►ಮನೆಯೇ ಇಲ್ಲದವರು ತಿರಂಗಾ ಹಾರಿಸುವುದು ಎಲ್ಲಿ
ಚಿಕ್ಕಬಳ್ಳಾಪುರ: ಸ್ವಾತಂತ್ರ್ಯ ಸಂಗ್ರಾಮಗಳಲ್ಲಿ ಭಾಗಿಯಾಗದವರು, ಅದರ ಗಂಧಗಾಳಿ ತಿಳಿಯದವರು ಇದೀಗ ಮನೆಗಳ ಮೇಲೆ ಧ್ವಜ ಹಾರಿಸಿ ಎಂದು ಹೇಳುತ್ತಿರುವುದು ನಾಚಿಕೆಗೇಡಿನ ವಿಚಾರ ಎಂದು ಜನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್ ಹೇಳಿದ್ದಾರೆ.
ಸಿಪಿಎಂ ರಾಜ್ಯ ಮಟ್ಟದ ರಾಜಕೀಯ ಸಮಾವೇಶದ ಪೂರ್ವಭಾವಿಯ ಸಭೆಯ ಜಾಥಾಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ವಾತಂತ್ರ್ಯದ ಪರಿಕಲ್ಪನೆ ಇಲ್ಲದ ಕೋಮುವಾದಿಗಳ ಕೈಯಲ್ಲಿ ಅಧಿಕಾರ ಇರುವುದರಿಂದ ದೇಶ ಹಾಗೂ ಸಂವಿಧಾನದ ವ್ಯವಸ್ಥೆಗೆ ಗಂಡಾಂತರ ಬಂದಿದೆ ಎಂದು ಹೇಳಿದರು.
ಕೋಮು ಶಕ್ತಿಗಳು ಸಂವಿಧಾನ ವ್ಯವಸ್ಥೆಯನ್ನು ಬುಡಮೇಲು ಮಾಡಲು ಹೊರಟಿದ್ದಾರೆ. ಮನುವಾದ ತೊಲಗಿ ಮಾನವತಾವಾದ ಸೃಷ್ಟಿಯಾಗಬೇಕು ಆಗ್ರಹಿಸಿದರು.
‘ಸ್ವಾತಂತ್ರ್ಯ ಬಂದು 75 ವರ್ಷ ಕಳೆದಿದ್ದರೂ ಇಂದಿಗೂ ತಳಮಟ್ಟ ಮತ್ತು ಬಡತನರೇಖೆಗಿಂತ ಕೆಳಗಿರುವವರಿಗೆ ಕನಿಷ್ಠ ಸೌಲಭ್ಯ ಕಲ್ಪಿಸಿಲ್ಲ. ಇಂದು ಸ್ವಾತಂತ್ರ್ಯ ಅಮೃತ ಮಹೋತ್ಸವ ಪ್ರಯುಕ್ತ ಮನೆಗಳ ಮೇಲೆ ತಿರಂಗಾ ಹಾರಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಗಳಿಗೆ ಸುತ್ತೋಲೆ ಹೊರಡಿಸಿದೆ. ಆದರೆ ಮನೆ ಇಲ್ಲದವರು ತಿರಂಗಾ ಹಾರಿಸುವುದು ಎಲ್ಲಿ’ ಎಂದು ಪ್ರಶ್ನಿಸಿದರು.