►ನೂತನ ರಾಷ್ಟ್ರೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಪ್ ಇಂಡಿಯಾಕ್ಕೆ ಚಾಲನೆ
ಬೆಂಗಳೂರು: ರಾಜಕೀಯ ಕ್ಷೇತ್ರ ಇಂದು ಕಲುಷಿತವಾಗಿದೆ. ಜನರ ಪರಿಜ್ಞಾನ ಹಾಗೂ ಸಹಕಾರ ಮನೋಭಾವನೆಯಿಂದ ಇದು ಶುದ್ದೀಕರಣವಾಗಬೇಕು. ರಾಜಕಾರಣಿಗಳು ನಾಯಕರಾಗದೇ ಪ್ರಜೆಗಳ ಸೇವಕರಾಗಿ ಕೆಲಸ ಮಾಡಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ಹೇಳಿದ್ದಾರೆ.
ಬೆಂಗಳೂರಿನ ವಸಂತನಗರದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ದಲಿತ ಸಂಘರ್ಷ ಸಮಿತಿ ಸಹಯೋಗದಲ್ಲಿ ಆಯೋಜಿಸಲಾಗಿದ್ದ ನೂತನ ರಾಷ್ಟ್ರೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಭಾರತ) ಉದ್ಘಾಟಿಸಿ ಮತ್ತು ಐತಿಹಾಸಿಕ ಸಮಾವೇಶಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಎಲ್ಲ ಪಕ್ಷಗಳು ಭ್ರಷ್ಟಾಚಾರದಲ್ಲಿ ಮುಳುಗಿವೆ. ದೇಶದ ರಾಜಕೀಯ ನಾಯಕರುಗಳು, ಪ್ರಜಾ ನಾಯಕರು ಆನ್ನುವ ಭ್ರಮೆಯಿಂದ ಹೊರಬಂದು ಪ್ರಜಾ ಸೇವಕರಾಗಿ ಕೆಲಸ ಮಾಡಬೇಕು. ಜನಸೇವೆ ಮಾಡಬೇಕು ಆಗ ದೇಶ ಅಭಿವೃದ್ಧಿ ಹೊಂದಲು ಸಾಧ್ಯ. ನೂತನ ಚಿಂತನೆ, ಜನಸೇವೆ ಮಾಡಲು ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಪಾರ್ಟಿ ಇಂದು ಉದ್ಘಾಟನೆಯಾಗಿದೆ. ಪಾರ್ಟಿ ಜನಸೇವೆ ಮಾಡುವ ಶಕ್ತಿ ಸಿಗಲಿ, ಇದೇ ಮೊದಲ ಬಾರಿಗೆ ನನ್ನಗೆ ಒಂದು ರಾಜಕೀಯ ಪಕ್ಷಕ್ಕೆ ಚಾಲನೆ ನೀಡುವ ಅವಕಾಶ ದೊರೆತಿದೆ ಎಂದರು.
ನೂತನ ರಾಜಕೀಯ ಪಕ್ಷ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾದ (ಭಾರತ) ರಾಷ್ಟ್ರಿಯ ಅಧ್ಯಕ್ಷರಾಗಿ ದಲಿತ ಸಂಘರ್ಷ ಸಮಿತಿಯ ಅಧ್ಯಕ್ಷ, ದಾದಾ ಸಾಹೇಬ ಡಾ.ಎನ್.ಮೂರ್ತಿ ಆಯ್ಕೆಯಾದರು.
