ಗಾಝಾ: ಯುದ್ಧಪೀಡಿತ ಗಾಝಾದಲ್ಲಿ ಪೋಲಿಯೊ ಪ್ರಕರಣವೊಂದು ವರದಿಯಾಗಿದೆ ಎಂದು ಪ್ಯಾಲೆಸ್ತೀನ್‌ನ ಆರೋಗ್ಯ ಸಚಿವಾಲಯ ತಿಳಿಸಿದೆ. ಕಳೆದ 25 ವರ್ಷಗಳಲ್ಲೇ ಮೊದಲ ಬಾರಿಗೆ ಪ್ರಕರಣ ಪತ್ತೆಯಾಗಿದೆ.
ಪ್ಯಾಲೆಸ್ತೀನ್‌ನಲ್ಲಿ ಪೋಲಿಯೊ ಹಾವಳಿಯ ಭೀತಿ ಎದುರಿಸುತ್ತಿರುವ 6.40 ಲಕ್ಷಕ್ಕೂ ಅಧಿಕ ಮಕ್ಕಳಿಗೆ ಲಸಿಕೆ ನೀಡುವುದಕ್ಕೆ ಅವಕಾಶ ಮಾಡಿಕೊಡಲು ಯುದ್ಧವನ್ನು ನಿಲ್ಲಿಸುವಂತೆ ವಿಶ್ವಸಂಸ್ಥೆಯ ಆಂಟೊನಿಯೊ ಗುಟೆರಸ್ ಇಸ್ರೇಲ್ ಹಾಗೂ ಹಮಾಸ್‌ಗೆ ಕರೆ ನೀಡಿದ್ದರು. ಅದರ ಬೆನ್ನಲ್ಲೇ ಈ ಪ್ರಕರಣ ವರದಿಯಾಗಿದೆ. ಗಾಝಾ ಪಟ್ಟಿಯಾದ್ಯಂತ ಆಗಸ್ಟ್ ತಿಂಗಳ ಕೊನೆಯಲ್ಲಿ ಹಾಗೂ ಸೆಪ್ಟೆಂಬರ್ ತಿಂಗಳಿನಲ್ಲಿ ಟೈಪ್2 ಪೋಲಿಯೊ ನಿರೋಧಕ ಲಸಿಕೀಕರಣಕ್ಕೆ ಎರಡು ಸುತ್ತುಗಳನ್ನು ಆರಂಬಿಸುವ ಯೋಜನೆಯನ್ನು ಡಬ್ಲ್ಯುಎಚ್‌ಓ ಹಾಗೂ ಯುನಿಸೆಫ್ ಹೊಂದಿದೆ. ಇದಕ್ಕಾಗಿ ಯುದ್ಧವನ್ನು ನಿಲ್ಲಿಸುವಂತೆ ಆಂಟೊನಿಯೊ ಗುಟೆರಸ್ ಇಸ್ರೇಲ್ ಹಾಗೂ ಹಮಾಸ್‌ಗೆ ಕರೆ ನೀಡಿದ್ದರು.
ಜೂನ್ ತಿಂಗಳಲ್ಲಿ ಗಾಝಾ ಪ್ರದೇಶದ ತ್ಯಾಜ್ಯ ನೀರಿನಲ್ಲಿ ಸಂಗ್ರಹಿಸಲ್ಪಟ್ಟ ಮಾದರಿಗಳಲ್ಲಿ ಟೈಪ್ 2 ಪೋಲಿಯೊ ವೈರಸ್ ಪತ್ತೆಯಾಗಿದೆಯೆಂದು ದಿ ಗಾರ್ಡಿಯನ್ ವರದಿ ಮಾಡಿತ್ತು.