ಹೊಸದಿಲ್ಲಿ: ಆಧಾರ್ ಕಾರ್ಡ್ ಅನ್ನು ವೋಟರ್ ಐಡಿಯೊಂದಿಗೆ ಜೋಡಿಸುವ ನಿರ್ಧಾರಕ್ಕೆ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷ ಒ.ಎಂ.ಎ. ಸಲಾಮ್ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಅಂಗೀಕರಿಸಲಾದ ಚುನಾವಣಾ ಕಾನೂನು ತಿದ್ದುಪಡಿ ಮಸೂದೆಯಲ್ಲಿ ಆಧಾರ್ ಅನ್ನು ವೋಟರ್ ಐಡಿಗೆ ಜೋಡಣೆ ಮಾಡುವ ಪ್ರಸ್ತಾಪವು ಗಂಭೀರ ಕಳವಳಗಳನ್ನು ಹುಟ್ಟುಹಾಕುತ್ತವೆ. ಈ ಮಸೂದೆಯು ಸಾರ್ವಜನಿಕ ವಿತರಣಾ ಯೋಜನೆಯನ್ನು ಹೊರತುಪಡಿಸಿ ಬೇರೆ ಯಾವುದೇ ಉದ್ದೇಶಕ್ಕಾಗಿ ಆಧಾರ್ ಬಳಸುವುದನ್ನು ನಿಷೇಧಿಸಿದ 2015ರ ಸುಪ್ರೀಂ ಕೋರ್ಟ್ ಆದೇಶಕ್ಕೆ ವಿರುದ್ಧವಾಗಿದೆ. ಮಾತ್ರವಲ್ಲ ದೇಶದ ಎಲ್ಲಾ ನಾಗರಿಕರಿಗೆ ಆಧಾರ್ ಅನ್ನು ಪರಿಣಾಮಕಾರಿಯಾಗಿ ಕಡ್ಡಾಯಗೊಳಿಸುತ್ತದೆ. ಈ ನಿರ್ಧಾರವು ನಾಗರಿಕರ ಗೌಪ್ಯತೆಯ ಮೂಲಭೂತ ಹಕ್ಕನ್ನು ಸಹ ಪ್ರಶ್ನಿಸುತ್ತದೆ. ಹೆಚ್ಚು ಕಳವಳಕಾರಿ ವಿಷಯವೆಂದರೆ, ಅಧಿಕಾರದಲ್ಲಿರುವವರು ತಮ್ಮ ವಿರುದ್ಧ ಮತ ಚಲಾಯಿಸುತ್ತಾರೆ ಎಂದು ಸಂಶಯ ಪಡುವ ಜನರನ್ನು ಚುನಾವಣೆಯಿಂದ ಹೊರಗಿಡಲು ಮತದಾರರ ಪಟ್ಟಿಗಳನ್ನು ತಿರುಚಲು ದತ್ತಾಂಶಗಳನ್ನು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ಹಿಂದಿನ ಜನಗಣತಿಯ ಪ್ರಕಾರ, ಭಾರತದ ಸಾಕ್ಷರತೆಯ ಪ್ರಮಾಣ ಕೇವಲ ಶೇಕಡಾ 74ರಷ್ಟಿದೆ. ಡಿಜಿಟಲ್ ಇಂಡಿಯಾ ಎಂದು ಕರೆಯಲ್ಪಡುವ ಯೋಜನೆ ಇನ್ನೂ ಬಹುಸಂಖ್ಯಾತ ಭಾರತೀಯರಿಗೆ ತಲುಪಿಲ್ಲ. ಚುನಾವಣಾ ಪ್ರಕ್ರಿಯೆಯನ್ನು ಡಿಜಿಟಲೀಕರಣಗೊಳಿಸುವ ನೆಪವೊಡ್ಡಿ ವೋಟರ್ ಐಡಿಗೆ ಆಧಾರ್ ಜೋಡಣೆ ಮಾಡುವ ಈ ಪ್ರಕ್ರಿಯೆಯು ದೇಶದ ಹೆಚ್ಚಿನ ಭಾಗವನ್ನು ಪ್ರಜಾಪ್ರಭುತ್ವ ಪ್ರಕ್ರಿಯೆಯಿಂದ ಹೊರಗಿಡುತ್ತದೆ. ಆದ್ದರಿಂದ ಕೇಂದ್ರ ಸರ್ಕಾರವು ತಕ್ಷಣವೇ ಈ ನಿರ್ಧಾರವನ್ನು ಹಿಂಪಡೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.