ಉಡುಪಿ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ನಿಂದ ಭೂ ಮಂಜೂರಾತಿಗೆ ತಡೆ: ಪರಿಷತ್ ನಲ್ಲಿ ಪ್ರತಾಪ್ ಚಂದ್ರ ಶೆಟ್ಟಿ ಏಕಾಂಗಿ ಹೋರಾಟ

Prasthutha|

ಬೆಳಗಾವಿ: ಉಡುಪಿ ಜಿಲ್ಲೆಯಲ್ಲಿ ನಮೂನೆ 50, 53ಹಾಗೂ 94ಸಿ ಅಡಿ ಸಲ್ಲಿಸಿದ ಅರ್ಜಿಗಳಲ್ಲಿ ಡೀಮ್ಡ್ ಫಾರೆಸ್ಟ್ ಹಾಗೂ ಭಾಗಶಃ ಡೀಮ್ಡ್ ಫಾರೆಸ್ಟ್ ಎಂಬ ಕಾರಣಕ್ಕೆ ಭೂ ಮಂಜೂರಾತಿ ತಡೆಹಿಡಿಲಾಗುತ್ತಿದೆ ಇದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಹಿರಿಯ ಸದಸ್ಯ ಕೆ.ಪ್ರತಾಪ ಚಂದ್ರಶೆಟ್ಟಿ ವಿಧಾನ ಪರಿಷತ್ ನಲ್ಲಿ ಬುಧವಾರ ಏಕಾಂಗಿಯಾಗಿ ಸದನದ ಬಾವಿಗಿಳಿದು ಧರಣಿ ನಡೆಸಿದ ಘಟನೆ ನಡೆಯಿತು.

- Advertisement -


ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿ ಕಂದಾಯ ಸಚಿವರಿಗೆ ಪ್ರಶ್ನೆ ಕೇಳಿದ ಅವರು, ಉಡುಪಿ ಜಿಲ್ಲೆಯಲ್ಲಿ ನಮೂನೆ 50, 53ಹಾಗೂ 94ಸಿ ಅಡಿ ಸಲ್ಲಿಸಿದ ಅರ್ಜಿಗಳಲ್ಲಿ ಡೀಮ್ಡ್ ಫಾರೆಸ್ಟ್ ಹಾಗೂ ಭಾಗಶಃ ಡೀಮ್ಡ್ ಫಾರೆಸ್ಟ್ ಎಂಬ ಕಾರಣಕ್ಕೆ ಭೂ ಮಂಜೂರಾತಿ ತಡೆಹಿಡಿಲಾಗುತ್ತಿದೆ. ಇದು ಬಹಳ ವರ್ಷಗಳಿಂದ ಇತ್ಯರ್ಥವಾಗಿಲ್ಲ. ಇವತ್ತು ನನಗೆ ಸಮಾಧಾನಕರ ಉತ್ತರ ಸಿಗಬೇಕು. ಇಲ್ಲವಾದರೆ ಈಗಾಗಲೇ ನಾನು ಶಾಲು ತಂದಿದ್ದೇನೆ , ಇಲ್ಲಿಯೇ ಮಲಗುತ್ತೇನೆ. ನನಗೆ ನಿಖರ ಉತ್ತರ ಬೇಕು. ಇದು ನನ್ನ ಕೊನೆಯ ಹೋರಾಟ ಎಂದು ಆಡಳಿತ ಪಕ್ಷಕ್ಕೆ ಚಾಟಿ ಬೀಸಿದರು.


ಕಂದಾಯ ಸಚಿವ ಆರ್.ಅಶೋಕ್, ಡಿಮ್ಡ್ ಫಾರೆಸ್ಟ್ ಎಂಬುದೇ ಅವೈಜ್ಞಾನಿಕ. ಹಿಂದೆ ಸರ್ಕಾರಿ ಜಾಗವನ್ನು ಆಗಿನ ಜಿಲ್ಲಾಧಿಕಾರಿಗಳು ಅರಣ್ಯ ಇಲಾಖೆಗೆ ಬರೆದುಕೊಟ್ಟಿದ್ದಾರೆ. ರಾಜ್ಯದಲ್ಲಿ ಸುಮಾರು 10.83 ಲಕ್ಷ ಎಕರೆ ಡಿಮ್ಡ್ ಫಾರೆಸ್ಟ್ ಇದೆ . ಅದರಲ್ಲಿ ರೈತರು ಉಳುಮೆ ಮಾಡುತ್ತಿದ್ದಾರೆ. ಸರ್ಕಾರ ಮನೆ ಕಟ್ಟಿಕೊಳ್ಳಲು 94 ಸಿ ಅಡಿ ಅನುಮತಿ ನೀಡಿದೆ.

