ಕಳಪೆ ಕಾಮಗಾರಿ| ಗುತ್ತಿಗೆದಾರರ ವಿರುದ್ಧ ಲೋಕಾಯುಕ್ತಕ್ಕೆ ದೂರು

Prasthutha|

ಬೆಂಗಳೂರು: ಕಳಪೆ ಹಾಗೂ ಅವೈಜ್ಞಾನಿಕ ಗುಣಮಟ್ಟದ ಕಾಮಗಾರಿಯ ಹಿನ್ನೆಲೆಯಲ್ಲಿ ಗುತ್ತಿಗೆದಾರರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಜನತಾ ಪಾರ್ಟಿ ಲೋಕಾಯುಕ್ತಗೆ ದೂರು ನೀಡಿದೆ.

- Advertisement -

ಬೆಂಗಳೂರು ನಗರ ಬಿಬಿಎಂಪಿ ವ್ಯಾಪ್ತಿಯ ರಾಜಾಜಿನಗರ ಪಶ್ಚಿಮ ಕಾರ್ಡ್ ರಸ್ತೆ, ಮಂಜುನಾಥನಗರದ ಮೇಲ್ಸೇತುವೆ ನಿರ್ಮಾಣವಾಗಿ ಇನ್ನೂ 2 ವರ್ಷ ಕಳೆಯುವ ಮೊದಲೇ ಕಾಮಗಾರಿಯು ಕಳಪೆ ಹಾಗೂ ಅವೈಜ್ಞಾನಿಕ ಗುಣಮಟ್ಟದ್ದಾಗಿದೆ. ಇತ್ತೀಚೆಗೆ ಬಿರುಕುಗೊಂಡು ಸ್ಲ್ಯಾಬ್ ಗಳು ಕಳಚಿಕೊಂಡು ಹೊರಬರುತ್ತಿದ್ದು, ಗಂಭೀರ ಸ್ವರೂಪದ ದುರಂತ ಸಂಭವಿಸುವ ಸಾಧ್ಯತೆಯಿದೆ. ಈ ಕುರಿತು ತಕ್ಷಣ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಗುತ್ತಿಗೆದಾರರಾದ ಮೆ|| ಎಂ.ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಟ್ಸ್ ರವರ ವಿರುದ್ಧ ದೂರು ದಾಖಲಿಸಿಕೊಂಡು ಮಹಾದುರಂತವನ್ನು ತಪ್ಪಿಸಬೇಕೆಂದು ಜನತಾ ಪಾರ್ಟಿ ಲೋಕಾಯುಕ್ತರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಜನತಾ ಪಾರ್ಟಿ ಬೆಂಗಳೂರು ಅಧ್ಯಕ್ಷರಾದ ನಾಗೇಶ್ ಎನ್, ಮಂಜುನಾಥನಗರದ ಮೇಲ್ಸೇತುವೆಯ ಕಾಮಗಾರಿಯು ಪೂರ್ಣಗೊಂಡು ಇನ್ನೂ ಎರಡು ವರ್ಷಗಳೂ ಕಳೆದಿರುವುದಿಲ್ಲ. ಅಷ್ಟರಲ್ಲಾಗಲೇ ಸದರಿ ಮೇಲ್ಸೇತುವೆಯಲ್ಲಿ ಆಳವಾದ ಬಿರುಕುಗಳು ಕಂಡುಬಂದಿದ್ದು, ಇದರ ಪರಿಣಾಮವಾಗಿ ಸರ್ವೀಸ್ ರಸ್ತೆಗೆ ಹೊಂದಿಕೊಂಡಿರುವ ಸದರಿ ಮೇಲ್ಸೇತುವೆಯ ಎರಡೂ ಬದಿಯ ಸ್ಲ್ಯಾಬ್ ಗಳು ಕಳಚಿಕೊಂಡು ಯಾವುದೇ ಕ್ಷಣದಲ್ಲಿ ಬೀಳುವ ಸಂಭವವಿದೆ. ಇದರಿಂದಾಗಿ ಮೇಲ್ಸೇತುವೆಯ ಮೇಲ್ಭಾಗದಲ್ಲಿ ಚಲಿಸುವ ವಾಹನಗಳು ಮಾತ್ರವಲ್ಲದೆ, ಸರ್ವಿಸ್ ರಸ್ತೆ ಸೇರಿದಂತೆ ಅಕ್ಕಪಕ್ಕದ ಜನನಿಬಿಡ ಪ್ರದೇಶಗಳಲ್ಲಿ ಅಪಾಯ ಸಂಭವಿಸುವ ಸಾಧ್ಯತೆ ಹೆಚ್ಚಾಗಿದೆ. ಶಾಲಾ ಮಕ್ಕಳು, ವಯೋವೃದ್ಧರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರ ಜೀವಹಾನಿಯ ಜೊತೆಗೆ ವಾಹನಗಳು, ಜಾನುವಾರುಗಳಿಗೂ, ಆಸ್ತಿಪಾಸ್ತಿಗಳಿಗೂ ಧಕ್ಕೆಯಾಗಲಿದೆ. ಇತ್ತೀಚಿನ ಮಳೆಯಿಂದಾಗಿ ಭಾರೀ ವಾಹನಗಳು ಸದರಿ ಮೇಲ್ಸೇತುವೆಯಲ್ಲಿ ಚಲಿಸುತ್ತಿರುವುದರಿಂದ ಎರಡೂ ಬದಿಯ ಸ್ಲ್ಯಾಬ್ಗಳು ಯಾವುದೇ ಕ್ಷಣದಲ್ಲಿ ಕಳಚಿಬೀಳುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

