ಪ್ರಜ್ಞಾಸಿಂಗ್ ಠಾಕೂರ್ ವಿವಾದಾತ್ಮಕ ಹೇಳಿಕೆ: ನೇರವಾಗಿ ಬಂದು ದೂರು ನೀಡುವಂತೆ ಪೊಲೀಸರಿಂದ ನೋಟಿಸ್

Prasthutha|

►ಸುಪ್ರೀಂಕೋರ್ಟ್ ತೀರ್ಪು ಪ್ರಸ್ತಾಪಿಸಿ ಎಸ್.ಪಿ.ಯನ್ನು ತರಾಟೆಗೆ ತೆಗೆದುಕೊಂಡ ನೆಟ್ಟಿಗರು

- Advertisement -

►ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ತಿಳಿದಿಲ್ಲವೇ?

ನವದೆಹಲಿ: ವಿವಾದಾತ್ಮಕ ಹೇಳಿಕೆ ನೀಡಿದ್ದಕ್ಕಾಗಿ ಪ್ರಜ್ಞಾಸಿಂಗ್ ಠಾಕೂರ್ ವಿರುದ್ಧ ಟ್ವಿಟರ್ ಮೂಲಕ ದೂರು ನೀಡಿದ್ದ ದೆಹಲಿಯಲ್ಲಿರುವ ಉದ್ಯಮಿಗೆ ಶಿವಮೊಗ್ಗ ಪೊಲೀಸರು ನೇರವಾಗಿ ಬಂದು ದೂರು ನೀಡಿ ಎಂದು ನೋಟಿಸ್ ಜಾರಿ ಮಾಡಿರುವುದು ಭಾರೀ ಆಕ್ರೋಶಕ್ಕೆ ಕಾರಣವಾಗಿದೆ.

- Advertisement -

ಇತ್ತೀಚೆಗೆ ಶಿವಮೊಗ್ಗದಲ್ಲಿ ನಡೆದ ಹಿಂಜಾವೇ ತ್ರೈ ವಾರ್ಷಿಕ ಸಮ್ಮೇಳನದಲ್ಲಿ ಸಂಸದೆ ಪ್ರಜ್ಞಾಸಿಂಗ್,  ಲವ್ ಜಿಹಾದ್ ಗೆ ಹೆಣ್ಣುಮಕ್ಕಳು ಬಲಿಯಾಗಬೇಡಿ, ತರಕಾರಿ ಕತ್ತರಿಸುವ ಚಾಕುಗಳನ್ನು ಇನ್ನಷ್ಟು ಹರಿತವಾಗಿಸಿ ಸಿದ್ಧವಾಗಿಟ್ಟುಕೊಳ್ಳಿ ಎಂದು ಉದ್ರೇಕಕಾರಿ ಹೇಳಿಕೆ ನೀಡಿದ್ದರು.

