ಬೆಂಗಳೂರು: ವಿನೇಶ್ ಫೋಗಟ್ ಪ್ರಕರಣದಲ್ಲಿ ನಟ ಪ್ರಕಾಶ್ ರಾಜ್ ನಿಲುವಿನ ವಿರುದ್ಧ ನಟ ಚೇತನ್ ಅಹಿಂಸಾ ಕಿಡಿ ಕಾರಿದ್ದಾರೆ.
50 ಕಿಲೋಗಿಂತ 100 ಗ್ರಾಂ ತೂಕ ಹೆಚ್ಚಳವಾದ ಹಿನ್ನೆಲೆ ಪ್ಯಾರಿಸ್ ಒಲಿಂಪಿಕ್ಸ್-2024ರ ಫೈನಲ್ ಕುಸ್ತಿ ಪಂದ್ಯದಿಂದ ಹೊರ ಬಿದ್ದ ವಿನೇಶ್ ಫೋಗಟ್ ಪರ ಪೋಸ್ಟ್ ಹಾಕಿದ್ದ ಪ್ರಕಾಶ್ ರೈ ನಡೆಯನ್ನು ಚೇತನ್ ಟೀಕಿಸಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ ನಿನ್ನೆ ಪ್ರಕಾಶ್ ರಾಜ್ ಕಾರ್ಟೂನ್ ಶೇರ್ ಮಾಡಿಕೊಂಡಿದ್ದರು. ಇದರಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರು ನಿಂತಿರುವ ತೂಕದ ಯಂತ್ರದ ಮೇಲೆ ನಿಂತಿದ್ದು, ಅವರ ಹಿಂಭಾಗದಲ್ಲಿ ಮತ್ತೊಬ್ಬರು ಕಾಲಿನ ಒಂದು ಬೆರಳನ್ನಿಟ್ಟು 100 ಗ್ರಾಮ್ ತೂಕ ಹೆಚ್ಚಾಗುವಂತೆ ಮಾಡಿದ್ದಾರೆ. ಹಿಂದಿರುವ ವ್ಯಕ್ತಿ ಪ್ರಧಾನಿ ಮೋದಿ ಎಂದು ಚಿತ್ರ ಸೂಚಿಸುವಂತಿದೆ. ಮೋದಿಯೇ ವಿನೇಶ್ ಫೋಗಟ್ ಕುಸ್ತಿ ಚಿನ್ನದ ಪದಕದಿಂದ ವಂಚಿತರಾಗಲು ಕಾರಣವಾಗಿದ್ದಾರೆ ಎಂದು ಅರ್ಥ ಬರುವಂತೆ ಈ ಟ್ವೀಟ್ ಶೇರ್ ಮಾಡಿದ್ದರು.
ಇದಕ್ಕೆ ನಟ ಹಾಗೂ ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಕಿಡಿಕಾರಿದ್ದಾರೆ. ʼವಿನೇಶ್ ಫೋಗಟ್ ಅನರ್ಹತೆಗೆ ಪ್ರಧಾನಿ ಮೋದಿ ಕಾರಣ ಎಂದು ಪ್ರಕಾಶ್ ರಾಜ್ ಪೋಸ್ಟ್ ಸಜೆಸ್ಟ್ ಮಾಡುತ್ತದೆ. ಇದು ಸಣ್ಣತನ. ಭಾರತದ ಎಲ್ಲಾ ಲಾಭಗಳಿಗೆ ಮೋದಿಯನ್ನು ಕುರುಡಾಗಿ ಹೊಗಳುವವರು ಹೇಗೆ ಅಜ್ಞಾನಿಗಳೋ, ಹಾಗೆಯೇ ಭಾರತದ ಎಲ್ಲಾ ಸಮಸ್ಯೆಗಳನ್ನು ಮೋದಿಯ ಮೇಲೆ ದೂಷಿಸುವ ರೈ ಅವರಂತಹವರೂ ಅಜ್ಞಾನಿಗಳಾಗಿದ್ದಾರೆ. ಪ್ರಕಾಶ್ ರಾಜ್ ಒಳ್ಳೆಯ ನಟ, ಆದರೆ ಕೆಟ್ಟ ಹೋರಾಟಗಾರʼ ಎಂದು ಟ್ವೀಟ್ ನಲ್ಲಿ ಚೇತನ್ ಬರೆದಿದ್ದಾರೆ.
ಇಬ್ಬರು ನಟರ ಈ ಟ್ವೀಟ್ಟ್ಗಳು ಇದೀಗ ವೈರಲ್ ಆಗುತ್ತಿವೆ. ನೆಟ್ಟಿಗರು ಚೇತನ್ ಕಮೆಂಟ್ಗೂ ಪರ-ವಿರೋಧ ಕಮೆಂಟ್ ಮಾಡುತ್ತಿದ್ದಾರೆ. ಪ್ರಕಾಶ್ ರಾಜ್ ಕೆಟ್ಟ ಹೋರಾಟಗಾರ ಎನ್ನುವುದು ಸರಿಯಲ್ಲ ಎಂದಿದ್ದಾರೆ. ವಿನೇಶ್ ಫೋಗಟ್ ಅನರ್ಹತೆಗೆ ಪ್ರಕಾಶ್ ರಾಜ್ ಎಲ್ಲಿಯೂ ಮೋದಿ ಹೆಸರನ್ನು ಮೆನ್ಷನ್ ಮಾಡಿಲ್ಲ. ಆದರೆ ನೀವೇ ಮೋದಿ ಎಳೆದು ತಂದಿದ್ದೀರಿ ಎಂದು ಕೆಲವರು ಕಮೆಂಟ್ ಮಾಡಿದ್ದಾರೆ.
What do you think …. #justasking pic.twitter.com/Ttf7wDUGIo
— Prakash Raj (@prakashraaj) August 7, 2024