ಮಂಗಳೂರು । ದೇಶದೆಲ್ಲೆಡೆ ಸಂಘಪರಿವಾರ ನಡೆಸಿದ ಗಲಭೆ ವಿರೋಧಿಸಿ ಪಾಪ್ಯುಲರ್ ಫ್ರಂಟ್ ಪ್ರತಿಭಟನೆ

Prasthutha|

ಮಂಗಳೂರು: ರಾಮನವಮಿಯ ಶೋಭೆಯಾತ್ರೆಯ ನೆಪದಲ್ಲಿ ಸಂಘಪರಿವಾರ ಮುಸ್ಲಿಮರನ್ನು ಗುರಿಯಾಗಿಸಿ ದೇಶದೆಲ್ಲೆಡೆ ನಡೆಸಿದ ಹಿಂಸಾಚಾರ ಮತ್ತು ಗಲಭೆಯನ್ನು ಖಂಡಿಸಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಮಂಗಳೂರು ನಗರ ಸಮಿತಿ, ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಸಿತು.

- Advertisement -

ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಪಿ.ಎಫ್.ಐ ಜಿಲ್ಲಾಧಕ್ಷ ಇಜಾಝ್ ಅಹ್ಮದ್, ರಾಮನವಮಿ ಹೆಸರಿನಲ್ಲಿ ದೇಶದೆಲ್ಲೆಡೆ ಪೂರ್ವಯೋಜಿತವಾಗಿ ನಡೆಸಿದ ಮುಸ್ಲಿಮ್ ವಿರೋಧಿ ಗಲಭೆಯನ್ನು ವಿರೋಧಿಸಿ ಪಿ.ಎಫ್.ಐ ದೇಶಾದ್ಯಂತ ಪ್ರತಿಭಟನೆ ಸಭೆಯನ್ನು ಹಮ್ಮಿಕೊಂಡಿದೆ. ರಾಮನವಮಿಯ ಹೆಸರಿನಲ್ಲಿ ಸಂಘಪರಿವಾರ ಶೋಭೆಯಾತ್ರೆಯ ಮೂಲಕ ಮುಸ್ಲಿಮ್ ಮೊಹಲ್ಲಾಗಳಿಗೆ ಪ್ರವೇಶಿಸಿ, ಪ್ರಚೋದನಾಕಾರಿ ಘೋಷಣೆ ಕೂಗಿ ವ್ಯವಸ್ಥಿತ ಗಲಭೆ ನಡೆಸಿದೆ ಎಂದು ಆರೋಪಿಸಿದರು.

ಪೂರ್ವಯೋಜಿತವಾಗಿ ಸಂಘಪರಿವಾರ ನಡೆಸಿದ ಈ ಗಲಭೆಯನ್ನು ನಿಯಂತ್ರಿಸುವಲ್ಲಿ ರಾಷ್ಟ್ರಪತಿ ಮಧ್ಯಪ್ರವೇಶಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಅವರು ಒತ್ತಾಯಿಸಿದರು.

- Advertisement -

ಪ್ರಸಕ್ತ ಗಲಭೆಯಲ್ಲಿ ಹಲವು ಅಮಾಯಕ ಮುಸ್ಲಿಮರನ್ನು ಬಂಧಿಸಲಾಗಿದ್ದು, ನೂರಾರು ಮನೆಗಳನ್ನು ಧ್ವಂಸಗೈಯ್ಯಲಾಗಿದೆ. ಗಲಭೆಯ ಹಿಂದಿರುವ ಕಾಣದ ಕೈಗಳನ್ನು ಕಾನೂನು ಕ್ರಮ ಜರುಗಿಸಬೇಕು. ಅಮಾಯಕರನ್ನು ತಕ್ಷಣ ಬಿಡುಗಡೆಗೊಳಿಸಿ, ಸಂತ್ರಸ್ತರಿಗೆ ಸೂಕ್ತ ಪರಿಹಾರ ಒದಗಿಸಬೇಕೆಂದು ಅವರು ಆಗ್ರಹಿಸಿದರು.

ವೇದಿಕೆಯಲ್ಲಿ ಮುಖಂಡರಾದ ಹನೀಪ್ ಕಾಟಿಪಳ್ಳ, ಖಾದರ್ ಕುಳಾಯಿ, ಶಹೀದ್ ಕಿನ್ಯಾ, ಝೈನುದ್ದೀನ್ ಹರೇಕಳ ಉಪಸ್ಥಿತರಿದ್ದರು.



Join Whatsapp