ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣ: ಡಿವೈಎಸ್ಪಿ-ಇನ್ಸ್ಪೆಕ್ಟರ್‌ಗೆ ನೋಟಿಸ್

Prasthutha|

ಹಾಸನ: ನಗರ ಸಭೆ ಸದಸ್ಯ ಪ್ರಶಾಂತ್ ನಾಗರಾಜ್ ಹತ್ಯೆ ಪ್ರಕರಣ ಸಂಬಂಧಿಸಿ ಡಿವೈಎಸ್ಪಿ ಉದಯ ಭಾಸ್ಕರ್ ಮತ್ತು ಇನ್ಸ್ ಪೆಕ್ಟರ್ ರೇಣುಕಾ ಪ್ರಸಾದ್ ಅವರಿಗೆ ನೋಟಿಸ್ ಜಾರಿ ಮಾಡಲಾಗಿದೆ. ಅಲ್ಲದೆ ಹಲವು ಆರೋಪಗಳ ಹಿನ್ನೆಲೆಯಲ್ಲಿ ಪಿಐ ರೇಣುಕಾ ಪ್ರಸಾದ್ ಅವರನ್ನು ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿದೆ. ಜೊತೆಗೆ ತನಿಖೆಗೂ ಆದೇಶ ಮಾಡಲಾಗಿದೆ ಎಂದು ಎಸ್ಪಿ ಶ್ರೀನಿವಾಸ್‌ಗೌಡ ತಿಳಿಸಿದರು.

- Advertisement -

 ನಗರ ವೃತ್ತದ ವ್ಯಾಪ್ತಿಯಲ್ಲಿ ಕೊಲೆ ನಡೆದಿದೆ. ಇದಕ್ಕೆ ಕರ್ತವ್ಯ ಲೋಪ ಕಾರಣ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ. ಶಿಸ್ತುಕ್ರಮದ ಅಡಿ ನೋಟಿಸ್ ಕೊಟ್ಟಿದ್ದೇನೆ. ಕಡ್ಡಾಯ ರಜೆ ಮೇಲೆ ಸ್ಟೇಷನ್ ನಿಂದ ಕಳುಹಿಸಿದ್ದೇನೆ ಎಂದು ಹೇಳಿದರು.

ನಗರಸಭೆ ಹಾಲಿ ಸದಸ್ಯರಾಗಿದ್ದ ಪ್ರಶಾಂತ್ ನಾಗರಾಜ್ ಹತ್ಯೆ ಹಿನ್ನೆಲೆ ಅಗಲಿದ ಸದಸ್ಯನಿಗೆ ನಗರಸಭೆ ವತಿಯಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಅಧ್ಯಕ್ಷ ಮೋಹನ್ ಕುಮಾರ್ ನೇತೃತ್ವದಲ್ಲಿ ಸದಸ್ಯರು,ನಗರಸಭೆ ಅಧಿಕಾರಿ ವರ್ಗ ಹಾಗೂ ಸಿಬ್ಬಂದಿ ಯಿಂದ ಸಂತಾಪ ಸೂಚಿಸಲಾಯಿತು. ನಗರಸಭೆ ಸಭಾಂಗಣದಲ್ಲಿ ಪ್ರಶಾಂತ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪಾರ್ಚನೆ ಮಾಡಲಾಯಿತು.

- Advertisement -

ಡಾ.ರಾಜ್ ಕುಮಾರ್ ಅಭಿಮಾನಿಗಳ ಸಂಘದ ಅಧ್ಯಕ್ಷ ಹಾಗೂ ಕನ್ನಡಪರ ಹೋರಾಟಗಾರ ಸಾ.ರಾ.ಗೋವಿಂದು ಹಿಮ್ಸ್ ಆಸ್ಪತ್ರೆಗೆ ಆಗಮಿಸಿ ಮೃತದೇಹದ ಅಂತಿಮ ದರ್ಶನ ಪಡೆದರು. ನಂತರ ಮಾತನಾಡಿದ ಅವರು, ರಾಜಕೀಯ ದ್ವೇಷದಿಂದ ಹತ್ಯೆ ನಡೆದಿದೆ. ಸ್ಥಳೀಯ ಅಧಿಕಾರಿಗಳಿಂದ ತನಿಖೆ ಬೇಡ. ಸಿಬಿಐ ಅಥವಾ ಸಿಐಡಿ ತನಿಖೆಯಾಗಲಿ, ಸತ್ಯ ಹೊರಬರಲಿ ಎಂದು ಒತ್ತಾಯಿಸಿದರು. ಜೆಡಿಎಸ್ ಕಾರ್ಯಕರ್ತನಾಗಿದ್ದ ಪ್ರಶಾಂತ್ ಏಳಿಗೆ ಸಹಿಸದೆ ಹತ್ಯೆ ಮಾಡಲಾಗಿದೆ. ರೇವಣ್ಣ ಅವರು ಜವಾಬ್ದಾರಿಯಾಗಿ ನಿಂತು ತನಿಖೆಗೆ ಒತ್ತಾಯಿಸಿದ್ದಾರೆ ಎಂದರು. ಪ್ರಶಾಂತ್ ಅವರ ತಂದೆ ಹಾ.ರಾ.ನಾಗರಾಜ್ ಅವರನ್ನೂ ಕೊಲೆ ಮಾಡಲಾಗಿತ್ತು. ಪ್ರಶಾಂತ್ ತಂದೆಗೆ ತಕ್ಕ ಮಗನಂತೆ ಬದುಕಿದ್ದರು. ಕೊಲೆ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆದು ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿದರು.

Join Whatsapp