ಹಿಂಸಾಚಾರ ಸೃಷ್ಟಿಸುವ ಪ್ರಯತ್ನಗಳ ಬಗ್ಗೆ ಪಾಪ್ಯುಲರ್ ಫ್ರಂಟ್ ಎಚ್ಚರಿಕೆ

Prasthutha|

ಹೊಸದಿಲ್ಲಿ: ದೇಶದ ವಿವಿಧ ಭಾಗಗಳಲ್ಲಿ ಹಿಂಸಾಚಾರವನ್ನು ಸೃಷ್ಟಿಸುವ ಹಿಂದುತ್ವ ಕೋಮುವಾದಿ ಶಕ್ತಿಗಳ ಷಡ್ಯಂತ್ರಗಳ ಮೇಲೆ ಬೆಳಕು ಚೆಲ್ಲಿದ ವಿವಿಧ ಮಾಧ್ಯಮ ವರದಿಗಳ ಬಗ್ಗೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಒ.ಎಂ.ಎ. ಸಲಾಮ್ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.

- Advertisement -


ಸಂಘಪರಿವಾರದ ಶಕ್ತಿಗಳು, ಮುಸ್ಲಿಮರು ಮತ್ತು ಇತರ ಅಲ್ಪಸಂಖ್ಯಾತರ ವಿರುದ್ಧ ತಮ್ಮ ದ್ವೇಷ ಮತ್ತು ಬೆದರಿಕೆ ಅಭಿಯಾನಗಳನ್ನು ತೀವ್ರಗೊಳಿಸಿವೆ. ಮಾತ್ರವಲ್ಲ, ಹಿಂಸಾಚಾರ ಕೃತ್ಯವೆಸಗಲು ತೀವ್ರ ಸಿದ್ಧತೆಗಳಲ್ಲಿವೆ ಎಂಬುದನ್ನು ರಾಷ್ಟ್ರೀಯ ಮತ್ತು ಪ್ರಾದೇಶಿಕ ಮಾಧ್ಯಮಗಳಲ್ಲಿ ಪ್ರಕಟವಾದ ಸುದ್ದಿಗಳು ಸೂಚಿಸುತ್ತಿವೆ.


ಮಥುರಾದಲ್ಲಿರುವ ಶಾಹಿ ಈದ್ಗಾ ಮಸ್ಜಿದನ್ನು ದೇವಾಲಯವಾಗಿ ಪರಿವರ್ತಿಸುವಂತೆ ಕೋರಿ ಸಲ್ಲಿಸಲಾಗಿರುವ ಅರ್ಜಿಯನ್ನು ಸ್ಥಳೀಯ ನ್ಯಾಯಾಲಯವು ಅಂಗೀಕರಿಸಿದ ಸಂದರ್ಭದಲ್ಲೇ, ಹಿಂದುತ್ವ ಸಂಘಟನೆಯೊಂದು 1992ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನವಾದ ಡಿಸೆಂಬರ್ 6ರಂದೇ ಈದ್ಗಾ ಮಸೀದಿಯಲ್ಲಿ ವಿಗ್ರಹವನ್ನು ಇರಿಸುವುದಾಗಿ ಘೋಷಿಸಿದೆ.
ಇದೇ ದಿನಾಂಕವನ್ನು ಆಯ್ಕೆ ಮಾಡಿಕೊಂಡಿರುವುದರ ಉದ್ದೇಶವು, ಅಯೋಧ್ಯೆಯ ಬಾಬರಿ ಮಸ್ಜಿದ್ ನ ವಿಷಯದಲ್ಲಿ ಮಾಡಿದಂತೆ ವಾರಾಣಸಿ ಮತ್ತು ಮಥುರಾದಲ್ಲಿನ ಮಸೀದಿಗಳನ್ನು ಸುಳ್ಳು ಹೇಳಿಕೆಗಳ ಅಡಿಯಲ್ಲಿ ವಶಪಡಿಸಿಕೊಳ್ಳುವ ಲೆಕ್ಕಾಚಾರ ಎಂಬುದು ಬಹಿರಂಗವಾಗಿದೆ.

- Advertisement -


ಐತಿಹಾಸಿಕವಾಗಿ ಪ್ರಮುಖವಾಗಿರುವ ವಾರಣಾಸಿ ಮತ್ತು ಮಥುರಾ ಮಸೀದಿಗಳ ವಿಷಯದಲ್ಲಿ ನಡೆಯುತ್ತಿರುವ ಪ್ರಯತ್ನಗಳು ಬಾಬರಿ ಮಸೀದಿಯನ್ನು ಕೆಡವಲು ಮತ್ತು ಅದೇ ಸ್ಥಳದಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಕಾರಣವಾದ ಘಟನೆಗಳ ಕಾಲಾನುಕ್ರಮಣಿಕೆಯನ್ನು ನಮಗೆ ನೆನಪಿಸುತ್ತದೆ. ಡಿಸೆಂಬರ್ 6ರಂದು ಶಾಹಿ ಈದ್ಗಾ ಮಸೀದಿಯಲ್ಲಿ ವಿಗ್ರಹ ಸ್ಥಾಪನೆಯ ಘೋಷಣೆಯನ್ನು ಹಿಂಪಡೆದುಕೊಂಡ ನಂತರ, ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ಅದೇ ಮಸೀದಿಯನ್ನು ಕೃಷ್ಣ ದೇವಾಲಯವಾಗಿ ಪರಿವರ್ತಿಸಲಾಗುವುದು ಎಂದು ಸ್ಪಷ್ಟವಾಗಿ ಹೇಳಿದ್ದಾರೆ.