- Advertisement -


ಇದಕ್ಕೆಲ್ಲ ಮೂಲ ಕಾರಣವೆಂದರೆ, ಮೇಲ್ಸೇತುವೆಯನ್ನು ಬೇಜವಾಬ್ದಾರಿತನದಿಂದ ಕಳಪೆ ಹಾಗೂ ಅವೈಜ್ಞಾನಿಕ ಗುಣಮಟ್ಟದಲ್ಲಿ ಕಾಮಗಾರಿಯನ್ನು ನಿರ್ಮಿಸಿರುವುದು. ಸದರಿ ಕಾಮಗಾರಿಯ ಗುತ್ತಿಗೆಯನ್ನು ಮೆ|| ಎಂ. ವೆಂಕಟರಾವ್ ಇನ್ಫ್ರಾ ಪ್ರಾಜೆಕ್ಸ್ಟ್ ಪ್ರೈ.ಲಿ. ಎಂಬ ಸಂಸ್ಥೆಗೆ ನೀಡಿದ್ದು, ಸದರಿ ಕಾಮಗಾರಿಗೆ ಸುಮಾರು ರೂ.24 ಕೋಟಿಯಷ್ಟು ಹಣವನ್ನು ನೀಡಲಾಗಿದೆ. ಕಾಮಗಾರಿ ನಿರ್ಮಾಣ ಹಂತದಿಂದ ಮೊದಲ್ಗೊಂಡು ಪೂರ್ಣಗೊಂಡು ಸಾರ್ವಜನಿರಿಗೆ ಮುಕ್ತವಾಗುವ ಮುನ್ನ ಸಂಬಂಧಪಟ್ಟ ಸರ್ಕಾರಿ ಅಧಿಕಾರಿಗಳು ಕಾಲಕಾಲಕ್ಕೆ ಕಾಮಗಾರಿಯ ಉಸ್ತುವಾರಿ ಹಾಗೂ ಸ್ಥಳ ಪರಿಶೀಲನೆ ಮತ್ತು ತಾಂತ್ರಿಕ ಗುಣಮಟ್ಟವನ್ನು ಪರೀಕ್ಷಿಸದೆ ಗುತ್ತಿಗೆದಾರರೊಂದಿಗೆ ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡುಬಂದಿರುತ್ತದೆ. ಸಾರ್ವಜನಿಕರ ತೆರಿಗೆಯ ಹಣವನ್ನು ಇಂತಹ ಬೇಜಾವಾಬ್ದಾರಿ ಅಧಿಕಾರಿಗಳು ಮತ್ತು ಗುತ್ತಿಗೆದಾರರು ಪೋಲು ಮಾಡಿರುವುದು ಎಷ್ಟರಮಟ್ಟಿಗೆ ಸರಿ? ಎಂದು ಪ್ರಶ್ನಿಸಿದ್ದಾರೆ.


ಆದ್ದರಿಂದ ಮೇಲ್ಸೇತುವೆಯು ಕುಸಿಯುವ ಮುನ್ನವೇ ಶೀಘ್ರ ಕಾರ್ಯಪ್ರವೃತ್ತರಾಗಿ ಸಂಬಂಧಪಟ್ಟವರ ಮೇಲೆ ಕ್ರಿಮಿನಲ್ ದೂರು ದಾಖಲಿಸಿಕೊಂಡು, ಅವರುಗಳಿಂದ ದಾಖಲೆಗಳನ್ನು ತಕ್ಷಣ ಮುಟ್ಟುಗೋಲು ಹಾಕಿಕೊಂಡು ಸೂಕ್ತ ತನಿಖೆ ನಡೆಸಿ, ಇಂತಹ ಭ್ರಷ್ಟ ಅಧಿಕಾರಿಗಳು ಹಾಗೂ ಬೇಜವಾಬ್ದಾರಿ ಗುತ್ತಿಗೆದಾರರ ಮೇಲೆ ಕಾನೂನುಕ್ರಮ ಕೈಗೊಂಡು, ಮುಂದಾಗಬಹುದಾದ ಮಹಾದುರಂತವನ್ನು ತಪ್ಪಿಸಿ ಸಾರ್ವಜನಿಕರ ಜೀವ ಹಾಗೂ ಆಸ್ತಿಪಾಸ್ತಿಗಳಿಗೆ ನಷ್ಟವುಂಟಾಗುವುದನ್ನು ತಪ್ಪಿಸಿ, ನ್ಯಾಯ ದೊರಕಿಸಬೇಕೆಂದು ಒತ್ತಾಯಿಸಿದ್ದಾರೆ.


ಇದೇ ಸಂದರ್ಭದಲ್ಲಿ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಕುಮಾರ್ , ಮುಖಂಡರಾದ ಡಾ: ಮಂಜುನಾಥ್ , ರಾಜ್ಯ ಯುವ ಘಟಕ ಅಧ್ಯಕ್ಷ ಭಾಸ್ಕರ್ , ರಾಜ್ಯ ಅಲ್ಪಸಂಖ್ಯಾತ ಘಟಕ ಅಧ್ಯಕ್ಷರ ಹುಸೇನ್ ಸಾಬ್ ಕೇರೂರು , ಇನ್ನೂ ಮುಂತಾದ ಮುಖಂಡರು ಭಾಗವಹಿಸಿದ್ದರು.

Join Whatsapp