ಮಂಗಳೂರು: ಟೋಲ್ ಗೇಟ್ ವಿರೋಧಿ ಹೋರಾಟದಲ್ಲಿ ಭಾಗಿಯಾಗಿದ್ದ ಸಾಮಾಜಿಕ ಕಾರ್ಯಕರ್ತೆ ಪ್ರತಿಭಾ ಕುಳಾಯಿ ವಿರುದ್ಧ ಅವಹೇಳನಕಾರಿಯಾಗಿ ಬರೆದ ಆರೋಪಿಗಳನ್ನು ಶೀಘ್ರವೇ ಬಂಧಿಸಬೇಕು. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಕಾಂಗ್ರೆಸ್ ನಾಯಕಿ ಮಮತಾ ಗಟ್ಟಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಟೋಲ್ ಗೇಟ್ ಅನಧಿಕೃತ ಎಂದು ಅದರ ವಿರುದ್ಧ ಆಯೋಜಿಸಿದ್ದ ಹೋರಾಟದಲ್ಲಿ ಪ್ರತಿಭಾ ಕುಳಾಯಿ ಭಾಗವಹಿಸಿದ್ದರು. ಪ್ರತಿಭಟನೆ ನಡೆಸುವುದು ಎಲ್ಲರ ಹಕ್ಕು. ಸುರತ್ಕಲ್ ಟೋಲ್ ವಿರೋಧಿ ಹೋರಾಟದಲ್ಲಿ ಭಾಗವಹಿಸಿದ ಪ್ರತಿಭಾ ಕುಳಾಯಿ ಅವರನ್ನು ನಾನಾ ರೀತಿಯಲ್ಲಿ ನಿಂದಿಸಿರುವುದನ್ನು ಸಹಿಸಲು ಸಾಧ್ಯವಿಲ್ಲ. ಇಂತಹ ವಿಕೃತರನ್ನು ಕೂಡಲೇ ಬಂಧಿಸಿ ಕಾನೂನಿನ ರುಚಿ ತೋರಿಸಬೇಕು ಎಂದು ಆಗ್ರಹಿಸಿದರು.
ಬಿಜೆಪಿಯವರು ಹೆಣ್ಣನ್ನ ಪೂಜನೀಯ, ದೇವಿ ಎಂದೆಲ್ಲಾ ಭಾಷಣ ಮಾಡುತ್ತಾರೆ. ಆದರೆ ಬಿಜೆಪಿ ಆಡಳಿತದಲ್ಲಿ ಮಹಿಳೆಯರಿಗೆ ನಿತ್ಯ ಅಗೌರವ ಸಲ್ಲುತ್ತಿದೆ. ಇತ್ತೀಚೆಗೆ ಸಚಿವ ವಿ. ಸೋಮಣ್ಣನವರು ಮಹಿಳೆಗೆ ಸಾರ್ವಜನಿಕ ವೇದಿಕೆಯಲ್ಲೇ ಕಪಾಳಮೋಕ್ಷ ಮಾಡುವ ಹೀನ ಕೆಲಸ ಮಾಡಿದ್ದಾರೆ. ಮುಖ್ಯಮಂತ್ರಿ ಕೂಡಲೆ ಸೋಮಣ್ಣನವರನ್ನು ಕಿತ್ತು ಹಾಕಬೇಕು ಎಂದು ಮಮತಾ ಗಟ್ಟಿ ಹೇಳಿದರು.
ಬೇಟಿ ಪಡಾವೋ ಎನ್ನುವ ಈ ಸರಕಾರವು ಓದಿದ ಮಹಿಳೆಯರಿಗೆ ಯಾವುದೇ ಗೌರವ ಸಿಗದಂತೆ ಮಾಡಿದೆ. ಅಗತ್ಯ ವಸ್ತುಗಳ ಬೆಲೆಯೇರಿಸಿ ಬಿಜೆಪಿಯವರು ಮಹಿಳೆ ಬದುಕದಂತೆ ಮಾಡಿದರು. ಪ್ರತಿಭಾ ಕುಳಾಯಿ ಅವರ ವಿಷಯದಲ್ಲಿ ಇನ್ನಷ್ಟು ದಿನ ಕಾದು ನೋಡಿ ದೊಡ್ಡ ಹೋರಾಟ ಹಮ್ಮಿಕೊಳ್ಳುವುದಾಗಿ ಮಮತಾ ಗಟ್ಟಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಚಂದ್ರಕಲಾ ಜೋಗಿ, ಅಪ್ಪಿ, ಶಶಿಧರ ಹೆಗ್ಡೆ, ನೀರಜ್ ಪಾಲ್, ಶಾಂತಲಾ ಗಟ್ಟಿ, ಮಲ್ಲಿಕಾ ಪಕ್ಕಳ, ಶಬೀರ್ ಮೊದಲಾದವರು ಉಪಸ್ಥಿತರಿದ್ದರು.