ಆರಾಧನಾ ಸ್ಥಳಗಳ (ವಿಶೇಷ ನಿಬಂಧನೆಗಳು) ಕಾಯ್ದೆ, 1991ರ ಪ್ರಕಾರ ಅಸ್ತಿತ್ವದಲ್ಲಿರುವ ಎಲ್ಲಾ ಮಸೀದಿಗಳನ್ನು ಯಥಾಸ್ಥಿತಿಯಲ್ಲಿ ರಕ್ಷಿಸಲು ಸರ್ಕಾರಗಳ ಕರ್ತವ್ಯವಾಗಿದ್ದರೂ ಇವೆಲ್ಲವೂ ನಡೆಯುತ್ತಿವೆ. ಮೇಲಿನ ಕಾನೂನಿನ ಪ್ರಕಾರ ಎಲ್ಲಾ ಮುಸ್ಲಿಂ ಆರಾಧನಾ ಸ್ಥಳಗಳನ್ನು ರಕ್ಷಿಸಲು ನ್ಯಾಯಾಂಗ ಮಧ್ಯಪ್ರವೇಶಿಸಬೇಕು ಎಂದು ಒ.ಎಂ.ಎ. ಸಲಾಮ್ ಕೋರಿದ್ದಾರೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ನಂತಹ ಕೆಲವು ರಾಜ್ಯಗಳಲ್ಲಿ ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವಾಗ, ದೇಶದಲ್ಲಿ ಮತ್ತೊಂದು ಸುತ್ತಿನ ಮುಸ್ಲಿಮ್ ವಿರೋಧಿ ಪ್ರಚಾರ ಮತ್ತು ಕೆಲವು ಸ್ಥಳಗಳಲ್ಲಿ ಮುಸ್ಲಿಮರು ನಮಾಝ್ ಮತ್ತು ಅಝಾನ್ ಗೆ ಬೆದರಿಕೆ ಒಡ್ಡುತ್ತಿರುವ ಘಟನೆಗಳು ನಡೆಯುತ್ತಿವೆ. ಗುರ್ಗಾಂವ್ ನಲ್ಲಿ ಶುಕ್ರವಾರದ ಜುಮಾ ನಮಾಝ್ ಸಲ್ಲಿಸುವುದರ ವಿರುದ್ಧ ಬಿಜೆಪಿ ಸೇರಿದಂತೆ ಹಿಂದುತ್ವ ಗುಂಪುಗಳು ನಿರಂತರವಾಗಿ ಸೃಷ್ಟಿಸಿದ ಅಡಚಣೆಗಳು ಮತ್ತು ಅವರೊಂದಿಗೆ ಆಡಳಿತ ಮತ್ತು ಪೊಲೀಸರ ಸಹಯೋಗವನ್ನು ಸಹ ದೊಡ್ಡ ಕೋಮುವಾದಿ ಕಾರ್ಯಸೂಚಿಯ ಭಾಗವಾಗಿ ನೋಡಬೇಕಾಗಿದೆ.