- Advertisement -


ಆದರೆ ಒಮ್ಮೆ ಅರಣ್ಯ ಇಲಾಖೆಗೆ ಭೂಮಿ ಸೇರಿದರೆ ವಾಪಾಸ್ ತೆಗೆದುಕೊಳ್ಳುವುದು ಬಹಳ ಕಷ್ಟ. ಚೆನೈನಲ್ಲಿ ಸುಪ್ರೀಂಕೋರ್ಟ್ ನ ಪೀಠ ಇದೆ. ಅಲ್ಲಿಗೆ ಪ್ರಮಾಣ ಪತ್ರ ಸಲ್ಲಿಸಿ ಡಿಮ್ಡ್ ಫಾರೆಸ್ಟ್ ನಲ್ಲಿ ಇರುವವರನ್ನು ಒಕ್ಕಲೆಬ್ಬಿಸದಂತೆ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ನಾನು ಸಚಿವನಾದ ಮೇಲೆ ದಿನ ಬಿಟ್ಟು ಅರಣ್ಯ ಇಲಾಖೆಯೊಂದಿಗೆ ಸಭೆ ನಡೆಸುತ್ತಿದ್ದೇನೆ. 10 ಲಕ್ಷ ಹೆಕ್ಟೇರ್ ನಲ್ಲಿ 6.64 ಲಕ್ಷ ಹೆಕ್ಟರ್ ಅನ್ನು ಕಂದಾಯ ಇಲಾಖೆಗೆ ಬಿಟ್ಟುಕೊಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ. ರೈತರಿಗೆ ಮನೆ ಕಟ್ಟಿಕೊಂಡವರಿಗೆ ಭೂಮಿ ಕೊಡಿಸುತ್ತೇವೆ ಎಂದರು.


ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಪ್ರತಾಪ್ ಚಂದ್ರ ಶೆಟ್ಟಿ, ಈ ರೀತಿಯ ಉತ್ತರಗಳನ್ನು ಮೂರು ನಾಲ್ಕು ಸಚಿವರಿಂದ ಕೇಳಿಕೊಂಡು ಬಂದಿದ್ದೇವೆ. ಕೇಳಿ ಕೇಳಿ ಸಾಕಾಗಿದೆ. ಸರ್ಕಾರವೇ 94 ಸಿ ಫಾರಂ ಪ್ರಕಾರ ಅನುಮತಿ ನೀಡಿದೆ, ಮತ್ತೆ ಮನೆ ಕಟ್ಟಿಕೊಳ್ಳಲು ತಡೆಯುತ್ತಾರೆ ಎಂದರೆ ಹೇಗೆ. ನೀವೆ ಕೊಟ್ಟಿರುವ 94 ಸಿ ಫಾರಂನ ಫಲಾನುಭವಿಗಳಿಗೆ ಹಕ್ಕು ಪತ್ರ ನೀಡದಿದ್ದರೆ ಹೇಗೆ ಎಂದು ಪ್ರಶ್ನಿಸಿದರು.


