ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಗಣೇಶ ಚತುರ್ಥಿ ಆಚರಣೆಗೆ ಸರ್ಕಾರ ಅನುಮತಿ ನೀಡಬೇಕು: ಪ್ರಲ್ಹಾದ್ ಜೋಶಿ ಆಗ್ರಹ

Prasthutha|

ಬೆಂಗಳೂರು: ಗಣೇಶ ಚತುರ್ಥಿ ಹಬ್ಬಕ್ಕೆ ದಿನಗಣನೆ ಆರಂಭವಾಗಿರುವಂತೆಯೇ ಹುಬ್ಬಳ್ಳಿಯ ಈದ್ಗಾ ಮೈದಾನ ಮತ್ತೆ ಸುದ್ದಿಯಲ್ಲಿದೆ. ಈದ್ಗಾ ಮೈದಾನದಲ್ಲಿ ಗಣೇಶ ಮೂರ್ತಿ ಸ್ಥಾಪನೆಗೆ ಮತ್ತು ಹಬ್ಬದ ಆಚರಣೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಹಾಗೂ ಹಿಂದುತ್ವ ಸಂಘಟನೆಗಳು ಸರ್ಕಾರವನ್ನು ಒತ್ತಾಯಿಸಿವೆ.

- Advertisement -

ಇದೀಗ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೂ ಈದ್ಗಾ ಮೈದಾನದಲ್ಲಿ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಬೇಕೆಂದು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಈ ವಿಚಾರವಾಗಿ ಸಾಮಾಜಿಕ ಮಾಧ್ಯಮ ಎಕ್ಸ್​​ನಲ್ಲಿ (ಟ್ವಿಟರ್) ಪೋಸ್ಟ್ ಮಾಡಿರುವ ಅವರು, ದೇಶಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಮತ್ತು ನಮ್ಮ ಹುಬ್ಬಳ್ಳಿ ಧಾರವಾಡದಲ್ಲೂ ಗಣೇಶೋತ್ಸವ ವಿಜೃಂಭಣೆಯಿಂದ ಆಚರಿಸಲಾಗುತ್ತದೆ ಎಂದು ಬರೆದಿದ್ದಾರೆ.

- Advertisement -

‘ಹುಬ್ಬಳ್ಳಿ ಚೆನ್ನಮ್ಮ ಮೈದಾನದಲ್ಲಿ (ಈದ್ಗಾ) ಕಳೆದ ವರ್ಷ ನ್ಯಾಯಾಲಯದ ಅನುಮತಿಯಂತೆ ಗಣಪತಿ ಕೂರಿಸಿ ಅತ್ಯಂತ ಶಾಂತಿಯುತವಾಗಿ ಸಾರ್ವಜನಿಕ ಗಣೇಶೋತ್ಸವ ಆಚರಿಸಲಾಗಿತ್ತು. ಆದರೆ ಈ ಬಾರಿ ರಾಜ್ಯ ಸರಕಾರ ಜಿಲ್ಲಾಡಳಿತದ ಮೂಲಕ ಚೆನ್ನಮ್ಮ ಮೈದಾನ(ಈದ್ಗಾ)ದಲ್ಲಿ ಗಣಪತಿ ಕೂರಿಸಲು ಅನುಮತಿ ನೀಡದೆ ಹಬ್ಬಕ್ಕೆ ಅಡ್ಡಿಪಡಿಸುತ್ತಿದೆ. ಹಿಂದೂಗಳ ಪವಿತ್ರ ಹಬ್ಬ ಗಣೇಶ ಚತುರ್ಥಿ ವಿಜೃಂಭಣೆಯಿಂದ ನಡೆಸಲು ಸರಕಾರ ಈ ಕೂಡಲೇ ಜಿಲ್ಲಾಡಳಿತಕ್ಕೆ ಸೂಚಿಸಿ ಅನುಮತಿ ನೀಡಬೇಕೆಂದು ಆಗ್ರಹಿಸುತ್ತೇನೆ. ಜೈ ಗಣೇಶ’ ಎಂದು ಉಲ್ಲೇಖಿಸಿದ್ದಾರೆ.

ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಕಳೆದ ಬಾರಿ ಸುಪ್ರೀಂ ಕೋರ್ಟ್ ನಮಗೆ ಅವಕಾಶ ನೀಡಿತ್ತು. ಈ ಬಾರಿಯೂ ನಾವು ಈದ್ಗಾ ಮೈದಾನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಲು ನಿರ್ಧಾರ ಮಾಡಿದ್ದೇವೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ಪ್ರತಿಷ್ಠಾಪನೆಗೆ ಅವಕಾಶ ನೀಡಲಾಗಿದೆ ಎಂದು ಹು-ಧಾ ಪಶ್ಚಿಮ ಕ್ಷೇತ್ರದ ಬಿಜೆಪಿ ಶಾಸಕ ಅರವಿಂದ್ ಬೆಲ್ಲದ್ ಬುಧವಾರ ಹೇಳಿದ್ದರು.

ಈ ಮಧ್ಯೆ, ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆಗೆ ಅವಕಾಶ ಮಾಡಿಕೊಡಬಾರದು ಎಂದು ವಿವಿಧ ದಲಿತ ಸಂಘ ಸಂಸ್ಥೆಗಳ ಮಹಾಮಂಡಳಿ ಆಗ್ರಹಿಸಿದೆ. ಒಂದು ವೇಳೆ ಅವಕಾಶ ಕೊಟ್ಟರೆ ಪ್ರತಿಭಟನೆ ಮಾಡುವುದಾಗಿಯೂ ಎಚ್ಚರಿಕೆ ನೀಡಿದೆ.

Join Whatsapp