ಮಂಗಳೂರು: ಸುಳ್ಯ ಪ್ರವೀಣ್ ಹತ್ಯೆ ಪ್ರಕರಣದಲ್ಲಿ ಪೊಲೀಸರ ಮೇಲೆ ತೀವ್ರ ರಾಜಕೀಯ ಒತ್ತಡ ಹೇರಲಾಗುತ್ತಿದೆ. ಆದ್ದರಿಂದ ಪೊಲೀಸರು ನಕಲಿ ಎನ್ ಕೌಂಟರ್ ನಡೆಸುವ ಸಾಧ್ಯತೆ ಇದೆ ಎಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಜ್ಯ ಕಾರ್ಯದರ್ಶಿ ಎ.ಕೆ.ಅಶ್ರಫ್ ಆತಂಕ ವ್ಯಕ್ತಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವನ್ನು ಸಂತೃಪ್ತಿಪಡಿಸಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಅದಕ್ಕಾಗಿಯೇ ಅಮಾಯಕರನ್ನು ಬಂಧಿಸಲಾಗಿದೆ. ಮಾತ್ರವಲ್ಲ ಅವರನ್ನು ನಕಲಿ ಎನ್ ಕೌಂಟರ್ ನಡೆಸುವ ಆತಂಕವಿದೆ ಎಂದು ಹೇಳಿದರು.
ಪೊಲೀಸರು ಯಾವುದೇ ಕಾರಣಕ್ಕೂ ರಾಜಕೀಯ ಒತ್ತಡಕ್ಕೆ ಮಣಿಯಬಾರದು. ಮಾಧ್ಯಮಗಳು ಕೂಡ ಏಕಮುಖ ವರದಿ ಮಾಡಬಾರದು ಎಂದು ಒತ್ತಾಯಿಸಿದ ಅವರು, ಅಮಾಯಕ ಮುಸ್ಲಿಮ್ ಯುವಕರನ್ನು ವಿಚಾರಣೆಯ ನೆಪದಲ್ಲಿ ಠಾಣೆಗಳಿಗೆ ದೌರ್ಜನ್ಯವೆಸಲಾಗುತ್ತಿದೆ ಎಂದು ಆರೋಪಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರವೀಣ್ ನಿವಾಸಕ್ಕೆ ಭೇಟಿ ನೀಡಿ ಸಾಂತ್ವನ ಹೇಳಿ ಪರಿಹಾರ ನೀಡಿದ್ದಾರೆ. ಆದರೆ ಅದೇ ಪ್ರದೇಶದಲ್ಲಿ ಇತ್ತೀಚೆಗೆ ಸಂಘಪರಿವಾರದಿಂದ ಹತ್ಯೆಯಾದ ಮಸೂದ್ ಮನೆಗೆ ಭೇಟಿ ನೀಡಿಲ್ಲ. ಪರಿಹಾರವನ್ನೂ ನೀಡಿಲ್ಲ. ಸರ್ಕಾರದಿಂದಲೇ ಈ ರೀತಿಯ ತಾರತಮ್ಯವೇಕೆ? ಎಂದು ಅವರು ಪ್ರಶ್ನಿಸಿದರು.