ಬೆಂಗಳೂರು: ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ ಅವರನ್ನು ಸಂಸದ ಸ್ಥಾನದಿಂದ ಅನರ್ಹಗೊಳಿಸಲಾಗಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಕಿಡಿಕಾರಿದ್ದಾರೆ.
ಸದಾಶಿವನಗರ ನಿವಾಸ ಬಳಿ ಮಾಧ್ಯಮಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿದ ಶಿವಕುಮಾರ್ ಅವರು, ‘ಕರ್ನಾಟಕದಲ್ಲಿ ಇಬ್ಬರು ಬಿಜೆಪಿ ಶಾಸಕರು ಚೆಕ್ ಬೌನ್ಸ್ ಹಾಗೂ ಇತರೆ ಪ್ರಕರಣದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ. ಅವರನ್ನು ಅನರ್ಹಗೊಳಿಸಿಲ್ಲ ಯಾಕೆ? ಅವರಿಗೆ ಬೇರೆ, ನಮಗೆ ಬೇರೆ ಕಾನೂನು ಇದೆಯೇ? ರಾಜಕೀಯ ದ್ವೇಷದಿಂದ ರಾಹುಲ್ ಗಾಂಧಿ ಅವರನ್ನು ಅನರ್ಹಗೊಳಿಸಿದ್ದು, ಸಂವಿಧಾನ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಮೇಲೆ ದಾಳಿ ಮಾಡಲಾಗಿದೆ. ನಾವು ಇದನ್ನು ಖಂಡಿಸುತ್ತೇವೆ. ನ್ಯಾಯಾಲಯದಲ್ಲಿ ಈ ವಿಚಾರವಾಗಿ ಹೋರಾಟ ಮಾಡುತ್ತೇವೆ. ನಮಗೆ ನ್ಯಾಯ ಸಿಗುವ ಭರವಸೆ ಇದೆ’ ಎಂದು ತಿಳಿಸಿದರು.
ಇನ್ನು ಮುಂಬರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಬಗ್ಗೆ ಮಾತನಾಡಿದ ಶಿವಕುಮಾರ್ ಅವರು, ‘ ಎಲ್ಲರೂ ಯುಗಾದಿ ಚಂದ್ರನ ನೋಡಲು ಕಾಯುತ್ತಿದ್ದರು. ಅದರಂತೆ ಮೊದಲ ಪಟ್ಟಿ ಬಿಡುಗಡೆ ಮಾಡಲಾಗಿದ್ದು, ಮುಂದಿನ ಮೂರ್ನಾಲ್ಕು ದಿನಗಳಲ್ಲಿ ಎರಡನೇ ಪಟ್ಟಿ ಪ್ರಕಟಿಸಲಾಗುವುದು. ಆ ಮೂಲಕ ಚಂದ್ರನ ಹಿಂದೆ ಸೂರ್ಯನ ಬೆಳಕು ಆಗಮಿಸಲಿದೆ’ ಎಂದು ತಿಳಿಸಿದರು.
‘ಬಹುತೇಕ ಶೇ. 95 ರಷ್ಟು ಹಾಲಿ ಶಾಸಕರಿಗೇ ಟಿಕೆಟ್ ಸಿಗಲಿದೆ. ಕೆಲವು ಕ್ಷೇತ್ರಗಳಲ್ಲಿ ಮಾತುಕತೆ ಸಂಧಾನ ನಡೆಯುತ್ತಿದ್ದು, ಎರಡನೇ ಪಟ್ಟಿಯಲ್ಲಿ ಉಳಿದ ಹೆಸರುಗಳು ಪ್ರಕಟವಾಗಲಿವೆ’ ಎಂದು ತಿಳಿಸಿದರು.
ಧ್ರುವನಾರಾಯಣ ಅವರ ಪುತ್ರನಿಗೆ ಟಿಕೆಟ್ ನೀಡಿರುವ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಈ ಕ್ಷೇತ್ರದಲ್ಲಿ ಧ್ರುವನಾರಾಯಣ ಅವರು ಸ್ಪರ್ಧಿಸಬೇಕಿತ್ತು. ಆದರೆ ಅವರು ನಮ್ಮನ್ನು ಅಗಲಿದ್ದಾರೆ. ಹೀಗಾಗಿ ಯುವಕರಾದ ಅವರ ಪುತ್ರನಿಗೆ ಟಿಕೆಟ್ ನೀಡಿದ್ದೇವೆ.