ಬಳಿಕ ಮಾತನಾಡಿದ ಡಾ.ಎನ್.ಮಾರ್ತಿ, ಬಡವರು, ಶೋಷಿತರಿಗೆ ನ್ಯಾಯ ಒದಗಿಸಲು ಮತ್ತು ಜನಪರ ಸರ್ಕಾರ ನೀಡಬೇಕು ಎಂದು ಹೊಸ ಚಿಂತನೆ ಮೂಲಕ ರಾಷ್ಟ್ರಿಯ ಪಕ್ಷ ಉದಯವಾಗಿದೆ. 1956ರಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಂದ ಸ್ಥಾಪನೆಯಾದ ಪಕ್ಷವಾಗಿದ್ದು, ಇದಕ್ಕೆ ಚುನಾವಣಾ ಆಯೋಗ ಮರು ಸ್ಥಾಪನೆಗೆ ಅವಕಾಶ ನೀಡಿದೆ. ಈ ಹಿನ್ನಲೆಯಲ್ಲಿ ಚುನಾವಣಾ ಆಯೋಗಕ್ಕೆ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ರಾಷ್ಟ್ರಿಯ ಪಕ್ಷಗಳಾದ ಬಿ.ಜೆ.ಪಿ. ಮತ್ತು ಕಾಂಗ್ರೆಸ್ ಪಕ್ಷಗಳು ಜನರ ವಿಶ್ವಾಸಕ್ಕೆ ದ್ರೋಹ ಬಗೆದಿವೆ. ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75ನೇ ಅಮೃತ ಮಹೋತ್ಸವವನ್ನು ಅಚರಿಸುತ್ತಿದ್ದೇವೆ. ಅದರೂ ಬಡವರು, ದಲಿತರು ಮತ್ತು ಹಿಂದುಳಿದ ವರ್ಗದವರಿಗೆ ಸಾಮಾಜಿಕ ನ್ಯಾಯ ದೊರಕಿಲ್ಲ. ಕೇವಲ ರಾಜಕಾರಣಿಗಳ ಭರವಸೆಗಳು ಭರವಸೆಗಳಾಗಿ ಮುಂದುವರೆಯುತ್ತಿವೆ ಎಂದು ತಿಳಿಸಿದರು.
ಶಿಕ್ಷಣ, ಉದ್ಯೋಗ ಮತ್ತು ರಾಜಕೀಯ ಕ್ಷೇತ್ರಗಳು ಶ್ರೀಮಂತರ ಪಾಲಾಗಿದೆ. ಪ್ರತಿಯೊಂದು ಕಾಮಗಾರಿಯಲ್ಲಿ ಶೇಕಡ 40ರಿಂದ 50ಪರ್ಸೆಂಟ್ ಲಂಚ ಕೊಡಬೇಕಾದ ವಾತಾವರಣ ಇಂದಿನ ಸರ್ಕಾರದಲ್ಲಿದೆ. ಭ್ರಷ್ಟಾಚಾರ ಮುಗಿಲು ಮುಟ್ಟಿದೆ ಎಂದರು.
ಶೇಕಡ 85ರಷ್ಟು ಮತದಾರರು ಎಸ್.ಸಿ./ಎಸ್.ಟಿ.ಮತ್ತು ಒ.ಬಿ.ಸಿ.ಮತದಾರರು ಇದ್ದಾರೆ. ಈ ಮತದಾರರು ಸಂಘಟನೆಯಿಂದ ಒಟ್ಟಾದರೆ ಅಧಿಕಾರ ಹಿಡಿಯಲು ಸಾಧ್ಯ .ಅಧಿಕಾರ ಬಡವರ, ಶೋಷಿತರ ಕೈಯಲ್ಲಿ ಇದ್ದಾಗ ಮಾತ್ರ ದೇಶ ಅಭಿವೃದ್ದಿ ಸಾಧ್ಯ ಎಂದು ಹೇಳಿದರು.
ನೂತನ ಪಕ್ಷ ಉದ್ಘಾಟನೆಯಲ್ಲಿ ವಿವಿಧ ರಾಜ್ಯಗಳ ಪ್ರತಿನಿಧಿಗಳು ಮತ್ತು ವಿವಿಧ ಜಿಲ್ಲೆಗಳ ಪ್ರತಿನಿಧಿಗಳು ಕಾರ್ಯಕರ್ತರು ಸಾವಿರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.