ತೆಲಂಗಾಣ ಮುಖ್ಯಮಂತ್ರಿಯನ್ನು ಭೇಟಿಯಾದ ಪ್ರಶಾಂತ್ ಕಿಶೋರ್, ಪ್ರಕಾಶ್ ರೈ

Prasthutha|

ಹೈದರಾಬಾದ್: ಚುನಾವಣಾ ತಂತ್ರ ನಿಪುಣ ಪ್ರಶಾಂತ್ ಕಿಶೋರ್ ಮತ್ತು ಖ್ಯಾತ ಚಿತ್ರ ನಟ ಪ್ರಕಾಶ್ ರಾಜ್ ಅವರು ತೆಲಂಗಾಣ ರಾಷ್ಟ್ರ ಸಮಿತಿಯ ಮುಖ್ಯಸ್ಥ ಹಾಗೂ ತೆಲಂಗಾಣದ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರನ್ನು ಹೈದರಾಬಾದಿನಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

- Advertisement -

ರಾಷ್ಟ್ರೀಯ ಮೈತ್ರಿ ಕೂಟ ರಚನೆ ಸಂಬಂಧ ಎರಡು ದಿನಗಳ ಹಿಂದೆಯಷ್ಟೇ ಚಂದ್ರಶೇಖರ ರಾವ್ ಅವರು ಮುಂಬಯಿಗೆ ತೆರಳಿ ಶಿವಸೇನೆ ಮತ್ತು ಎನ್ ಸಿಪಿ ನಾಯಕರನ್ನು ಭೇಟಿಯಾದ ಬೆನ್ನಿಗೆ ಈ ಭೇಟಿ ನಡೆದಿದೆಯೆನ್ನುವುದು ವಿಶೇಷ. ಮಮತಾ ಬ್ಯಾನರ್ಜಿಯವರ ಅಭೂತಪೂರ್ವ ವಿಜಯದ ಹಿಂದೆ ಇರುವ ವ್ಯಕ್ತಿಗಳಲ್ಲಿ ಒಬ್ಬರಾದ ಪ್ರಶಾಂತ್ ಕಿಶೋರ್ ಅವರು ಚಂದ್ರಶೇಖರ ರಾವ್ ಜೊತೆ ವಿವಿಧ ವಿಷಯಗಳನ್ನು ಚರ್ಚಿಸಿದ್ದಲ್ಲದೆ ಅವರ ರಾಷ್ಟ್ರ ರಾಜಕೀಯ ಪ್ರವೇಶದ ಬಗೆಗೂ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ. ಮುಖ್ಯವಾಗಿ ಪ್ರಾದೇಶಿಕ ಪಕ್ಷಗಳ ಆಡಳಿತವಿರುವ ರಾಜ್ಯಗಳ ಬಗ್ಗೆ ಮೋದಿ ಸರಕಾರದ ಮಲತಾಯಿ ಧೋರಣೆ ಬಗ್ಗೆ ಚರ್ಚೆ ನಡೆಸಿದ್ದಾರೆ. ಎರ್ರವೆಲ್ಲಿಯಲ್ಲಿರುವ ಚಂದ್ರಶೇಖರ ರಾವ್ ಅವರ ಫಾರಂ ಹೌಸ್ ನಲ್ಲಿ ಈ ಭೇಟಿ ನಡೆಯಿತು. ಕಳೆದೆರಡು ದಿನಗಳಿಂದ ತೆಲಂಗಾಣದಲ್ಲಿರುವ ಪ್ರಶಾಂತ್ ಕಿಶೋರ್ ಅವರು ರಾಜ್ಯದಲ್ಲಿನ ಸದ್ಯದ ರಾಜಕೀಯ ಪರಿಸ್ಥಿತಿಯ ಬಗ್ಗೆ ಮಾಹಿತಿ ಕಲೆ ಹಾಕಿದರು ಎಂದು ಹೇಳಲಾಗಿದೆ. ಚಂದ್ರಶೇಖರ ರಾವ್ ಮುಂಬಯಿಗೆ ಭೇಟಿ ನೀಡಿದಾಗ ಈ ತಂಡದೊಂದಿಗೆ ನಟ ಪ್ರಕಾಶ್ ರಾಜ್ ಕೂಡ ಸೇರಿದ್ದಾರೆ.

ಶನಿವಾರ ಸಂಜೆ ಮುಖ್ಯಮಂತ್ರಿಗಳ ಸಲಹೆ ಮೇಲೆ ಪ್ರಶಾಂತ್ ಕಿಶೋರ್ ಮತ್ತು ಪ್ರಕಾಶ್ ರಾಜ್ ಅವರು ಮಲ್ಲಣ್ಣ ಸಾಗರ ಜಲಾಶಯಕ್ಕೆ ಭೇಟಿ ನೀಡಿದರು. ಕಳೆದ ವಾರವಷ್ಟೇ ಕೆಸಿಆರ್ ಅವರು ರಾಷ್ಟ್ರಕ್ಕೆ ಅರ್ಪಿಸಿದ ಜಲಾಶಯವು ಗೋದಾವರಿ ನದಿಯ ಅತಿ ದೊಡ್ಡ ನೀರಿನ ಆವಾರವಾಗಿದೆ. ಪ್ರಶಾಂತ್ ಕಿಶೋರ್ ಮತ್ತು ಪ್ರಕಾಶ್ ರಾಜ್ ಅವರು ಮಲ್ಲಣ್ಣ ಸಾಗರ ಜಲಾಶಯಕ್ಕೆ ಭೇಟಿ ನೀಡಿದ ಫೋಟೋಗಳು ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್ ಆಗಿವೆ. ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್ ಅವರು ಪ್ರತಿನಿಧಿಸುವ ಗಜವೇಲ್ ವಿಧಾನ ಸಭಾ ಕ್ಷೇತ್ರದಲ್ಲಿ ಆಗಿ(ಗುತ್ತಿ)ರುವ ನಾನಾ ಅಭಿವೃದ್ಧಿ ಕಾರ್ಯಗಳನ್ನು ಕೂಡ ಪ್ರಕಾಶ್ ರಾಜ್ ವೀಕ್ಷಿಸಿದರು.

Join Whatsapp