ಪ್ರಲ್ಹಾದ್ ಜೋಷಿ ಶೃಂಗೇರಿ ಮಠವನ್ನು ಧ್ವಂಸ ಮಾಡಿದ, ಗಾಂಧೀಜಿಯನ್ನು ಹತ್ಯೆ ಮಾಡಿದ ವಂಶಕ್ಕೆ ಸೇರಿದವರು: ಎಚ್.ಡಿ.ಕುಮಾರಸ್ವಾಮಿ ಟೀಕಾಪ್ರಹಾರ

Prasthutha|

► ಬ್ರಾಹ್ಮಣರನ್ನು ಕರ್ನಾಟಕದ ಸಿಎಂ ಮಾಡಲು ಆರೆಸ್ಸೆಸ್ ತೀರ್ಮಾನ

- Advertisement -

ಬೆಂಗಳೂರು: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯನ್ನು ಹತ್ಯೆ ಮಾಡಿದ್ದು ಆರ್ ಎಸ್ ಎಸ್‌. ಅವರು ಬ್ರಾಹ್ಮಣರು, ಅವರು ನಮ್ಮ ಸಾಂಪ್ರದಾಯಿಕ ಕರ್ನಾಟಕ ಬ್ರಾಹ್ಮಣರಂತಲ್ಲ, ಎರಡು ಮೂರು ವಿಭಿನ್ನ ರೀತಿಯ ಬ್ರಾಹ್ಮಣರಿದ್ದಾರೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಷಿ ಹಳೆ ಕರ್ನಾಟಕ ಭಾಗದ ಬ್ರಾಹ್ಮಣರಂತೆ ಸುಸಂಸ್ಕೃತರಲ್ಲ. ಶೃಂಗೇರಿ ಮಠವನ್ನು ಧ್ವಂಸ ಮಾಡಿದ, ಗಾಂಧೀಜಿಯನ್ನು ಹತ್ಯೆ ಮಾಡಿದ ವಂಶಕ್ಕೆ ಸೇರಿದ ಬ್ರಾಹ್ಮಣರು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಕುಮಾರಸ್ವಾಮಿ ಅವರು ಜೋಷಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಉತ್ತರ ಬೆಂಗಳೂರಿನ ದಾಸರಹಳ್ಳಿಯಲ್ಲಿ ನಡೆದ ಜೆಡಿಎಸ್ ಪಂಚರತ್ನ ಯಾತ್ರೆಯಲ್ಲಿ ಮಾತನಾಡಿದ ಅವರು, ಸರ್ವೇ ಜನ ಸುಖಿನೋಭವಂತು ಎಲ್ಲಾ ಜನರ ಸಂತೋಷವನ್ನು ನಂಬಿದ ನಾವು ಸಾಂಪ್ರದಾಯಿಕ ಬ್ರಾಹ್ಮಣರ ಪಾದಗಳಿಗೆ ಗೌರವಪೂರ್ವಕವಾಗಿ ಬೀಳುತ್ತಿದ್ದೆವು, ಆದರೆ ಈ ಬ್ರಾಹ್ಮಣರು ಅವರಲ್ಲ ಎಂದು ಸ್ಪಷ್ಟಪಡಿಸಿದರು.
ಜೋಷಿಯವರು ದಕ್ಷಿಣ ಕರ್ನಾಟಕದ ಬ್ರಾಹ್ಮಣರ ಸಂಸ್ಕೃತಿಯವರಲ್ಲ. ಬ್ರಾಹ್ಮಣ ವೃತ್ತಿ ಮತ್ತು ಸಂಸ್ಕಾರದಲ್ಲಿ ಎರಡು ಮೂರು ವಿಧಗಳಿವೆ. ಶೃಂಗೇರಿ ಮಠವನ್ನು ಅಲ್ಲಿಯ ದೇವರ ವಿಗ್ರಹಗಳನ್ನು ಒಡೆದು ಹಾಕಿದ ಪೇಶ್ವೆ ವಂಶಕ್ಕೆ ಸೇರಿದವರು. ಶೃಂಗೇರಿ ಮಠವನ್ನು ಧ್ವಂಸ ಮಾಡಿದ ದೇಶಸ್ಥ ಬ್ರಾಹ್ಮಣ ವಂಶದವರು ಎಂದು ಟೀಕಾಪ್ರಹಾರ ನಡೆಸಿದರು.
ಬಿಜೆಪಿ ಕುತಂತ್ರಕ್ಕೆ ಯಾರೂ ಬಲಿಯಾಗಬಾರದು. ‘ಬಿಜೆಪಿ ಗೆದ್ದರೆ ಬಿಜೆಪಿಯ ಬೆನ್ನೆಲುಬಾಗಿರುವ ಸಂಘಪರಿವಾರ ಮರಾಠ ಪೇಶ್ವೆ ಸಮುದಾಯದ ವಂಶಸ್ಥರಾದ ಕೇಂದ್ರ ರಸಗೊಬ್ಬರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಮುಖ್ಯಮಂತ್ರಿ ಮಾಡಲು ನಿರ್ಧರಿಸಲಾಗಿದೆ. ಅವರು ನಮ್ಮ ಹಿಂದಿನ ಕಾಲದ ಬ್ರಾಹ್ಮಣರಂತೆ ಅಲ್ಲ. ಶ್ರೇಷ್ಠ ಸಮಾಜ ಸುಧಾರಕ ಶಂಕರಾಚಾರ್ಯರ ವಂಶಸ್ಥರನ್ನು ಶೃಂಗೇರಿ ಶಂಕರ ಮಠದಿಂದ ಹೊರಹಾಕಿದ್ದು ಇದೇ ಸಮುದಾಯದವರೇ. ಮಹಾತ್ಮಾ ಗಾಂಧೀಜಿಯವರ ಹತ್ಯೆ ಮಾಡಿದವರು. ರಾಜ್ಯದಲ್ಲಿ ಸುಮಾರು ಎಂಟು ಉಪಮುಖ್ಯಮಂತ್ರಿಗಳನ್ನು ಹೊಂದಲು ನಿರ್ಧರಿಸಿದ್ದಾರೆ. ಅಗತ್ಯವಿದ್ದರೆ ನಾನು ಎಂಟು ವ್ಯಕ್ತಿಗಳ ಹೆಸರನ್ನು ಬಹಿರಂಗಪಡಿಸಬಲ್ಲೆ, ಬಿಜೆಪಿ ಅಧಿಕಾರಕ್ಕೆ ಬಂದರೆ ಅದು ನಮ್ಮ ರಾಜ್ಯವನ್ನು ನಾಶ ಮಾಡುತ್ತದೆ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಜೋಶಿಯವರು ಪಂಚರತ್ನ ಯಾತ್ರೆಯನ್ನು ಕೀಳಾಗಿ ಬಿಂಬಿಸಲು ಪ್ರಯತ್ನಿಸುತ್ತಿದ್ದು, ಅದು ಒಳ್ಳೆಯದಲ್ಲ. ಮಾರ್ಚ್ ಕೊನೆಯ ವಾರದವರೆಗೆ ಬೆಂಗಳೂರು, ಹಾಸನ ಮೈಸೂರು ಮತ್ತು ವಿವಿಧ ಪ್ರದೇಶಗಳಲ್ಲಿ ಯಾತ್ರೆ ನಡೆಸಲಾಗುವುದು ಎಂದು ಅವರು ಹೇಳಿದರು.

Join Whatsapp