ಹಾಸನ: ಜಿಲ್ಲೆಯ ಸಕಲೇಶಪುರದಲ್ಲಿ ಜೆಡಿಎಸ್-ಬಿಜೆಪಿ ಸಮನ್ವಯ ಸಭೆಯಲ್ಲಿ ಮಾತನಾಡಿದ ಮೈತ್ರಿ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ ಮುಖಂಡರ ಕ್ಷಮೆಯನ್ನು ಬಹಿರಂಗವಾಗಿ ಕೇಳಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ , ನೀವು ಕ್ಷಮಿಸುವುದಾದರೆ ಹೇಳುತ್ತಿದ್ದೇನೆ. ನನ್ನ ಗಮನಕ್ಕೆ ಬಾರದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ, ನಾನು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ. ಆರ್‌ಎಸ್‌ಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನ ಕ್ಷಮಿಸಿ ಅಂತ ಕೇಳ್ತಿನಿ. ನಾನು ಒಬ್ಬ ಯುವಕನಾಗಿ ಹೋರಾಟದ ಮೂಲಕ ಮಾತನಾಡುತ್ತಿದ್ದೆ, ಆದರೆ ಇವತ್ತು ಅರಿವಾಗಿದೆ, ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ.
ನಾನು ಆಯ್ಕೆಯಾದ ಸಂದರ್ಭದಲ್ಲಿ ಕೇವಲ 27 ವರ್ಷ ವಯಸ್ಸು, ಐದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಐದು ವರ್ಷ ಮಾಡಿದ ಕೆಲಸ, ಪ್ರಗತಿ ಬಗ್ಗೆ ಯಾರು ಪ್ರಶ್ನೆ ಮಾಡಲ್ಲ. ಪ್ರಜ್ವಲ್‌ರೇವಣ್ಣ ಗೆದ್ದರೆ ಬಿಜೆಪಿ ಕಾರ್ಯಕರ್ತರನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾನಾ ಎಂಬ ಪ್ರಶ್ನೆ ನಿಮ್ಮಲ್ಲಿದೆ. ನಮ್ಮ ರಾಧಾ ಮೋಹನ್ ದಾಸ್ ಜಿ ಹೇಳಿದ್ದಾರೆ ನಮ್ಮದು ಕಾಂಟ್ರಾಕ್ಟ್ ಮದುವೆ ಅಲ್ಲ ಅಂತ, ಐವತ್ತು, ಅರವತ್ತು ವರ್ಷ ಕೊಂಡೊಯ್ಯುವ ಸಂಬಂಧ ಇದು ಅಂತ ಹೇಳಿದ್ದಾರೆ. ಜೆಡಿಎಸ್-ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಗೌರವಿಸಿ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ ಎಂದು ಮನವಿ ಮಾಡಿದರು.