ಈ ಸಂಬಂಧ ದ್ವೇಷ ಭಾಷಣದ ಮೂಲಕ ಸಾಮಾಜಿಕ ಸ್ವಾಸ್ಥ್ಯ ಕದಡುವ ಪ್ರಯತ್ನದ ಹಿನ್ನೆಲೆಯಲ್ಲಿ ಸಾದ್ವಿ ವಿರುದ್ಧ ಎಫ್ ಐಆರ್ ದಾಖಲಿಸುವಂತೆ ಉದ್ಯಮಿ ತೆಹಸೀನ್ ಪೂನಾವಾಲಾ ಹಾಗೂ ತೃಣಮೂಲ್ ಕಾಂಗ್ರೆಸ್ ವಕ್ತಾರ ಸಾಕೇತ್ ಗೋಖಲೆ ಟ್ವೀಟ್ ಮೂಲಕ ಶಿವಮೊಗ್ಗ ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಅವರಿಗೆ ಮನವಿ ಮಾಡಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ , ಮಾಹಿತಿಯನ್ನು ಡಿಜಿಟಲ್ ರೂಪದಲ್ಲಿ ಸ್ವೀಕರಿಸಿರುವುದರಿಂದ, ಅದನ್ನು ಕಳುಹಿಸುವ ವ್ಯಕ್ತಿಯ ದೃಢೀಕರಣವನ್ನು ಪರಿಶೀಲಿಸಬೇಕು.  ತೊಂದರೆಗೀಡಾದವರು ಯಾರಾದರೂ ದೂರು ನೀಡಿದರೆ ಕ್ರಮ ಕೈಗೊಳ್ಳಬಹುದು. ಇ–ಮೇಲ್ ಮೂಲಕ  ಎರಡು ದೂರು ಬಂದಿವೆ. ಖುದ್ದಾಗಿ ಹಾಜರಾಗಿ ದೂರು ನೀಡುವಂತೆ ಅವರಿಗೆ ಸೂಚನೆ ನೀಡಿದ್ದೇವೆ. ದೂರಿನ ಪ್ರತಿಗಳನ್ನು ಸಂಬಂಧಿಸಿದ ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ ಎಂದು ಎಸ್ಪಿ ಜಿ.ಕೆ.ಮಿಥುನ್ ಕುಮಾರ್ ಹೇಳಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸಾಕೇತ್ ಗೋಖಲೆ, ಶಿವಮೊಗ್ಗ ಎಸ್ಪಿ ಮತ್ತು ಕರ್ನಾಟಕ ಪೊಲೀಸರು ಬಿಜೆಪಿಯ ಪ್ರಜ್ಞಾ ಠಾಕೂರ್ ಅವರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿರುದ್ಧ ದ್ವೇಷ ಭಾಷಣದ ಎಫ್ ಐಆರ್ ಗಾಗಿ ನನ್ನ ದೂರಿನ ಮೇರೆಗೆ ಶಿವಮೊಗ್ಗ ಪೊಲೀಸರು ನೋಟಿಸ್ ನೀಡಿದ್ದಾರೆ ಮತ್ತು ನಾನು ದೈಹಿಕವಾಗಿ ಹಾಜರಿದ್ದರೆ ಮಾತ್ರ ಎಫ್ ಐಆರ್ ದಾಖಲಿಸಬಹುದು ಎಂದು ಕಾನೂನುಬಾಹಿರವಾಗಿ ಹೇಳಿದ್ದಾರೆ. ಸಂಜ್ಞೇಯ ಅಪರಾಧವನ್ನು ಬಹಿರಂಗಪಡಿಸಿದಾಗ ದೂರುದಾರರ ಉಪಸ್ಥಿತಿಯ ಅಗತ್ಯವಿಲ್ಲ. ಅಪರಾಧವನ್ನು ಬಹಿರಂಗಪಡಿಸಿದರೆ ಅನಾಮಧೇಯ ಸುಳಿವುಗಳ ಮೇಲೂ ಎಫ್ ಐಆರ್ ಗಳನ್ನು ದಾಖಲಿಸಲಾಗುತ್ತದೆ. ಇಂದು ಪ್ರಜ್ಞಾ ಠಾಕೂರ್ ವಿರುದ್ಧ ಎಫ್ ಐಆರ್ ದಾಖಲಿಸದಿದ್ದರೆ ನಾನು ಸುಪ್ರೀಂ ಕೋರ್ಟ್ ಮೊರೆ ಹೋಗುತ್ತೇನೆ ಎಂದು ಟ್ವಿಟರ್ ಮೂಲಕ ಸಾಕೇತ್ ತಿಳಿಸಿದ್ದಾರೆ.

ದ್ವೇಷ ಭಾಷಣ ಮಾಡುವವರ ವಿರುದ್ಧ ಔಪಚಾರಿಕ ದೂರುಗಳಿಗೆ ಕಾಯದೆ ಸುಮೋಟೋ ಪ್ರಕರಣ ದಾಖಲಿಸುವಂತೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತ್ತು. ನಿರ್ದೇಶನಕ್ಕೆ ಅನುಗುಣವಾಗಿ ಕಾರ್ಯ ನಿರ್ವಹಿಸದಿದ್ದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿತ್ತು.

ಕರ್ನಾಟಕದ ಡಿಜೆಪಿಗೆ ಟ್ಯಾಗ್ ಮಾಡಿ ಟ್ವೀಟ್ ಮಾಡಿರುವ ನೆಟ್ಟಿಗರೊಬ್ಬರು, @DgpKarnataka ಸರ್ವೋಚ್ಚ ನ್ಯಾಯಾಲಯದ ತೀರ್ಪಿನ ಬಗ್ಗೆ ಶಿವಮೊಗ್ಗ ಪೊಲೀಸರಿಗೆ ತಿಳಿದಿಲ್ಲವೇ? ನಿಮ್ಮ ಇಲಾಖೆಯ ಅಧಿಕಾರಿಗಳು ಕಾನೂನಿನ ಪ್ರಕಾರ ತಮ್ಮ ಕರ್ತವ್ಯಗಳನ್ನು ನಿರ್ವಹಿಸದೆ ಭಯೋತ್ಪಾದಕ ಸಂಘದ ಕಚೇರಿಯ ಆದೇಶಗಳನ್ನು ಅನುಸರಿಸುತ್ತಿದ್ದಾರೆ ಎಂದು ಈ ನೋಟಿಸ್ ತೋರುತ್ತದೆ ಎಂದು ಟ್ವೀಟಿಸಿದ್ದಾರೆ.



Join Whatsapp