ಕಂದಾಯ ಸಚಿವರು ಹಿಂದೆ ಏನಾಗಿತ್ತು ಗೊತ್ತಿಲ್ಲ. ಆದರೆ ನಾನು ಸಚಿವನಾಗಿದ್ದ ಮೇಲೆ ಅಧಿಕೃತವಾಗಿ ಸಭೆ ನಡೆಸಿದ್ದೇನೆ. ಅರಣ್ಯ ಇಲಾಖೆ ಭೂಮಿ ಬಿಟ್ಟು ಕೊಡುವುದಾಗಿ ಲಿಖಿತವಾಗಿ ಹೇಳಿದೆ. ಅದನ್ನು ಆಧರಿಸಿ ಸುಪ್ರಿಂಕೋರ್ಟ್ಗೆ ಪ್ರಮಾಣ ಪತ್ರ ಸಲ್ಲಿಸುತ್ತೇವೆ. ಅರಣ್ಯ ಇಲಾಖೆಯ ಲಿಖಿತ ಹೇಳಿಕೆಯನ್ನು ಕಾನೂನು ಇಲಾಖೆ ಪರಿಶೀಲನೆ ನಡೆಸುತ್ತಿದೆ ಎಂದು ಹೇಳಿದರು.

94 ಸಿ ನೀಡಿರುವುದು ಯಾರು ಕಂದಾಯ ಇಲಾಖೆ ತಾನೇ, ಅದನ್ನು ಪರಿಗಣಿಸಿ ಹಕ್ಕು ಪತ್ರ ನೀಡುವ ಕುರಿತು ನನಗೆ ಸ್ಪಷ್ಟ ಭರವಸೆ ಬೇಕು ಎಂದು ಪ್ರತಾಪ್ ಶೆಟ್ಟಿ ಪಟ್ಟು ಹಿಡಿದು ಏಕಾಂಗಿಯಾಗಿ ಧರಣಿಗೆ ಮುಂದಾದರು.


ಈ ಕುರಿತು ಚರ್ಚೆ ನಡೆಸುತ್ತೇನೆ ಎಂದು ಸಚಿವ ಅಶೋಕ್ ಹೇಳಿದಾಗ ಮಾತುಕತೆ ನಡೆಸಲು ಇದೇನು ಬೀಗತನವೇ, ನಿಖರ ಉತ್ತರ ನೀಡಿ ಎಂದು ಪ್ರತಾಪ್ ಚಂದ್ರ ಶೆಟ್ಟಿ ಖಾರವಾಗಿ ಪ್ರತಿಕ್ರಿಯಿಸಿದರು.
ಅಲ್ಲದೇ, ಇದು ಸರಳವಾದ ಸಮಸ್ಯೆ ಸುಲಭವಾಗಿ ಬಗೆ ಹರಿಸಬಹುದು. ಸರ್ಕಾರ ನಿಖರ ಉತ್ತರ ಹೇಳಲಿ ಎಂದು ವಿರೋಧ ಪಕ್ಷದ ನಾಯಕರಾದ ಎಸ್.ಆರ್.ಪಾಟೀಲ್, ಬಿ.ಕೆ.ಹರಿಪ್ರಸಾದ್, ಎಂ.ನಾರಾಯಣಸ್ವಾಮಿ ಆಗ್ರಹಿಸಿದರು.


ಇದೇ ವೇಳೆ ಸಚಿವ ಸುನೀಲ್ ಕುಮಾರ್ ಎದ್ದುನಿಂತು, ಇದರಲ್ಲಿ ರಾಜಕಾರಣ ಮಾಡುವುದು ಬೇಡ ಎಂದು ನಾವು ಸುಮ್ಮನಿದ್ದೇವೆ. ನೀವು ರಾಜಕಾರಣ ಮಾಡಿದರೆ ನಾವು ಮಾಡುತ್ತೇವೆ. ಡಿಮ್ಡ್ ಫಾರೆಸ್ಟ್ ನಿಮ್ಮ ಸರ್ಕಾರದ ಪಾಪದ ಕೂಸು. ಅದನ್ನು ಸರಿಪಡಿಸಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
ಆಗ ಮತ್ತೆ ಮಾತಿನಚಕಮಕಿ ನಡೆಯಿತು. ಈ ಹಂತದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು, ಈ ವಿಷಯವನ್ನು ಅರ್ಧ ಗಂಟೆಗೆ ಚರ್ಚೆಗೆ ಕಾಲಾವಕಾಶ ನೀಡುವುದಾಗಿ ಭರವಸೆ ನೀಡಿ ವಿಷಯಕ್ಕೆ ಅಂತ್ಯಗೊಳಿಸಿದರು.

Join Whatsapp