ವಿರೋಧದ ನಡುವೆ ಪುಟ್ಟಣ್ಣ ಅವರಿಗೆ ಟಿಕೆಟ್ ನೀಡಿರುವ ಬಗ್ಗೆ ಕೇಳಿದಾಗ, ‘ ಪುಟ್ಟಣ್ಣ ಅವರು ನಾಲ್ಕೂವರೆ ವರ್ಷಗಳ ಪರಿಷತ್ ಅಧಿಕಾರ ತ್ಯಜಿಸಿ ಪಕ್ಷ ಸೇರಿದ್ದಾರೆ. ಹೀಗಾಗಿ ಅವರಿಗೆ ಒಂದು ಅವಕಾಶ ಕಲ್ಪಿಸಲು ಪಕ್ಷ ತೀರ್ಮಾನಿಸಿದೆ ‘ ಎಂದು ತಿಳಿಸಿದರು.
ತೀರ್ಥಹಳ್ಳಿ ಸೇರಿದಂತೆ ಪ್ರಮುಖ ಸಂಧಾನ ಕ್ಷೇತ್ರಗಳಲ್ಲಿ ಟಿಕೆಟ್ ಪ್ರಕಟಿಸದಿರುವ ಬಗ್ಗೆ ಕೇಳಿದಾಗ, ‘ಎಲ್ಲವೂ ಸರಿ ಹೋಗಲಿದೆ ‘ ಎಂದು ತಿಳಿಸಿದರು.
ಸಿದ್ದರಾಮಯ್ಯ ಅವರು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವ ವಿಚಾರವಾಗಿ ಕೇಳಿದಾಗ, ‘ಕ್ಷೇತ್ರ ಆಯ್ಕೆಯನ್ನು ಸಿದ್ದರಾಮಯ್ಯನವರ ವಿವೇಚನೆಗೆ ಬಿಡಲಾಗಿತ್ತು. ಅವರು ವರುಣಾದಿಂದ ಸ್ಪರ್ಧಿಸಲು ಇಚ್ಚಿಸಿದ್ದು, ಪಕ್ಷ ಟಿಕೆಟ್ ನೀಡಿದೆ’ ಎಂದು ತಿಳಿಸಿದರು.
ಕೋಲಾರ ಹಾಗೂ ಬಾದಾಮಿ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಯಾಗದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರು ಮತ್ತೊಂದು ಕ್ಷೇತ್ರದಿಂದ ಸ್ಪರ್ಧಿಸಬಹುದೇ ಎಂದು ಕೇಳಿದಾಗ, ‘ ಈ ಪ್ರಶ್ನೆಯನ್ನು ಪಕ್ಷದ ಹೈಕಮಾಂಡ್ ಗೆ ಕೇಳಬೇಕು’ ಎಂದು ತಿಳಿಸಿದರು.
ಅಪಾರ್ಟಮೆಂಟ್ ನಿವಾಸಿಗಳ ಸಭೆ ಕುರಿತು ಕೇಳಿದ ಪ್ರಶ್ನೆಗೆ, ‘ ಬೆಂಗಳೂರು ಅಭಿವೃದ್ಧಿಯಾಗುತ್ತಿರುವ ಪ್ರದೇಶ. ಇಲ್ಲಿ ಸಂಚಾರ ದಟ್ಟಣೆ ಸೇರಿದಂತೆ ಅನೇಕ ಸಮಸ್ಯೆಗಳಿದ್ದು, ಅವರ ಸಮಸ್ಯೆಗಳನ್ನು ಆಲಿಸಿ ಅವುಗಳಿಗೆ ಪರಿಹಾರ ರೂಪಿಸಲು ಪ್ರಯತ್ನ ಮಾಡುತ್ತಿದ್ದೇವೆ ‘ ಎಂದು ತಿಳಿಸಿದರು.
ಮೀಸಲಾತಿ ಬೋಗಸ್
ಮೀಸಲಾತಿ ಹೆಚ್ಚಳ ವಿಚಾರವಾಗಿ ಕೇಳಿದ ಪ್ರಶ್ನೆಗೆ, ‘ ಇದೆಲ್ಲವೂ ಬೋಗಸ್ ಘೋಷಣೆ. ರಾಜ್ಯದ ಜನರನ್ನು ಮೂರ್ಖರನ್ನಾಗಿಸುವ ಪ್ರಯತ್ನ ‘ ಎಂದು ತಿಳಿಸಿದರು.