ಬೆಂಗಳೂರು: ಸಮಾಜದಲ್ಲಿ ಹಿಂಸೆ, ಕ್ಷೋಭೆ ಉಂಟು ಮಾಡುವಂತಹ ದುಷ್ಕೃತ್ಯವನ್ನು ಎಸಗಿರುವ ದುಷ್ಕರ್ಮಿಗಳನ್ನು ದಮನ ಮಾಡುವವರೆಗೂ ವಿಶ್ರಮಿಸುವುದಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು
ಅವರು ಇಂದು ಆರ್ ಟಿ ನಗರದ ನಿವಾಸದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿ ಮಾತನಾಡಿದರು.
ಮಂಗಳೂರಿನಲ್ಲಿ ನಡೆದ ಪ್ರವೀಣ್ ಅವರ ಹತ್ಯೆ ನಿನ್ನೆ ಸಂಭವಿಸಿದ್ದು ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಲಾಗಿದೆ. ಅಪರಾಧಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಆದೇಶ ನೀಡಲಾಗಿದೆ. ಕೇರಳ ರಾಜ್ಯದ ಪೊಲೀಸರೊಂದಿಗೆ ನಿರಂತರ ಸಂಪರ್ಕದಲ್ಲಿರಲಾಗಿದೆ. ಮಂಗಳೂರು ಹಾಗೂ ಕಾಸರಗೋಡು ಎಸ್ ಪಿಗಳೊಂದಿಗೆ ಮಾತನಾಡಲಾಗಿದೆ. ಕರ್ನಾಟಕ ಡಿಜಿಪಿ ಹಾಗೂ ಕೇರಳದ ಡಿಜಿಪಿಯವರೊಂದಿಗೆ ಮಾತನಾಡಿದ್ದಾರೆ. ಇಂದು ಕೂಡ ತಂಡಗಳನ್ನು ರಚಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಡಿಜಿಯವರನ್ನು ಕರೆಸಿ ಸಂಪೂರ್ಣ ಮಾಹಿತಿ ಪಡೆಯಲಾಗಿದೆ. ಶೀಘ್ರದಲ್ಲಿಯೇ ಕೊಲೆಗೈದವರನ್ನು ಬಂಧಿಸಿ ಉಗ್ರ ಶಿಕ್ಷೆ ನೀಡಲಾಗುವುದು ಎಂದರು.
ಹಿಂದೆ ನಡೆದ ಮಂಗಳೂರು, ಡಿ.ಜಿ.ಹಳ್ಳಿ, ಶಿವಮೊಗ್ಗದ ಪ್ರಕರಣಗಳಂತೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಜನರಿಗೆ ಭರವಸೆ ನೀಡಲಾಗಿದೆ. ಅಲ್ಲದೇ ಘಟನೆಯ ಹಿಂದಿರುವ ವ್ಯಕ್ತಿಗಳು, ಸಂಘಟನೆಗಳು ಯಾರೇ ಇದ್ದರೂ ಅವರನ್ನು ಸದೆಬಡೆಯುವ ಕೆಲಸವನ್ನು ಮಾಡಲಾಗುವುದು. ಜನರು ಆವೇಶಕ್ಕೆ ಒಳಗಾಗದೇ ಶಾಂತಿ ಸುವ್ಯವಸ್ಥೆಯನ್ನು ಕಾಪಾಡಬೇಕೆಂದು ಹಾಗೂ ಈ ಸಂದರ್ಭದಲ್ಲಿ ಪ್ರಚೋದನಾಕಾರಿ ಹೇಳಿಕೆಗಳನ್ನು ನೀಡದೇ ತನಿಖೆಗೆ ಎಲ್ಲರೂ ಸಹಕರಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಪ್ರಕರಣವನ್ನು ರಾಷ್ಟ್ರೀಯ ತನಿಖಾ ದಳಕ್ಕೆ ವಹಿಸಿಕೊಡುವ ಸಂದರ್ಭ ಬಂದರೆ ವಹಿಸಿಕೊಡಲು ಹಿಂಜರಿಯುವುದಿಲ್ಲ ಎಂದು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ತಿಳಿಸಿದರು.