ಅದೇ ಸಮಯದಲ್ಲಿ ಕೇರಳದಂತಹ ದಕ್ಷಿಣ ರಾಜ್ಯಗಳಲ್ಲಿ ಆರೆಸ್ಸೆಸ್ ನ ಸಭೆಗಳಲ್ಲಿ ಮುಸ್ಲಿಮರ ವಿರುದ್ಧ ದಾಳಿ ಮತ್ತು ನಿರ್ಮೂಲನೆಯ ಬಹಿರಂಗ ಬೆದರಿಕೆಗೆ ಹಾಕುತ್ತಿರುವುದು ನಿರಂತರವಾಗಿ ವರದಿಯಾಗುತ್ತಿವೆ. ದಕ್ಷಿಣ ರಾಜ್ಯಗಳಲ್ಲಿ ಆರೆಸ್ಸೆಸ್ ಶಸ್ತ್ರಾಸ್ತ್ರ ತರಬೇತಿ ಮತ್ತು ಸ್ಫೋಟಕ ತಯಾರಿಕೆಯಲ್ಲಿ ತೊಡಗಿದೆ ಎಂಬ ಇತ್ತೀಚಿನ ವರದಿಗಳು ಸಹ ಆತಂಕಕಾರಿಯಾಗಿವೆ. ಆದರೆ ಪೊಲೀಸರು ಅಂತಹ ಕಾನೂನುಬಾಹಿರ ಕೃತ್ಯಗಳನ್ನು ನಿಗ್ರಹಿಸುವುದು ಮತ್ತು ಅಂತಹ ಘಟನೆಗಳಲ್ಲಿ ಭಾಗಿಯಾಗಿರುವವರನ್ನು ಬಂಧಿಸುವ ಪ್ರಯತ್ನ ನಡೆಸಿಲ್ಲ. ದುರದೃಷ್ಟವಶಾತ್, ಹಿಂಸಾಚಾರವನ್ನು ಸೃಷ್ಟಿಸುವ ಆರೆಸ್ಸೆಸ್ ಪ್ರಯತ್ನವನ್ನು ನಿರ್ಲಕ್ಷಿಸುವ ಮೂಲಕ ದಕ್ಷಿಣದ ರಾಜ್ಯಗಳು ಮತ್ತು ಅವರ ಸರ್ಕಾರಗಳಲ್ಲಿ ಪ್ರಭಾವ ಹೊಂದಿರುವ ಜಾತ್ಯತೀತ ಪಕ್ಷಗಳು ಪರೋಕ್ಷವಾಗಿ ಅವರ ಕಾರ್ಯಸೂಚಿಗೆ ಸಹಾಯ ಮಾಡುತ್ತಿವೆ. ಇದಲ್ಲದೆ, ಕೆಲವು ಪಕ್ಷಗಳು ಜಿಹಾದ್ ಮತ್ತು ಹಲಾಲ್ ನಂತಹ ಇಸ್ಲಾಮಿಕ್ ಪದಗಳನ್ನು ತಪ್ಪಾಗಿ ಅರ್ಥೈಸುವ ಮೂಲಕ ಮುಸ್ಲಿಮರ ವಿರುದ್ಧ ಆರೆಸ್ಸೆಸ್ ನ ಕೆಲವು ಸುಳ್ಳು ಪ್ರಚಾರವನ್ನು ಸಹ ಗಿಳಿಪಾಠ ಮಾಡುತ್ತಿವೆ.
ರಾಜ್ಯ ಸರ್ಕಾರಗಳು, ಆಡಳಿತ ಮತ್ತು ಪೊಲೀಸರು ಪರಿಸ್ಥಿತಿಯ ಗಂಭೀರತೆಯನ್ನು ಅರಿತುಕೊಳ್ಳಬೇಕು ಮತ್ತು ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳಲು ಹಾಗೂ ಸಮಾಜದಲ್ಲಿ ಅವ್ಯವಸ್ಥೆ, ಸಂಘರ್ಷಗಳನ್ನು ಸೃಷ್ಟಿಸಲು ಪ್ರಯತ್ನಿಸುತ್ತಿರುವ ಕೋಮುವಾದಿ ಫ್ಯಾಶಿಸ್ಟ್ ಪ್ರಯತ್ನಗಳನ್ನು ನಿಗ್ರಹಿಸಲು ಎಲ್ಲಾ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಒ.ಎಂ.ಎ. ಸಲಾಮ್ ಒತ್ತಾಯಿಸಿದ್ದಾರೆ.


ಇತರರಲ್ಲಿ ಭೀತಿ ಸೃಷ್ಟಿಸುವ ಮೂಲಕ ಅವರ ಮೇಲೆ ನಿಯಂತ್ರಣ ಸಾಧಿಸುವುದು ಫ್ಯಾಶಿಸ್ಟ್ ಶಕ್ತಿಗಳ ತಂತ್ರವಾಗಿದೆ. ಸಮಾಜದಲ್ಲಿ ಸಾಮರಸ್ಯ ಮತ್ತು ಶಾಂತಿಗೆ ಇರುವ ಏಕೈಕ ಮಾರ್ಗವೆಂದರೆ ಫ್ಯಾಶಿಸ್ಟ್ ಬೆದರಿಕೆಗಳಿಗೆ ಬಲಿಯಾಗದೆ ನ್ಯಾಯ ಮತ್ತು ಹಕ್ಕುಗಳ ಹಾದಿಯಲ್ಲಿ ಸ್ಥಿರವಾಗಿ ನಿಲ್ಲುವುದಾಗಿದೆ. ಕೋಮು ವಿಭಜನೆಗಳನ್ನು ಸೃಷ್ಟಿಸುವ ಪ್ರಯತ್ನಗಳ ಬಗ್ಗೆ ಜಾಗರೂಕರಾಗಿರಬೇಕು ಮತ್ತು ಅಂತಹ ಎಲ್ಲಾ ಫ್ಯಾಶಿಸ್ಟ್ ಯೋಜನೆಗಳನ್ನು ಜಂಟಿಯಾಗಿ ಸೋಲಿಸಲು ಎಲ್ಲಾ ಸಮುದಾಯಗಳಿಗೆ ಸೇರಿದ ನ್ಯಾಯ ಮತ್ತು ಶಾಂತಿಪ್ರಿಯ ಜನರಲ್ಲಿ ಅವರು ಮನವಿ ಮಾಡಿದ್ದಾರೆ.



Join Whatsapp