಸ್ಥೆ ವಿಭಾಗದ ಎಡಿಜಿಪಿ ಅಲೋಕ್ ಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

Join Whatsapp