ನವದೆಹಲಿ : ಎನ್ ಸಿಪಿ ಮುಖಂಡ ಶರದ್ ಪವಾರ್ ಅವರನ್ನು ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ಹದಿನೈದು ದಿನಗಳ ಅಂತರದಲ್ಲಿ ಮೂರನೇ ಬಾರಿ ಭೇಟಿಯಾಗಿದ್ದಾರೆ. ಎಂಟು ವಿವಿಧ ರಾಜಕೀಯ ಪಕ್ಷಗಳು ಮತ್ತು ವಿವಿಧ ಕ್ಷೇತ್ರದ ಗಣ್ಯರು ಪವಾರ್ ನಿವಾಸದಲ್ಲಿ ಭೇಟಿಯಾಗಿ ಮಾತುಕತೆ ನಡೆಸಿದ ಬೆನ್ನಲ್ಲೇ ನಡೆದ ಈ ಭೇಟಿ ಇನ್ನಷ್ಟು ಕುತೂಹಲಗಳಿಗೆ ಕಾರಣವಾಗಿದೆ.
ಪವಾರ್ ಅವರ ನಿವಾಸದಲ್ಲಿ ಅವರು ಮತ್ತು ಪ್ರಶಾಂತ್ ಕಿಶೋರ್ ನಡುವೆ ಗೌಪ್ಯ ಮಾತುಕತೆ ನಡೆದಿದೆ. ಸುಮಾರು ಒಂದು ಗಂಟೆ ಮಾತುಕತೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಪ್ರಶಾಂತ್ ಕಿಶೋರ್ ಟಿಎಂಸಿ ಚುನಾವಣೆ ಗೆಲ್ಲಿಸುವಲ್ಲಿ ಪ್ರಶಾಂತ್ ಕಿಶೋರ್ ರಣನೀತಿ ರೂಪಿಸಿದ್ದವರು. ವಿವಿಧ ಪಕ್ಷಗಳಿಗೆ ಚುನಾವಣಾ ರಣತಂತ್ರ ರೂಪಿಸುವಲ್ಲಿ ಪೃಶಾಂತ್ ಕಿಶೋರ್ ಈಗಾಗಲೇ ಯಶಸ್ವಿಯಾಗಿದ್ದಾರೆ.
ಈಗಾಗಲೇ ಎರಡು ಬಾರಿ ಪವಾರ್ ಅವರನ್ನು ಪ್ರಶಾಂತ್ ಕಿಶೋರ್ ಭೇಟಿಯಾಗಿದ್ದರು. ಇದೀಗ ಮತ್ತೊಮ್ಮೆ ಅವರನ್ನು ಪವಾರ್ ನಿವಾಸಕ್ಕೆ ಕರೆಸಿಕೊಳ್ಳಲಾಗಿದೆ. ಮುಂದಿನ ಲೋಕಸಭಾ ಚುನಾವಣೆಗೆ ಬಿಜೆಪಿ ವಿರುದ್ಧ ರಣತಂತ್ರ ರೂಪಿಸಲು ವಿರೋಧ ಪಕ್ಷಗಳು ಮೈತ್ರಿಕೂಟ ರಚಿಸುತ್ತಿರುವ ಬಗ್ಗೆ ಸಂದೇಹಗಳು ಉದ್ಭವವಾಗಿವೆ. ಪವಾರ್ ರ ದೆಹಲಿ ನಿವಾಸದಲ್ಲಿ ನಡೆದ ಮಾತುಕತೆಯೊಂದರಲ್ಲಿ ಟಿಎಂಸಿ, ಎಎಪಿ, ಆರ್ ಎಲ್ ಡಿ, ಎಡಪಕ್ಷಗಳು ಸೇರಿದಂತೆ ಎಂಟು ಪಕ್ಷಗಳ ಪ್ರತಿನಿಧಿಗಳು ಭಾಗಿಯಾಗಿದ್ದರು. ವಿವಿಧ ರಂಗದ ಪ್ರಮುಖರೂ ಭಾಗವಹಿಸಿದ್ದರು.